ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಎನ್ನುತ್ತ ಎಡವಬಾರದು, ನೆಲದ ಸಂಸ್ಕೃತಿ, ಸೊಗಡಿನ ಕತೆಗಳಿಗೆ ಮಹತ್ವ ಕೊಡಬೇಕು ಎಂದು ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.ಗುರುವಾರ ನಯನ ಸಭಾಂಗಣದಲ್ಲಿ ಶ್ರೀ ವರದರಾಜು ಆತ್ಮೀಯರ ಬಳಗದಿಂದ 18ನೇ ವರ್ಷದ ‘ಎಸ್.ಪಿ.ವರದರಾಜು ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಅವರು ಮಾತನಾಡಿದರು.
ಬರೀ ಪ್ಯಾನ್ ಇಂಡಿಯಾ ಕತೆ ಎನ್ನುತ್ತ ಹುಡುಕಿ ಹೋದರೆ ಎಡವುತ್ತೇವೆ. ಪ್ರಾದೇಶಿಕವಾದುದೇ ಜಾಗತಿಕವಾಗುತ್ತದೆ ಎಂಬ ಮಾತನ್ನು ನಾವು ಮರೆಯಬಾರದು. ಸಾರ್ವಕಾಲಿಕ ಮೆಚ್ಚುಗೆ ಗಳಿಸಿದ ಕನ್ನಡದ ‘ಕಸ್ತೂರಿ ನಿವಾಸ’, ‘ಭೂತಯ್ಯನ ಮಗ ಅಯ್ಯು’ ಚಲನಚಿತ್ರಗಳ ಸೊಗಡು, ಆತ್ಮ ಕನ್ನಡದ್ದು. ಇಂತಹ ಚಿತ್ರಗಳಾಗಲು ಕಾರಣರಾದ ವರದರಾಜು ಅವರು ಪಾರಂಪರಿಕ ಮೌಲ್ಯ ಎತ್ತಿ ಹಿಡಿವ ಕೆಲಸ ಮಾಡಿದ್ದರು. ಹಣದ ಹಿಂದೆ ಹೋಗದೆ, ಕೊಟ್ಟ ಮಾತಿಗೆ ನಿಲ್ಲುತ್ತಿದ್ದ ಅವರ ನಿಲುವುಗಳು ಈಗಿನ ಸಮಾಜಕ್ಕೆ ಮಾದರಿ ಎಂದು ಬಣ್ಣಿಸಿದರು.ನಟ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ನಮಗೆ ಈಗಿನ ಕಾಲದ ಕತೆ ಕೇಳಿ ಅರ್ಥೈಸಿಕೊಳ್ಳುವುದು ಕಷ್ಟ. ಆದರೆ, ಸದಾ ಅಪ್‌ಡೇಟ್ ಆಗಿರುತ್ತಿದ್ದ ವರದರಾಜು ಅವರು ಮೂರ್ನಾಲ್ಕು ದಶಕಗಳ ಕಾಲ ಅಪ್ಪಾಜಿ, ಶಿವಣ್ಣ, ನನಗೆ ಹಾಗೂ ಪುನೀತ್ ಚಿತ್ರಕತೆಗಳನ್ನೂ ಕೇಳಿ ಅರ್ಥ ಮಾಡಿಕೊಂಡಿದ್ದು ಮಾತ್ರವಲ್ಲ, ತಾವೇ ತಿದ್ದುತ್ತಿದ್ದರು. ರಂಗಭೂಮಿ ಏನು ಕೊಡುತ್ತದೆ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ, ಅಪ್ಪಾಜಿ ರಂಗಭೂಮಿಯಿಂದಲೇ ಶರೀರ, ಶಾರೀರ ಹಾಗೂ ಭಾಷೆ ಕಲಿತು ಕೊನೆಯ ಚಿತ್ರದವರೆಗೂ ಕಾಪಿಟ್ಟುಕೊಂಡಿದ್ದರು ಎಂದು ಹೇಳಿದರು.
ಆಶಯ ನುಡಿದ ಡಾ। ಬರಗೂರು ರಾಮಚಂದ್ರಪ್ಪ, ವರದರಾಜು ಅವರು ತೆರೆಯ ಮೇಲೆ ಬಂದವರಲ್ಲ. ಕೇವಲ ರಾಜಕುಮಾರ್ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ಅವರ ಕೊಡುಗೆ ಇದೆ. ಅವರು ಪ್ರೇಕ್ಷಕ ಕೇಂದ್ರಿತ ವಿವೇಕದಿಂದ, ಸದಭಿರುಚಿಯ ಚಿತ್ರಗಳನ್ನು ಜನತೆಗೆ ತಲುಪಿಸಿದರೆ, ಡಾ। ರಾಜಕುಮಾರ್ ಜನಕೇಂದ್ರೀತವಾಗಿ ಸಮಾಜ ಸೇವೆಯಲ್ಲಿ ತೊಡಗಿದರು. ಮುಂದೆ ಪುನೀತ್ ಕೂಡ ಇದೇ ಹಾದಿಯಲ್ಲಿ ಸಾಗಿದ್ದನ್ನು ಮರೆಯುವ ಹಾಗಿಲ್ಲ ಎಂದರು.ಪ್ರಶಸ್ತಿ ಪ್ರದಾನನಿರ್ದೇಶಕ ಗಿರೀಶ್ ಕಾಸರವಳ್ಳಿ ಸೇರಿದಂತೆ ಗಣ್ಯರು, ರಂಗಭೂಮಿ ಕಲಾವಿದೆ ಅನ್ನಪೂರ್ಣ ಸಾಗರ ಹಾಗೂ ನಿರ್ದೇಶಕ ಬಿ. ಮಲ್ಲೇಶ್ ಅವರಿಗೆ ‘ಎಸ್.ಪಿ.ವರದರಾಜು ಪ್ರಶಸ್ತಿ’ ಪ್ರದಾನ ಮಾಡಿದರು. ವರದರಾಜು ಕುಟುಂಬಸ್ಥರು ಪ್ರಶಸ್ತಿ ಪುರಸ್ಕೃತರಿಗೆ ಗೌರವ ಧನ ನೀಡಿ ಸನ್ಮಾನಿಸಿದರು.