ಕೊಪ್ಪಳ:
ನಗರದ ಎಆರ್‌ಎಂ (ಮೇಘರಾಜ) ಕಲ್ಯಾಣ ಮಂಟಪದಲ್ಲಿ ಸಿಐಟಿಯು, ಸಿಡಬ್ಲ್ಯೂಎಫ್‌ಐ ಆಶ್ರಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 5ನೇ ರಾಜ್ಯ ಸಮ್ಮೇಳನ ನಡೆಯಿತು.ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಕಟ್ಟಡ ಕಾರ್ಮಿಕರ ಭವಿಷ್ಯ ರೂಪಿಸಲು ಕಡ್ಡಾಯವಾಗಿ ಸದಸ್ಯತ್ವ ಪಡೆಯಬೇಕು. ಕಟ್ಟಡ ಕಾರ್ಮಿಕರ ಚಳವಳಿ ಮೂಲಕ ಕಲ್ಯಾಣ ಮಂಡಳಿ ರಕ್ಷಿಸಬೇಕಿದೆ. ಕಟ್ಟಡ ಕಾರ್ಮಿಕರ ನಿರ್ದಿಷ್ಟ ಜಾಗೆಯಲ್ಲಿ ಕೆಲಸ ಮಾಡುವ ವೇಳೆ ತೊಂದರೆ, ಅಪಘಾತವಾದರೆ ವಿಮಾ ಸೌಲಭ್ಯ, ಭದ್ರತೆ ಒದಗಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕಿದೆ ಎಂದರು.
ಕಟ್ಟಡ ಕಾರ್ಮಿಕರ ಕನಿಷ್ಠ ವೇತನ ದಿನಕ್ಕೆ ₹1000 ಜಾರಿ ಮಾಡುವುದು ಸರ್ಕಾರಗಳ ಜವಾಬ್ದಾರಿಯಾಗಿದೆ. ಕಟ್ಟಡ ಕಾರ್ಮಿಕರ ಒಟ್ಟು ಸೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಲ್ಯಾಣ ಮಂಡಳಿ ಸೆಸ್ ಕಟ್ಟುವುದು ಸರ್ಕಾರಗಳ ಪ್ರಮುಖ ಅಂಶವಾಗಿದೆ. ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಸಲು ಬೃಹತ್ ಸಮ್ಮೇಳನದಲ್ಲಿ ತೀರ್ಮಾನ ತೆಗೆದುಕೊಳ್ಳುವುದು. ಕಟ್ಟಡ ಕಾರ್ಮಿಕರ ಭವಿಷ್ಯ ರೂಪಿಸುವುದು 5ನೇ ಸಮ್ಮೇಳನ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ ರೈತರು ಬೆಂಬಲ ಬೆಲೆ ಇಲ್ಲದೆ ಕಟ್ಟಡ ಕಾರ್ಮಿಕರಾಗಿ ಶೇ.90ರಷ್ಟು ಕೆಲಸ ಮಾಡುತ್ತಿದ್ದಾರೆ. ಮೆಟ್ರೋ, ದೇವಸ್ಥಾನ, ಮನೆ ಕಟ್ಟಡ ಕಾರ್ಮಿಕರಿಗೆ ಸರಿಯಾದ ಸೌಕರ್ಯಗಳಿಲ್ಲದೆ ನರಳುತ್ತಿದ್ದಾರೆ. ಸರ್ಕಾರಗಳು ಕಟ್ಟಡ ಕಾರ್ಮಿಕರ ಸೌಲಭ್ಯ ದೊರಕಿಸಿ ಕೊಡದೆ ಮೋಸ ಮಾಡುತ್ತಿದೆ ಎಂದರು.
ಜಿಲ್ಲೆಯ ಕಟ್ಟಡ ಕಾರ್ಮಿಕರ ಜಿಲ್ಲಾಧ್ಯಕ್ಷ ಖಾಸಿಂಸಾಬ್ ಸರ್ದಾರ ಮಾತನಾಡಿ, ಜಿಲ್ಲೆಯ ಇಡೀ ಕಟ್ಟಡ ಕಾರ್ಮಿಕರ ಸಮ್ಮೇಳನದಲ್ಲಿ ದುಡಿಯುವ ವರ್ಗದ ಹಲವಾರು ಸಮಸ್ಯೆ ಇಟ್ಟುಕೊಂಡು ಕಟ್ಟಡ ಕಾರ್ಮಿಕರ ಸಂಘದ ನಮ್ಮ ಹಕ್ಕುಗಳಿಗಾಗಿ ಹೋರಾಟ ರೂಪಿಸಬೇಕಿದೆ ಎಂದು ಹೇಳಿದರು.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಹಿಳಾ ಕಟ್ಟಡ ಕಾರ್ಮಿಕರ ಸಂಘದ ಸಂಚಾಲಕಿ ಸಿ. ಕುಮಾರಿ, ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ರಂಗಪ್ಪ ದೊರೆ, ಎಸ್.ಎ. ಶಫಿ, ಮಂಜುನಾಥ ಡಗ್ಗಿ, ಬಾಳಪ್ಪ ಹುಲಿಹೈದರ್, ಅಮರೇಶ ಕಡಗದ, ಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.