ಕಾಂಗ್ರೆಸ್‌ ಕಾರ್‍ಯಕರ್ತರಿಗೆ ಭಿಕ್ಷೆ ಎತ್ತಿ ಹಣ ಕೊಡಿ: ಅಶೋಕ್‌

KannadaprabhaNewsNetwork |  
Published : Mar 12, 2025, 12:45 AM IST
ಅಶೋಕ್‌  | Kannada Prabha

ಸಾರಾಂಶ

ಕಾಂಗ್ರೆಸ್ ಕಾರ್ಯಕರ್ತರಿಗೆ ಹಣ ನೀಡಬೇಕೆಂದರೆ ನಾಯಕರು ಭಿಕ್ಷೆ ಬೇಡಿಕೊಂಡು ಕೊಡಲಿ. ಅದನ್ನು ಬಿಟ್ಟು ಸರ್ಕಾರದ ಖಜಾನೆಯಿಂದ ಹಣ ಪಾವತಿಸಬಾರದು. ಯಾವುದೇ ಮುಖ್ಯಮಂತ್ರಿಯೂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದಿಂದ ದುಡ್ಡು ನೀಡುವಂತಹ ಇಂತಹ ಮನೆಹಾಳು ಕೆಲಸ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಕಾಂಗ್ರೆಸ್ ಕಾರ್ಯಕರ್ತರಿಗೆ ಹಣ ನೀಡಬೇಕೆಂದರೆ ನಾಯಕರು ಭಿಕ್ಷೆ ಬೇಡಿಕೊಂಡು ಕೊಡಲಿ. ಅದನ್ನು ಬಿಟ್ಟು ಸರ್ಕಾರದ ಖಜಾನೆಯಿಂದ ಹಣ ಪಾವತಿಸಬಾರದು. ಯಾವುದೇ ಮುಖ್ಯಮಂತ್ರಿಯೂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದಿಂದ ದುಡ್ಡು ನೀಡುವಂತಹ ಇಂತಹ ಮನೆಹಾಳು ಕೆಲಸ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಕಾಂಗ್ರೆಸ್‌ ಕಾರ್ಯಕರ್ತರ ನೇಮಕ ವಿರೋಧಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರಕ್ಕೂ, ಕಾಂಗ್ರೆಸ್‌ ಕಾರ್ಯಕ್ರಮಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಜನರ ತೆರಿಗೆ ಹಣವನ್ನು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಂಚಲಾಗುತ್ತಿದೆ. ಒಂದು ವೇಳೆ ಅವರ ಕಾರ್ಯಕರ್ತರಿಗೆ ದುಡ್ಡು ಕೊಡಬೇಕು ಎಂದಾದರೆ, ಕೆಪಿಸಿಸಿಯಿಂದ ಕೊಡಲಿ. ಇಲ್ಲವೇ ನಾಯಕರು ವಿಧಾನಸೌಧ, ಕಬ್ಬನ್‌ಪಾರ್ಕ್‌ನಲ್ಲಿ ಜನರಿಂದ ಭಿಕ್ಷೆ ಬೇಡಿ ಹಂಚಲಿ. ನಮ್ಮ ದುಡ್ಡಿನಲ್ಲಿ ಕಾರ್ಯಕರ್ತರಿಗೆ ಕಾರು, ಬಂಗಲೆ ನೀಡುವುದು ಬೇಡ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಅಧಿಕಾರದಲ್ಲಿರುವ ತೆಲಂಗಾಣ, ಹಿಮಾಚಲಪ್ರದೇಶದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆರ್ಥಿಕ ಹೊಡೆತ ಎದುರಾಗುತ್ತಿದೆ ಎಂಬಂತಹ ಹೇಳಿಕೆ ನೀಡಲಾಗುತ್ತಿದೆ. ಆದರೂ, ಕರ್ನಾಟಕದಲ್ಲಿ ಮಾತ್ರ ಗ್ಯಾರಂಟಿ ಅನುಷ್ಠಾನಕ್ಕೆ ಯಾವುದೇ ಆರ್ಥಿಕ ಹೊರೆಯಿಲ್ಲ ಎನ್ನಲಾಗುತ್ತಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಿಲ್ಲ. ಆದರೆ, ಸರ್ಕಾರದ ದುಡ್ಡನ್ನು ನಿಮ್ಮ ಕಾರ್ಯಕರ್ತರಿಗೇಕೆ ನೀಡುತ್ತಿದ್ದೀರಿ. ಇಂತಹ ಮನೆಹಾಳು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ನಾನು ಈವರೆಗೆ ನೋಡಿಲ್ಲ. ಸರ್ಕಾರದ ದುಡ್ಡನ್ನು ಪಕ್ಷಕ್ಕೆ ಹಂಚಿರುವುದು ಇದೇ ಮೊದಲು ಎಂದು ಮೂದಲಿಸಿದರು.ಸರ್ಕಾರದಲ್ಲಿರುವವರು ತಾವು ಶಾಶ್ವತವಾಗಿ ಅಧಿಕಾರದಲ್ಲಿರುತ್ತೇವೆ ಎಂದುಕೊಂಡಿದ್ದಾರೆ. ಆದರೆ, 3 ವರ್ಷದಲ್ಲಿ ಸರ್ಕಾರ ಬದಲಾಗಲಿದೆ. ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಬದಲಾಗುತ್ತಾರೆ. ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರೇ ಸುಪ್ರೀಂ. ಅವರು ಈಗ ಕಾಂಗ್ರೆಸ್‌ ಕಾರ್ಯಕರ್ತರ ಗುಲಾಮರಾಗಿ ಕೆಲಸ ಮಾಡಬೇಕಾಗಿದೆ. ಇದು ಸರಿಯಲ್ಲ. ಶಾಸಕರ ಅಧಿಕಾರ ಕಿತ್ತುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಆಗ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯದಲ್ಲಿ ಗ್ಯಾರಂಟಿ ಸಮಿತಿಗಳಿಗೆ ಪಕ್ಷಕ್ಕೆ ಸಂಬಂಧಿಸಿದವರನ್ನು ನೇಮಿಸಿದ್ದರ ಬಗ್ಗೆ ಟೀಕಿಸುವ ಬಿಜೆಪಿ ಶಾಸಕರು, ನಾಯಕರು ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಕ್ರಮವನ್ನು ಅವಲೋಕಿಸಬೇಕು. ಮಹಾರಾಷ್ಟ್ರದಲ್ಲಿ ಸಚಿವರ ಆಪ್ತ ಸಹಾಯಕರಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ನೇಮಿಸುವಂತೆ ಆದೇಶಿಸಲಾಗಿದೆ. ಅವರಿಗೆ ಸರ್ಕಾರದಿಂದಲೇ ಹಣ ಪಾವತಿಸಲಾಗುತ್ತದೆ. ನಿಮ್ಮ ಪಕ್ಷದ ಸರ್ಕಾರದ ಕ್ರಮವನ್ನೂ ಟೀಕಿಸಿ ಎಂದು ಆಗ್ರಹಿಸಿದರು.

ಅದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧದ ಘೋಷಣೆ ತೀವ್ರಗೊಳಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ