ಶ್ರೀಗಂಧದ ಕುಶಲಕರ್ಮಿಗಳಿಗೆ ನ್ಯಾಯ ಒದಗಿಸಿ

KannadaprabhaNewsNetwork | Published : Dec 14, 2023 1:30 AM

ಸಾರಾಂಶ

ಡಚ್ ಸರ್ಕಾರ ಹಾಗೂ ವಿಶ್ವ ಯೋಜನೆಯಡಿಯಲ್ಲಿ ವಸತಿ ಮತ್ತು ಕಾರ್ಯಾಗಾರವನ್ನು ನಿರ್ಮಿಸಿಕೊಟ್ಟಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ಹಣದ ವ್ಯವಹಾರಗಳು ಮುಗಿದು ೧೦ ವರ್ಷಗಳು ಕಳೆದರೂ ಕುಶಲಕರ್ಮಿಗಳ ಹೆಸರಿಗೆ ವರ್ಗಾಯಿಸಿಕೊಡದೇ, ಅನ್ಯಾಯ ಮಾಡಿದೆ.

ಶಿರಸಿ:

ಶ್ರೀಗಂಧ ಕರ-ಕುಶಲಕರ್ಮಿಗಳ ಬದುಕು ಈಗ ಮೂರಾಬಟ್ಟೆಯಾಗಿದೆ. ಮೂಲಭೂತ ಸೌಕರ್ಯ, ಶ್ರೀಗಂಧದ ಉತ್ಪನ್ನಗಳಿಗೆ ಯೋಗ್ಯ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕರಕುಶಲಕರ್ಮಿಗಳು ಪ್ರತಿಭಟನೆ ನಡೆಸಿ, ಯೋಜನಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.

ನಗರದ ಶ್ರೀಗಂಧ ಸಂಕೀರ್ಣದಲ್ಲಿ ೧೫೦ ಶ್ರೀಗಂಧದ ಕುಶಲಕರ್ಮಿಗಳಿದ್ದು, ಈ ಉದ್ಯೋಗವನ್ನು ನಂಬಿ ಕುಟುಂಬವು ಜೀವನ ನಡೆಸುತ್ತಿದೆ. ಆದರೆ ಹಲವು ವರ್ಷಗಳಿಂದ ಶ್ರೀಗಂಧದ ಕೊರತೆಯಿಂದ ಕೆಲಸವಿಲ್ಲದೇ ಕುಶಲ ಕರ್ಮಿಗಳು ಪರದಾಡುವಂತಾಗಿದೆ. ಇತರೆ ಮರದ ಕೆತ್ತನೆ ವಸ್ತು ತಯಾರಿಸುತ್ತ ಜೀವನ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿಯಾಗಲಿ, ಸಹಾಯವಾಗಲಿ, ಸಹಕಾರವಾಗಲಿ ಲಭಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಡಚ್ ಸರ್ಕಾರ ಹಾಗೂ ವಿಶ್ವ ಯೋಜನೆಯಡಿಯಲ್ಲಿ ವಸತಿ ಮತ್ತು ಕಾರ್ಯಾಗಾರವನ್ನು ನಿರ್ಮಿಸಿಕೊಟ್ಟಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ಹಣದ ವ್ಯವಹಾರಗಳು ಮುಗಿದು ೧೦ ವರ್ಷಗಳು ಕಳೆದರೂ ಕುಶಲಕರ್ಮಿಗಳ ಹೆಸರಿಗೆ ವರ್ಗಾಯಿಸಿಕೊಡದೇ, ಅನ್ಯಾಯ ಮಾಡಿದೆ. ಮೌಖಿಕ ಹಾಗೂ ಲಿಖಿತವಾಗಿ ವಿಷಯವನ್ನು ನಿಗಮದ ಗಮನಕ್ಕೆ ತಂದರೂ ಕ್ರಮ ತೆಗೆದುಕೊಳ್ಳದಿರುವುದು ದುಃಖಕರ ವಿಷಯ. ಶಿರಸಿ ಶ್ರೀಗಂಧ ಸಂಕೀರ್ಣದಲ್ಲಿ ರಸ್ತೆ, ಒಳಚರಂಡಿ, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯದಿಂದ ಜನರು ವಂಚಿತರಾಗಿದ್ದಾರೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವು ಹೊರ ರಾಜ್ಯದ ವಸ್ತುಗಳನ್ನು ವ್ಯಾಪಾರ ಮಾಡುತ್ತಿದ್ದು, ನಮ್ಮ ಸ್ಥಳೀಯ ಕಲಾಕೃತಿಗಳನ್ನು ಕಡೆಗಣಿಸಲಾಗಿದೆ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀಗಂಧದ ಕರಕುಶಲಕರ್ಮಿ ತೀರಿಕೊಂಡ ಸಂದರ್ಭದಲ್ಲಿ ಶವ ಸಂಸ್ಕಾರಕ್ಕಾಗಿ ₹ ೧೦ ಸಾವಿರ ಗೌರವಧನ ನಿಗಮ ನೀಡುತ್ತಿದ್ದು, ಈ ಹಣದಿಂದ ಇಂದಿನ ದಿನಗಳಲ್ಲಿ ಶವ ಸಂಸ್ಕಾರ ಮಾಡುವುದು ಕಠಿಣವಾಗಿದ್ದು, ಕನಿಷ್ಠ ₹ ೨೫ ಸಾವಿರಕ್ಕೆ ಏರಿಕೆ ಮಾಡಬೇಕು. ೬೦ ವರ್ಷ ಮೇಲ್ಪಟ್ಟ ಕುಶಲಕರ್ಮಿಗಳಿಗೆ ಕಣ್ಣು ಕಾಣದೇ ಕೆಲಸ ಮಾಡಲು ಅಶಕ್ತರಾಗಿದ್ದು, ಅಂತಹವರಿಗೆ ನಿಗಮದಿಂದ ಮಾಸಾಶನ ನೀಡಬೇಕು. ಮರಣ ಹೊಂದಿದ ಕುಶಲಕರ್ಮಿಗಳ ಗುರುತಿನ ಚೀಟಿಯನ್ನು ಕುಟುಂಬದವರಿಗೆ ವರ್ಗಾಯಿಸಬೇಕು. ನಿಗಮದ ನಿರ್ದೇಶಕ ಮಂಡಳಿಯಲ್ಲಿ ಒಂದು ಕುಶಲಕರ್ಮಿಯನ್ನು ನಿರ್ದೇಶಕರಾಗಿ ನೇಮಿಸಬೇಕು. ಎಲ್ಲ ತಾಲೂಕಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದ್ದು, ನಮ್ಮ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಯೋಜನಾಧಿಕಾರಿ ಗಣೇಶ ಮನವಿ ಸ್ವೀಕರಿಸಿ, ಮೇಲಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಶ್ರೀಗಂಧ ಕುಶಲಕರ್ಮಿಗಳ ಹೋರಾಟದ ಸಂಘದ ಶಿರಸಿ ವಿಭಾಗದ ಅಧ್ಯಕ್ಷ ಮಹೇಶ ಗುಡಿಗಾರ, ಉಪಾಧ್ಯಕ್ಷ ಮಂಜುನಾಥ ಶೇಟ್, ಕುಶಲಕರ್ಮಿಗಳಾದ ನಾರಾಯಣಪ್ಪ ಗುಡಿಗಾರ, ನಂದನ ಸಾಗರ, ರವಿ ಶಿರ್ಸಿಕರ, ಸಾಗರದ ದೀಪಕ ಮರೂರು, ಅಣ್ಣಪ್ಪ ಗುಡಿಗಾರ, ಜಗದೀಶ ಗುಡಿಗಾರ ಇದ್ದರು.

Share this article