ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನ ಸಭಾಗೃಹದಲ್ಲಿ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಪುರಸಭೆ ಸದಸ್ಯ ಮಹಾವೀರ ನಿಲಜಗಿ, ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ರವೀಂದ್ರ ಹಿಡಕಲ್, ಹಿರಿಯ ನ್ಯಾಯವಾದಿ ಬಿ.ಕೆ.ಮಗೆನ್ನವರ, ಶ್ರೀಶೈಲ ಮಠಪತಿ ಸೇರಿದಂತೆ ಬಹುತೇಕ ಮುಖಂಡರು, ರಮೇಶ ಕತ್ತಿ ಅವರ ಸಾಮಾಜಿಕ ಸೇವೆ ಪರಿಗಣಿಸಿ ಅವರಿಗೆ ಲೋಕಸಭೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದಿನ ಚಿಕ್ಕೋಡಿ ಲೋಕಸಭೆ ಕ್ಷೇತ್ರ, ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ರಮೇಶ ಕತ್ತಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಆದರೂ ಪಕ್ಷದ ವರಿಷ್ಠರ ಮೇಲೆ ಧೃತಿಗೆಡದೇ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಸಂಘ ಪರಿವಾರದ ಅನೇಕ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ರಮೇಶ ಕತ್ತಿಗೆ ಬೆಳಗಾವಿ ಇಲ್ಲವೇ ಚಿಕ್ಕೋಡಿ ಬಿಜೆಪಿ ಎಂಪಿ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.2009 ರಿಂದ 2014ರ ಅವಧಿಯಲ್ಲಿ ರಮೇಶ ಕತ್ತಿ ಅವರು ಚಿಕ್ಕೋಡಿ ಕ್ಷೇತ್ರದ ಸಂಸದರಾಗಿ ಮನೆ ಮಾತಾಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಸುಮಾರು ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಜಿಲ್ಲೆಯ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರಾಜಕೀಯ ಹಿನ್ನಲೆ, ಅನುಭವ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಹೀಗೆ ವಿವಿಧ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆ ಗುರುತಿಸಿ ರಮೇಶ ಕತ್ತಿಗೆ ಲೋಕಸಭೆ ಟಿಕೆಟ್ ನೀಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.