ಉಗ್ರ ನರಸಿಂಹೇಗೌಡ ಮನವಿ । ಡಿಸಿ, ಎಸ್ಪಿಗೆ ಮನವಿ ಪತ್ರ ಸಲ್ಲಿಸಿದ ಮಂಟೇಸ್ವಾಮಿ ಪರಂಪರೆ ರಕ್ಷಣಾ ಹೋರಾಟ ಸಮಿತಿಯ ಕಾರ್ಯಕರ್ತರು
ಕನ್ನಡಪ್ರಭ ವಾರ್ತೆ ಚಾಮರಾಜನಗರ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಜ. ೨೫ ರಿಂದ ೨೯ ತನಕ ನಡೆಯುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿಭೋಜನಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ, ಪರಂಪರೆ ರಕ್ಷಣಾ ಹೋರಾಟ ಸಮಿತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಎಚ್.ಬಿ.ಭರತ್‌ಭೂಷಣ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ವಿಶ್ವಪ್ರಾಣಿ ದಯಾಸಂಘದ ಸ್ವಾಮೀಜಿ ಒಬ್ಬರು ಈ ಮಂಟೇಸ್ವಾಮಿ ಪರಂಪರೆ ಜಾತ್ರೆಯಲ್ಲಿ ಬಲಿ ನಡೆಯುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಹೈಕೋರ್ಟ್ ಮೊರೆಹೋಗಿದ್ದು, ಹೋರಾಟ ಸಮಿತಿಯು ಕೂಡ ಪಂಕ್ತಿಸೇವೆ ಆಚರಣೆ ವಾಸ್ತವಾಂಶವನ್ನು ನ್ಯಾಯಾಲಯದ ಗಮನಕ್ಕೆ ತಂದ ಮೇಲೆ ಮಧ್ಯಂತರ ಆದೇಶವನ್ನು ೨೦೧೭ರಲ್ಲಿ ಕೊಟ್ಟಿದೆ. ಅದರ ಪ್ರಕಾರ ಈ ಒಕ್ಕಲುಗಳು ಮಾಂಸಹಾರದ ಅಡುಗೆ ತಯಾರಿಸಿ ಎಡೆ ಅರ್ಪಿಸುವ ಆಚರಣೆಗೆ ಧಕ್ಕೆ ತರಬಾರದೆಂದು ಹಾಗೂ ಅಲ್ಲಿ ಆಕಸ್ಮಾತ್ ಬಲಿಪ್ರಾಣಿ ನೆಡಯುತ್ತಿದ್ದರು ಅದನ್ನು ತಡೆಯುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಿದೆ. ಆದರೆ ಪೋಲಿಸರು ಚಿಕ್ಕಲ್ಲೂರು ಸುತ್ತ ಚೆಕ್‌ಪೋಸ್ಟ್‌ಗಳನ್ನು ಹಾಕಿ ತಪಾಸಣೆ ನಡೆಸುತ್ತಾ ಪ್ರಾಣಿ ಬಲಿ ನಿಷೇಧಿಸಿದೆ ಎಂದು ಅಲ್ಲಲ್ಲಿ ನಾಮಫಲಕ ಹಾಕಿದ್ದಾರೆ. ಪ್ರಾಣಿ ಬಲಿ ಇಲ್ಲದ ಕಡೆ ಪ್ರಾಣಿ ನಿಷೇಧ ಅಂಥಾ ಹಾಕುವ ಮೂಲಕ ಜನರಿಗೆ ಒಂದು ತಪ್ಪು ಸಂದೇಶ ರವಾನೆಯಾಗುತ್ತದೆ. ಕಳೆದ ೮- ೧೦ ವರ್ಷಗಳಿಂದ ಭಕ್ತಾಧಿಗಳಿಗೆ ಪಂಕ್ತಿಸೇವೆ ಸಮಸ್ಯೆಯಾಗುತ್ತಿದೆ. ಇದನ್ನು ನಿವಾರಿಸಿ ಒಕ್ಕಲುಗಳ ಧಾರ್ಮಿಕ ಆಚರಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಎಸ್ಪಿಗೆ ಮನವಿ ಮಾಡಲಾಯಿತು. ಚಿಕ್ಕಲ್ಲೂರಿನಲ್ಲಿ ಬಲಿಪೀಠವೇ ಇಲ್ಲ:ಮಂಟೇಸ್ವಾಮಿ ಪರಂಪರೆಯಲ್ಲಿ ಯಾರು ಕೂಡ ಬಲಿಕೊಡುವ ಪದ್ದತಿ ಅನುಸರಿಸಲ್ಲ. ಇಲ್ಲಿ ಸಸ್ಯಹಾರಿ, ಮಾಂಸಹಾರಿಗಳು ಅವರವರ ಆಹಾರ ಸಂಸ್ಕೃತಿಗೆ ಅನುಗುಣವಾಗಿ ಅಡುಗೆ ತಯಾರಿಸಿ ಎಡಯಿಟ್ಟು ಊಟ ಮಾಡಿ ಎಲ್ಲರಿಗೂ ಊಟ ಹಾಕುತ್ತಾರೆ. ಜನರು ಅವರವರ ಧಾರ್ಮಿಕ ಹಕ್ಕಿನ ಪ್ರಕಾರ ಪಂಕ್ತಿಭೋಜನ ಮಾಡಬಾರದೆಂದು ಯಾವುದೇ ನ್ಯಾಯಾಲಯವು ಹೇಳಿಲ್ಲ. ಮಾಂಸಾಹಾರ ಮಾಡಬೇಡಿ ಎಂದೂ ಹೇಳಿಲ್ಲ. ಯಾರು ಕೂಡ ಹೆದರದೆ, ತಪ್ಪು ತಿಳುವಳಿಕೆ ಒಳಗಾಗದೆ ಒಕ್ಕಲಿನ ಭಕ್ತರು ಮಾಂಸದ ಅಡುಗೆ ಪಂಕ್ತಿ ಭೋಜನ ಮಾಡುವ ತಮ್ಮ ಧಾರ್ಮಿಕ ಹಕ್ಕನ್ನು ಆಚರಣೆ ಮಾಡಬೇಕು. ಇದನ್ನು ಜಿಲ್ಲಾಡಳಿತ ಕೂಡ ಭಕ್ತರಿಗೆ ತಿಳಿಸಬೇಕಿದೆ ಎಂದು ಸಮಿತಿ ಅಧ್ಯಕ್ಷ ಉಗ್ರ ನರಸಿಂಹೇಗೌಡ ಒತ್ತಾಯಿಸಿದರು. ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ, ಪರಂಪರೆ ರಕ್ಷಣಾ ಹೋರಾಟ ಸಮಿತಿ ಕಾರ್ಯದರ್ಶಿ ಎಲ್. ಶಂಭುಲಿಂಗಸ್ವಾಮಿ, ಸಂಶೋಧಕ ಶಂಕನಪುರಮಹದೇವ, ಹೊಂಡರಬಾಳುವಾಸು, ನಾಗೇಶ್, ಇರಸವಾಡಿ ಮಹೇಶ್ ಹಾಜರಿದ್ದರು.