ಗಣೇಶನ ಹಬ್ಬಕ್ಕೆ ಭರ್ಜರಿ ತಯಾರಿ

KannadaprabhaNewsNetwork |  
Published : Aug 26, 2025, 01:05 AM IST
ಗೋಕರ್ಣ ಮೇಲಿನ ಕೇರಿ ವಿನಾಯಕ ಗುನಗರವರ ರಿಂದ ಗಣೇಶನ ಮೂರ್ತಿ  | Kannada Prabha

ಸಾರಾಂಶ

ಗಣೇಶನ ಹಬ್ಬ ಹತ್ತಿರ ಬರುತ್ತಿದ್ದಂತೆ ಪ್ರಥಮ ಪೂಜಿತನ ಆರಾಧನೆಗೆ ಬಗೆ, ಬಗೆಯ ಮೂರ್ತಿಗಳು ತಯಾರಾಗುತ್ತಿವೆ.

ಗೋಕರ್ಣ: ಗಣೇಶನ ಹಬ್ಬ ಹತ್ತಿರ ಬರುತ್ತಿದ್ದಂತೆ ಪ್ರಥಮ ಪೂಜಿತನ ಆರಾಧನೆಗೆ ಬಗೆ, ಬಗೆಯ ಮೂರ್ತಿಗಳು ತಯಾರಾಗುತ್ತಿವೆ. ವಿವಿಧೆಡೆ ಕಲಾವಿದರು ತಮ್ಮ ಕೈಚಳಕದಲ್ಲಿ ಕೊನೆಯ ಹಂತದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಗಣೇಶ ಮೂರ್ತಿ ತಯಾರಿಕೆಯಲ್ಲಿ ಮೂರು ಶತಮಾನದ ಇತಿಹಾಸವಿರುವ ಮೇಲಿನಕೇರಿಯ ವಿಠ್ಠಲ ಗುನಗ, ವಿನಾಯಕ ಗುನಗ ಕುಟುಂಬದವರು ಒಟ್ಟು ಮೂರಕ್ಕೂ ಹೆಚ್ಚು ಆಕರ್ಷಕ ಮೂರ್ತಿಗಳನ್ನು ನೈಸರ್ಗಿಕ ಬಣ್ಣದೊಂದಿಗೆ ಸಿದ್ಧಪಡಿಸಿದ್ದಾರೆ. ಈ ಭಾಗದ ಬಹುತೇಕ ಮನೆಯವರು ಇಲ್ಲಿಂದಲೇ ಮೂರ್ತಿ ತೆಗೆದುಕೊಂಡು ಹೋಗುವುದು ವಿಶೇಷವಾಗಿದೆ.

ಮಾದನಗೇರಿ ಮಹಾಲೆ ಕುಟುಂಬದವರು ತಯಾರಿಸುವ ಗಣೇಶನ ಮೂರ್ತಿಗೆ ೫೦೦ ವರ್ಷಗಳ ಇತಿಹಾಸವಿದೆ. ತಲತಲಾಂತರದಿಂದ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದು, ಒಟ್ಟು ೧೦೧ ಗಣೇಶನ ಮೂರ್ತಿ ಈ ಭಾಗದ ವಿವಿಧ ಮನೆಗಳಿಗೆ ತೆರಳುತ್ತದೆ. ತಮ್ಮ ಮನೆಯಲ್ಲಿ ಆರಾಧಿಸುವ ಗಣೇಶ ಮೂರ್ತಿಗೆ ರಾಜ್ಯದ ವಿವಿದೆಡೆ ಹಾಗೂ ಹೊರ ರಾಜ್ಯದಿಂದ ಭಕ್ತರು ಆಗಮಿಸಿ ಪೂಜೆಸಲ್ಲಿಸುವುದು ಬಹು ವಿಶೇಷವಾಗಿದೆ. ಪ್ರತಿ ವರ್ಷ ಆಷಾಡ ಮಾಸ ಸಂಕಷ್ಟಿಯ ಶುಭದಿನದಂದು ಮೂರ್ತಿ ತಯಾರಿಕೆ ಪ್ರಾರಂಭವಾಗುತ್ತದೆ. ಭಾವಿಕೇರಿಯಿಂದ ಮಣ್ಣು ಹದಗೊಳಿಸಿ ತರಲಾಗುತ್ತಿದ್ದು, ನೈಸರ್ಗಿಕ ಬಣ್ಣದೊಂದಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪೂಜೆಗೆ ತಯಾರಾಗಿದೆ. ನಾಗೇಶ ಮಹಾಲೆ, ರವಿ ಮಹಾಲೆ ನವೀನ ಮಹಾಲೆ ಹಾಗೂ ಕುಟುಂಬ ಸದಸ್ಯರು, ಕಾಂತು ಗೌಡ,ವಿನಾಯಕ ಗೌಡ, ಮಂಜು ಗೌಡ,ವಿನಾಯಕ ಗೌಡ, ರವಿ ಗೌಡ ಹಗಲಿರುಳೆನ್ನದೇ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.

ಕೆತ್ತನೆಗೂ ಸೈ, ಮೂರ್ತಿ ತಯಾರಿಕೆಗೂ ಜೈ:

ಇಲ್ಲಿನ ಬಂಡಿಕೇರಿಯ ರಾಮಚಂದ್ರ ಉಮಾಶಿವ ಆಚಾರಿ ವೃತ್ತಿಯಲ್ಲಿ ಪೀಠೋಪಕರಣ ತಯಾರಿಕೆ, ಮರದ ಕೆತ್ತನೆ ಮತ್ತಿತರ ಕರಕುಶಲ ಕರ್ಮಿಯಾಗಿದ್ದಾರೆ. ತಮ್ಮ ತಂದೆಯಿಂದ ಬಂದ ಗಣೇಶನ ಮೂರ್ತಿ ತಯಾರಿಕೆಯನ್ನು ತಾವು ಮುಂದುವರಿಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ.

ಡಾಕ್ಟರ್ ಗಣೇಶ:

ಹಾಲಿ ಅಂಕೋಲಾ ತಾಲೂಕು ಆರೋಗ್ಯಾಧಿಕಾರಿಯಾಗಿರುವ ಡಾ. ಜಗದೀಶ ನಾಯ್ಕ ತಮ್ಮ ಕುಟುಂಬದಿಂದ ಬಂದ ಕಲಾರಾಧನೆ ಆರಾಧಿಸುತ್ತಾ ಬಂದಿದ್ದು, ಬಿಡುವಿಲ್ಲದ ಕೆಲಸದ ಒತ್ತಡದಲ್ಲೂ ಆಕರ್ಷಕ ಗಣೇಶನ ವಿಗ್ರಹ ತಯಾರಿಸಿದ್ದಾರೆ. ಪ್ರತಿ ವರ್ಷ ನಾಗರ ಪಂಚಮಿಯಂದು ಗಣೇಶನ ತೆಗೆದುಕೊಂಡು ಹೋಗುವವರು ಮಣೆ ತಂದು ಇಡುವ ಪದ್ಧತಿ ಇದ್ದು, ಅದರಂತೆ ಮೂರ್ತಿ ತಯಾರಿಸುತ್ತಾರೆ. ಇಲ್ಲಿಂದ ತೆಗೆದುಕೊಂಡು ಹೋಗುವ ಮೂರ್ತಿಗೆ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ನೀಡುವುದು ವಿಶೇಷವಾಗಿದೆ. ಪರಿಸರ ಸ್ನೇಹಿಯೊಂದಿಗೆ ಹಲವು ಸಂದೇಶ ನೀಡುವ ವಿಶಿಷ್ಟ ಗಣೇಶನ ಸಿದ್ಧಗೊಳಿಸುವುದು ಮತ್ತೊಂದು ವಿಶೇಷವಾಗಿದೆ.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ