ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಮಹತ್ವ ನೀಡಿ

KannadaprabhaNewsNetwork |  
Published : Dec 09, 2024, 12:48 AM IST
ಚಿತ್ರಕಲಾ ಸ್ಪರ್ಧೆ | Kannada Prabha

ಸಾರಾಂಶ

ಚುಮು ಚುಮು ಚಳಿಯಲ್ಲಿ, ಹಗಲು ಅಲ್ಪ ರಾತ್ರಿ ದೀರ್ಘವಾಗಿದ್ದರೂ ಬೆಳಿಗ್ಗೆ ಎದ್ದೇಳಲೂ ಮನಸ್ಸಾಗದಿದ್ದರೂ ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆಗೆ ತುಮಕೂರು ಜಿಲ್ಲೆಯ ನಾನಾ ಶಾಲೆಗಳಿಂದ ಮಕ್ಕಳು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೆರೆದಿದ್ದರು.

ಕನ್ನಡಪ್ರಭ ವಾರ್ತೆ ತುಮಕೂರುಚುಮು ಚುಮು ಚಳಿಯಲ್ಲಿ, ಹಗಲು ಅಲ್ಪ ರಾತ್ರಿ ದೀರ್ಘವಾಗಿದ್ದರೂ ಬೆಳಿಗ್ಗೆ ಎದ್ದೇಳಲೂ ಮನಸ್ಸಾಗದಿದ್ದರೂ ಸ್ಥಳದಲ್ಲಿಯೇ ಚಿತ್ರ ಬರೆಯುವ ಸ್ಪರ್ಧೆಗೆ ತುಮಕೂರು ಜಿಲ್ಲೆಯ ನಾನಾ ಶಾಲೆಗಳಿಂದ ಮಕ್ಕಳು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೆರೆದಿದ್ದರು.

ನಸುಕಿನಲ್ಲಿ ಮರೆಯಾದ ನಕ್ಷತ್ರಗಳೆಲ್ಲ ಭುವಿಗಿಳಿದು ಎಂಜಿನಿಯರಿಂಗ್ ಕಾಲೇಜಿಗೆ ಆವರಣಕ್ಕೆ ನೇರ ಬಂದಿಳಿದವೇನೋ ಎನ್ನುವ ರೀತಿಯಲ್ಲಿ ಮಕ್ಕಳು ಚಿತ್ರ ಬಿಡಿಸಲು ತಯಾರಾಗಿ ಬಂದಿದ್ದು, ಕಣ್ಣಿಗೆ ಹಬ್ಬ ಉಂಟು ಮಾಡಿತ್ತು. ಈ ದೃಶ್ಯ ಕಂಡು ಬಂದಿದ್ದು, ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ. ಶಿಕ್ಷಣ ಭೀಷ್ಮ ದಿವಂಗತ ಡಾ. ಎಚ್.ಎಂ. ಗಂಗಾಧರಯ್ಯನವರ ಸ್ಮರಣಾರ್ಥ ತುಮಕೂರು ಜಿಲ್ಲೆಯ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆ ಕಾರ್ಯಕ್ರಮ ಅಂತಾರಾಷ್ಟೀಯ ಚಿತ್ರಕಲಾವಿದ ಸೂರ್ಯನಾರಾಯಣ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಸೃಷ್ಟಿಕರ್ತ ಪ್ರಕೃತಿಯನ್ನು ಸೃಷ್ಟಿಸಿದ್ದಾನೆ. ಸೃಷ್ಟಿಯಲ್ಲಿನ ಅಂದವನ್ನು ಚಿತ್ರಿಸಲು ಕಲಾವಿದರನ್ನು ಸೃಷ್ಟಿಸಿದ್ದಾನೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನವಾಗಿ ಮಹತ್ವ ನೀಡಬೇಕು ಎಂದರು.

ವಿದ್ಯಾರ್ಥಿಗಳು ಚಿತ್ರಕಲೆ ಅಭ್ಯಾಸ ಮಾಡುವುದರಿಂದ ವ್ಯಕ್ತಿತ್ವ ವಿಕಸನ, ಸೃಜನಾತ್ಮಕತೆ ಹೆಚ್ಚಾಗುತ್ತದೆ. ನಾವು ಧರಿಸುವ ಉಡುಪು, ಮಾತು, ಹಾವಭಾವ, ಬಣ್ಣ, ವಿನ್ಯಾಸ, ದೇವಾಲಯಗಳು ನಮ್ಮ ಸಂಸ್ಕೃತಿ ಎಲ್ಲದರಲ್ಲೂ ಚಿತ್ರಕಲೆ ಇದೆ. ನಾವು ಪೂಜಿಸುವ ದೇವರ ವಿಗ್ರಹ ಕೂಡ ಒಬ್ಬ ಶಿಲ್ಪಿ ನಿರ್ಮಿಸಿದ ಶಿಲ್ಪಕಲೆ ಎಂದು ಅವರು ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಅಂತಾರಾಷ್ಟೀಯ ಚಿತ್ರಕಲಾವಿದರಾದ ಸೂರ್ಯನಾರಾಯಣ್ ಅವರು ಗೌತಮ ಬುದ್ಧ ಚಿತ್ರಬಿಡಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ತುಮಕೂರು ಜಿಲ್ಲೆಯ ಸುಮಾರು 120 ಶಾಲೆಯ 5 ಸಾವಿರ ಶಾಲಾ ಮಕ್ಕಳು ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಗೌರ್ನಿಂಗ್ ಸದಸ್ಯರಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಸಾಹೇ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝೆಡ್ ಕುರಿಯನ್, ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ, ಎಸ್‌ಎಸ್‌ಐಟಿಯ ಡೀನ್ (ಅಕಾಡೆಮಿಕ್) ಡಾ.ರೇಣುಕಾ ಲತಾ, ಸಂಯೋಜಕರುಗಳಾದ ಡಾ.ರಾಜು ಎ.ಎಸ್ ಡಾ.ಸುನಿಲ್, ಬಿಬಿಎಂ ಪ್ರಾಂಶುಪಾಲರಾದ ಡಾ ಮಮತ, ಎಂಬಿಎ ಪ್ರಾಂಶುಪಾಲರಾದ ಡಾ.ಅಜಮತ್‌ವುಲ್ಲಾ, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತಾ, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ