ರೌಡಿಗಳ ಪರೇಡ್‌ನಲ್ಲಿ ಅರುಣಾಂಗ್ಷು ಗಿರಿ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಹೊಸಪೇಟೆ
ಗಲಾಟೆ ಮಾಡಿದ್ರೆ ಮತ್ತೆ ಜೈಲಿಗೆ ಹೋಗ್ತೀರಿ. ನೀವು ವಾಸಿಸುತ್ತಿರುವ ಪ್ರದೇಶದಲ್ಲಿ ಯುವಕರಿಗೆ ತಿಳಿಹೇಳಿ. ನೀವು ಅನುಭವಿಸುತ್ತಿರುವಂತೆ ಅವರೂ ಅನುಭವಿಸುವುದು ಬೇಡ. ಹತ್ತಾರು ವರ್ಷಗಳಿಂದ ಜೈಲು-ಬೇಲು, ಜೈಲು-ಬೇಲು ಓಡಾಡಿದ್ದು ಸಾಕು ಎಂದು ವಿಜಯನಗರ ಎಸ್ಪಿ ಅರುಣಾಂಗ್ಷು ಗಿರಿ ಎಚ್ಚರಿಸಿದರು.ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಿನ್ನೆಲೆ ಇಲ್ಲಿನ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ರೌಡಿಗಳ ಪರೇಡ್‌ನಲ್ಲಿ ಒಬ್ಬೊಬ್ಬರನ್ನಾಗಿ ಮಾತಾಡಿಸಿ, ಹಬ್ಬದಲ್ಲಿ ಬಾಲ ಬಿಚ್ಚದಂತೆ ಸೂಚನೆ ನೀಡಿದ ಅವರು, ಕೋರ್ಟ್‌ನಲ್ಲಿ ಜೈಲು-ಬೇಲು, ಜೈಲು -ಬೇಲು ಓಡಾಡಿ ನಿಮ್ಮ ಜೀವನ ಹಾಳು ಮಾಡಿಕೊಂಡಿದ್ದೀರಿ. ಅದೇ ರೀತಿ ನೀವು ಅನುಭವಿಸಿರುವುದನ್ನು ಯುವಕರು ಕೂಡ ಜೀವನ ಹಾಳುಮಾಡಿಕೊಳ್ಳದಂತೆ ಅವರಿಗೆ ತಿಳಿಹೇಳಿ ಎಂದರು.
ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಆಚರಣೆ ಮಾಡಬೇಕು. ಗಲಾಟೆ ಮಾಡಿದ್ರೆ ಬಿಡಲ್ಲ, ನಿಮಗೆ ತಕ್ಕ ಶಾಸ್ತಿ ಮಾಡ್ತೇವೆ. ಸಣ್ಣ ಎಡವಟ್ಟಾದರೂ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದರು.ಸಮಾಜದಲ್ಲಿ ಶಾಂತಿ ಕಾಪಾಡಲು ಪೊಲೀಸರಿಗೆ ಸಹಕಾರ ನೀಡಬೇಕು. ಯಾವುದಾದರೂ ಸೂಕ್ಷ್ಮ ವಿಷಯಗಳು ಅಥವಾ ಇತರೆ ಮಾಹಿತಿಗಳನ್ನು ಪೊಲೀಸರಿಗೆ ತಿಳಿಸಿ ಅನಾಹುತ ನಡೆಯದಂತೆ ತಡೆಯಲು ಕೈಜೋಡಿಸಬೇಕು. ಇದನ್ನು ತಿಳಿದುಕೊಂಡು ಪೊಲೀಸರಿಗೆ ಗೌರವ ಕೊಡುವ ಜತೆಗೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಮತ್ತೆ ಏನೇ ತಪ್ಪು ಮಾಡಿ ಸಿಕ್ಕಿಕೊಂಡರೆ ಬಿಡುವ ಮಾತೇ ಇಲ್ಲ. ಪ್ರತಿಯೊಬ್ಬರು ಕೂಡ ಇದನ್ನು ಸರಿಯಾಗಿ ಮನನ ಮಾಡಿಕೊಳ್ಳಬೇಕು. ಒಂದು ವೇಳೆ ಮತ್ತೆ ಹಳೆಯ ಚಾಳಿ ಮುಂದುವರೆಸಿದರೆ ನಾವು ನಮ್ಮ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಣೇಶ ಮತ್ತು ಈದ್ ಮಿಲಾದ್ ಹಬ್ಬದಲ್ಲಿ ಯಾರೂ ಗಲಾಟೆ ಮಾಡದಂತೆ ತಿಳಿವಳಿಕೆ ನೀಡಲಾಗಿದೆ. 26 ಜನರಿಗೆ ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ ಮೂರು ಜನರನ್ನು ಗಡಿಪಾರಿಗೆ ಪ್ರಸ್ತಾವಿಸಲಾಗುವುದು.ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ, ಅವಹೇಳನಕಾರಿಯಾಗಿ ಹಾಗೂ ಬೆತ್ತಲೆ ಫೋಟೊ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸೇರಿ ಇತರೆ ಯಾವುದೇ ರೀತಿಯ ಸಂದೇಶಗಳು ಸಮಾಜದಲ್ಲಿ ಶಾಂತಿ ಕದಡುವಂತಿದ್ದರೆ ಕ್ರಮ ವಹಿಸಲಾಗುವುದು. ಯುವಕರು ಇದಕ್ಕೆ ಉತ್ತೇಜನಗೊಂಡು ಮಾಡುವುದನ್ನು ಬಿಡಬೇಕು. ಸಾಮಾಜಿಕ ಜಾಲತಾಣದ ಮೇಲೆ ನಿಗಾವಹಿಸಿ ಕ್ರಮಕೈಗೊಳ್ಳಲಾಗುವುದು ಎಂದರು. ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ, ಡಿವೈಎಸ್ಪಿ ಡಾ. ತಳವಾರ ಮಂಜುನಾಥ ಇದ್ದರು.