ನೊಂದ ಮಹಿಳೆಯರಿಗೆ ಕಾನೂನು ನೆರವು ನೀಡಿ: ನ್ಯಾ. ಶಾಂತವೀರ ಶಿವಪ್ಪ

KannadaprabhaNewsNetwork | Published : Feb 23, 2024 1:51 AM

ಸಾರಾಂಶ

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಕಾಯ್ದೆಯ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಕುರಿತು ತರಬೇತಿ ಕಾರ್ಯಕ್ರಮ ಉಡುಪಿಯಲ್ಲಿ ನಡೆಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶಾಂತವೀರ ಶಿವಪ್ಪ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿಕೌಟುಂಬಿಕೆ ಹಿಂಸೆಯಿಂದ ನೊಂದ ಮಹಿಳೆಯರಿಗೆ ಸಂಬಂಧಿತ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ಸಾಂತ್ವನ ಹೇಳುವುದರ ಜೊತೆಗೆ ಕಾನೂನು, ವೈದ್ಯಕೀಯ ಮತ್ತಿತರ ನೆರವು ನೀಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶಾಂತವೀರ ಶಿವಪ್ಪ ಹೇಳಿದರು.

ಅವರು ಗುರುವಾರ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಹಭಾಗಿತ್ವದಲ್ಲಿ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ಕಾಯ್ದೆಯ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು ಅನುಷ್ಠಾನಾಧಿಕಾರಿಗಳು ಅವುಗಳಲ್ಲಿ ಸತ್ಯಾಸತ್ಯತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪರಿಹಾರ ಒದಗಿಸಬೇಕು. ಕೆಲವೊಮ್ಮೆ ಸುಳ್ಳು ಪ್ರಕರಣಗಳು ಆಗುವ ಸಾಧ್ಯತೆ ಇರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ, ಸಾಮಾನ್ಯವಾಗಿ ಮಹಿಳೆಯರು ಸಾಕಷ್ಟು ಹಿಂಸೆಯನ್ನು ತಡೆದುಕೊಂಡು ತಮ್ಮ ಕುಟುಂಬದ ಗೌರವವನ್ನು ಎತ್ತಿ ಹಿಡಿಯಲು ಮುಂದಾಗುತ್ತಾರೆ. ಹಿಂಸೆ ಅತಿಯಾದಾಗ ಮಾತ್ರ ಅವರು ರಕ್ಷಣೆ ಕೋರಿ ಬರುತ್ತಾರೆ. ಅವರಲ್ಲಿ ದೈಹಿಕ ಹಿಂಸೆಗಿಂತ ಮಾನಸಿಕ ಹಿಂಸೆ ಹೆಚ್ಚು ತೊಂದರೆ ಉಂಟು ಮಾಡುತ್ತದೆ. ಅಂತಹ ಮಹಿಳೆಯರಿಗೆ ಪೊಲೀಸ್ ಹಾಗೂ ಸಾಂತ್ವನ ಕೇಂದ್ರಗಳು ಧೈರ್ಯ ತುಂಬಿ ಅಗತ್ಯ ನೆರವನ್ನು ಒದಗಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ನ್ಯಾಯಾಧೀಶರಾದ ಜೀತು ಆರ್.ಎಸ್., ವಿಘ್ನೇಶ್ ಕುಮಾರ್, ಹಿರಿಯ ನ್ಯಾಯವಾದಿ ಬಿ. ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ನಿರೂಪಿಸಿದರು. ಲತಾ ನಾಯಕ್ ವಂದಿಸಿದರು.

Share this article