ಕಾಂಗ್ರೆಸ್‌ ನೀತಿ, ಕಪ್ಪು ಹಣದ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : Dec 14, 2023, 01:30 AM IST
ಸಿಕೆಬಿ-1 ಕಪ್ಪು ಹಣ ಮತ್ತು ಕಾಂಗ್ರೆಸ್‌ ಧೋರಣೆ ವಿರುದ್ದ ಬಿಜೆಪಿಯಿಂದ  ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು  | Kannada Prabha

ಸಾರಾಂಶ

ಕಾಂಗ್ರೆಸ್‌ ನೀತಿ, ಕಪ್ಪು ಹಣದ ವಿರುದ್ಧ ಪ್ರತಿಭಟನೆಕಾಂಗ್ರೆಸ್‌ನಿಂದ ನಿರಂತರ ಭ್ರಷ್ಟಾಚಾರ: ಪಕ್ಷದ ಜಿಲ್ಲಾಧ್ಯಕ್ಷ ಡಿ.ರಾಮಲಿಂಗಪ್ಪ ಆರೋಪ । ರಾಜ್ಯ ಸರ್ಕಾರ ನಿಷ್ಕ್ರಿಯ

ಕಾಂಗ್ರೆಸ್‌ನಿಂದ ನಿರಂತರ ಭ್ರಷ್ಟಾಚಾರ: ಪಕ್ಷದ ಜಿಲ್ಲಾಧ್ಯಕ್ಷ ಡಿ.ರಾಮಲಿಂಗಪ್ಪ ಆರೋಪ । ರಾಜ್ಯ ಸರ್ಕಾರ ನಿಷ್ಕ್ರಿಯಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಾರ್ಖಂಡ್‌ನ ಸಂಸದ ಧೀರಜ್‌ ಪ್ರಸಾದ್ ಸಾಹು ಅವರಿಗೆ ಸೇರಿದ್ದು ಎನ್ನಲಾದ ಉದ್ಯಮಗಳ ಸಮೂಹದಿಂದ ಐಟಿ ಅಧಿಕಾರಿಗಳು ಕೋಟ್ಯಂತರ ರುಪಾಯಿ ಹಣ ಜಪ್ತಿ ಮಾಡಿರುವ ಪ್ರಕರಣ ಕಾಂಗ್ರೆಸ್‌ನಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಾಮಲಿಂಗಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮುಖಂಡರು ಮತ್ತು ಕಾರ್ಯಕರ್ತರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ಮೂಲಕ ಕೆಲ ಕಾಲ ರಸ್ತೆ ತಡೆ ನಡೆಸಿ, ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು, ಧೀರಜ್‌ ಪ್ರಸಾದ್ ಸಾಹು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಪ್ರಧಾನಿ ಮೋದಿ ಗ್ಯಾರಂಟಿ

ಜಾರ್ಖಂಡ್ ಸಂಸದ ಧೀರಜ್‌ ಪ್ರಸಾದ್ ಸಾಹು ಬಳಿ 350 ಕೋಟಿಗೂ ಹೆಚ್ಚು ಕಪ್ಪು ಹಣ ಹೇಗೆ ಬಂತು, ಕಾಂಗ್ರೆಸ್‌ನ ಆಡಳಿತಾವಧಿಯಲ್ಲಿ ದೇಶವನ್ನು ದಿವಾಳಿ ಮಾಡಿ ಶೇ.40 ಲಂಚ ವಸೂಲಿ ಮಾಡಿದ್ದು ಜಾರ್ಖಂಡ್ ನಲ್ಲಿ ಸಿಕ್ಕಿದೆ,‘ಭ್ರಷ್ಟಾಚಾರಿಗಳು ಸಿಕ್ಕಿಬೀಳುತ್ತಾರೆ ಎಂಬುದು ಪ್ರಧಾನಿ ಮೋದಿಯವರ ಗ್ಯಾರಂಟಿಯಾಗಿದೆ. ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತಿವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಾಮಲಿಂಗಪ್ಪ ಹೇಳಿದರು.

ಬಿಜೆಪಿ ಆಡಳಿತವಿದ್ದಾಗ ಆಧಾರ ರಹಿತ ಆರೋಪ ಮಾಡಿದ್ದ ಕಾಂಗ್ರೆಸಿಗರು ಇಂದು ಸಾಕ್ಷ್ಯ ಸಮೇತ ಸಿಕ್ಕಿಬೀಳುತ್ತಿದ್ದಾರೆ. ಸುಳ್ಳು ಗ್ಯಾರಂಟಿ , ಸುಳ್ಳು ಆರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಲ್ಲಿ ಇಂದು ಗುತ್ತಿಗೆ, ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪಂಚರಾಜ್ಯ ಚುನಾವಣೆಯ ವೆಚ್ಚಕ್ಕೆ ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಆಗಿ ಬಳಸಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ನಿಷ್ಕ್ರಿಯ

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮುಖಂಡ ಮುನಿರಾಜು ಮಾತನಾಡಿ, ಕರ್ನಾಟಕ ರಾಜ್ಯ ಭಯೋತ್ಪಾದಕರು, ಕೊಲೆಗಡುಗರ ಕೇಂದ್ರವಾಗುತ್ತಿದೆ‌. ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ. 68 ಶಾಲೆಗಳಿಗೆ ಬಾಂಬ್ ಕರೆ ಬಂದಿತ್ತು. ಇಂತಹ ದೇಶದ್ರೋಹಿಗಳನ್ನು ರಾಜ್ಯ ಸರ್ಕಾರ ಇವರನ್ನು ಹತ್ತಿಕ್ಕುವಲ್ಲಿ ವಿಫಲವಾಗಿದೆ. ಜಾತಿ ಜಾತಿಗಳ ಮಧ್ಯೆ ಒಡಕು ಮೂಡಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.

ಹೈನುಗಾರರಿಗೆ ನ್ಯಾಯ ಒದಗಿಸಿ

ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಜಿಲ್ಲೆಯಲ್ಲಿ ಹೈನುಗಾರರಿಗೆ ಆಗುತ್ತಿರುವ ಅನ್ಯಾಯ ಕಣ್ಣಿಗೆ ಕಾಣುತ್ತಿಲ್ಲ. ಕೋಚಿಮುಲ್ ರೈತರ ಹಾಲಿನ ಖರೀದಿ ದರವನ್ನು ಲೀಟರ್‌ ಗೆ 3.50 ರು.ಗಳನ್ನು ಕಡಿತಮಾಡಿರುವುದು, ಮೊದಲೇ ಬರದಿಂದ ಕೆಂಗೆಟ್ಟಿರುವ ಅನ್ನದಾತನಿಗೆ ಬರೆ ಎಳೆದಂತೆ ಮಾಡಿದೆ. ಸರ್ಕಾರ ಕೂಡಲೆ ಹೈನುಗಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಓತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ವೇಣುಗೋಪಾಲ್‌, ಎವಿ.ಬೈರೇಗೌಡ, ನಗರ ಅಧ್ಯಕ್ಷ ಆನಂದ ಅನು. ಪ್ರೇಮ ಲೀಲಾ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಗೌರಿಬಿದನೂರು ನಗರಸಭೆ ಸದಸ್ಯ ಮೋಹನ್‌, ಚಿಕ್ಕಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಕೊಂಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳೀಧರ್, ಕಾರ್ಯದರ್ಶಿ ಅಶೋಕ್ ಕುಮಾರ್‌, ಬಾಲು, ರೈತ ಮೋರ್ಚಾ ಮಾಜಿ ಅಧ್ಯಕ್ಷ ದೇವಸ್ಥಾನದ ಹೊಸಹಳ್ಳಿ ರಾಮಣ್ಣ, ನಾರಾಯಣಗೌಡ ಮತ್ತಿತರರು ಇದ್ದರು.

ಸಿಕೆಬಿ-1 ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ವತಿಯಿಂದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ