ಬೆಂಗಳೂರು : ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳ‍ೆ ಬಾರದಿರುವುದರಿಂದ ಬಿತ್ತನೆಗೆ ಭಾರೀ ಹಿನ್ನಡೆ ಉಂಟಾಗಿದೆ. ಮುಂಗಾರು ಹಂಗಾಮಿನಲ್ಲಿ 84.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಇಲಾಖೆ ಬಿತ್ತನೆಯ ಗುರಿ ಹೊಂದಿದ್ದರೂ ಇಲ್ಲಿವರೆಗೆ ಕೇವಲ 36.47 ಲಕ್ಷ ಹೆಕ್ಟೇರ್‌ನಲ್ಲಿ(ಶೇ.43) ಮಾತ್ರ ಬಿತ್ತನೆಯಾಗಿದೆ.

ಈ ವರ್ಷ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಉಂಟಾಗಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಜು.3 ರವರೆಗಿನ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣದ ಅಂಕಿ-ಅಂಶಗಳನ್ನು ನೋಡಿದರೆ, ಇದಕ್ಕೆ ಪುಷ್ಠಿ ದೊರೆಯಲಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ 50.57 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ ಪ್ರಸಕ್ತ 36.47 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಕೈಗೊಳ್ಳಲಾಗಿದೆ. ಜೂ.1 ರಿಂದ ಜು.3 ರವರೆಗೂ 226 ಮಿ.ಮೀ. ಸಾಮಾನ್ಯ ಮಳೆಗೆ ಪ್ರತಿಯಾಗಿ ಈಗ 136 ಮಿ.ಮೀ. ಮಾತ್ರ ಮಳೆಯಾಗಿದೆ.

ಮುಂಗಾರಿನಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ ಸೇರಿ 37.60 ಲಕ್ಷ ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳನ್ನು ಬಿತ್ತನೆ ಮಾಡುವ ಗುರಿ ಹೊಂದಿದ್ದು, ಇಲ್ಲಿಯವರೆಗೂ 10.13 ಲಕ್ಷ ಹೆಕ್ಟೇರ್‌(ಶೇ.27) ಮಾತ್ರ ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 16.44 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಪ್ರಸಕ್ತ ಪರಿಸ್ಥಿತಿಗೆ ಹೋಲಿಸಿದರೆ ಭಾರೀ ಇಳಿಕೆ ಕಂಡುಬಂದಿದೆ.


ಆಹಾರ ಧಾನ್ಯ, ಎಣ್ಣೆ ಕಾಳಿನಲ್ಲೂ ಹಿಂದೆ:

ಇನ್ನು ತೊಗರಿ, ಹುರುಳಿ, ಉದ್ದು, ಅವರೆ, ಹೆಸರು, ಅಲಸಂದೆ ಮತ್ತಿತರ ದ್ವಿದಳ ಧಾನ್ಯಗಳ ವಿಷಯಕ್ಕೆ ಬರುವುದಾದರೆ 22.85 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಕೇವಲ 10.12 ಲಕ್ಷ ಹೆಕ್ಟೇರ್‌ನಲ್ಲಿ (ಶೇ.44) ಬಿತ್ತನೆಯಾಗಿದೆ. ಏಕದಳ ಧಾನ್ಯ ಮತ್ತು ದ್ವಿದಳ ಧಾನ್ಯ ಸೇರಿ ಒಟ್ಟಾರೆ ಆಹಾರ ಧಾನ್ಯಗಳನ್ನು ಗಮನಿಸಿದರೆ 60.45 ಲಕ್ಷ ಹೆಕ್ಟೇರ್‌ಗೆ ಬದಲಾಗಿ 20.25 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಶೇ.34 ರಷ್ಟು ಸಾಧನೆಯಾಗಿದೆ.

ಎಣ್ಣೆ ಕಾಳುಗಳ ಬಿತ್ತನೆಯೂ ಕುಂಠಿತವಾಗಿದೆ. ಶೇಂಗಾ, ಎಳ್ಳು, ಸೂರ್ಯಕಾಂತಿ, ಹುಚ್ಚೆಳ್ಳು, ಸೋಯಾ ಅವರೆ ಮತ್ತಿತರ ಬೆಳೆಗಳನ್ನು 7.91 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 4.21 ಲಕ್ಷ ಹೆಕ್ಟೇರ್‌ನಲ್ಲಿ (ಶೇ.53) ಬಿತ್ತನೆ ಮಾಡಲಾಗಿದೆ. ಹತ್ತಿ, ಕಬ್ಬು ಸೇರಿ 15.75 ಲಕ್ಷ ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಗುರಿ ಹೊಂದಿದ್ದು, 12.01 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಬಿತ್ತನೆ ಗುರಿಯಲ್ಲಿ ಜಿಲ್ಲಾವಾರು ಶೇಕಡಾವಾರು ಪ್ರಮಾಣ ಪರಿಗಣಿಸುವುದಾದರೆ ಬಳ್ಳಾರಿ 24, ವಿಜಯನಗರ 26, ಚಾಮರಾಜನಗರ 29, ಕಲಬುರಗಿ 30, ಬೀದರ್‌ ಜಿಲ್ಲೆಯಲ್ಲಿ ಶೇ.40ರಷ್ಟು ಮಾತ್ರ ಬಿತ್ತನೆಯಾಗಿದೆ. ಇದ್ದುದರಲ್ಲಿ ಹಾವೇರಿ ಶೇ.91, ಧಾರವಾಡ 90, ಬೆಳಗಾವಿ 80, ಗದಗ 76 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶೇ.54 ರಷ್ಟು ಬಿತ್ತನೆ ಆಗಿದೆ.

9 ಜಿಲ್ಲೆಯಲ್ಲಿ ‘ಸಿಂಗಲ್‌ ಡಿಜಿಟ್‌’

ಮಳೆ ಅಭಾವದಿಂದಾಗಿ 9 ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಭಾರೀ ಕಡಿಮೆಯಾಗಿದೆ. ಇದನ್ನು ಲಕ್ಷ ಹೆಕ್ಟೇರ್‌ ಲೆಕ್ಕದಲ್ಲಿ ಹೇಳುವುದಾದರೆ, ಬಿತ್ತನೆ ಎರಡಂಕಿಯನ್ನೂ ದಾಟಿಲ್ಲ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೋಲಾರ, ಮಂಡ್ಯ, ತುಮಕೂರು, ಬೆಂಗಳೂರು ದಕ್ಷಿಣ ಮತ್ತಿತರ 11 ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ತಲಾ 10 ಲಕ್ಷ ಹೆಕ್ಟೇರ್‌ ದಾಟಿಲ್ಲ.

- ನಿರೀಕ್ಷೆಯಷ್ಟು ಮಳೆ ಬಾರದೆ ಬಿತ್ತನೆಯೂ ಕುಂಠಿತ

- ಜೂ.1-ಜು.3ರವರೆಗೆ 226 ಮಿ.ಮೀ. ಮಳೆ ನಿರೀಕ್ಷೆ

- ಆದರೆ ಈ ಬಾರಿ ಆಗಿದ್ದು 136 ಮಿ.ಮೀ. ಅಷ್ಟೇ ಮಳೆ

- ಮುಂಗಾರಿನಲ್ಲಿ 84.10 ಲಕ್ಷ ಹೆಕ್ಟೇರ್‌ ಬಿತ್ತನೆಯ ಗುರಿ

- ಆದರೆ ಈವರೆಗೆ 36.47 ಲಕ್ಷ ಹೆಕ್ಟೇರಲ್ಲಿ ಮಾತ್ರ ಬಿತ್ತನೆ

- ಚಿಕ್ಕಬಳ್ಳಾಪುರ ಸೇರಿ ಐದು ಜಿಲ್ಲೆಗಳಲ್ಲಿ ಬಿತ್ತನೆಗೆ ಹಿನ್ನಡೆ

- ಭತ್ತ, ಜೋಳ, ತೊಗರಿ, ಶೇಂಗಾ ಬಿತ್ತನೆ ಭಾರೀ ಇಳಿಕೆ