ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ನ್ಯಾ.ನಂದಿನಿ

KannadaprabhaNewsNetwork | Published : May 22, 2025 12:49 AM
ಹನೂರು ರಾಮಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನಂದಿನಿ ಎಂ ಎನ್ ಅ‍ವರು ಉದ್ಘಾಟಿಸಿದರು.
Follow Us

ಕನ್ನಡಪ್ರಭ ವಾರ್ತೆ ಹನೂರು

ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಮೊಬೈಲ್ ದೂರವಿಟ್ಟು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ನಂದಿನಿ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ರಾಮಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಜ್ಯ, ಜಿಲ್ಲಾ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಅಭಿಯೋಜನಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದೌರ್ಜನ್ಯ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪೋಷಕರು ಹೆಣ್ಣು ಮಗುವಿಗೆ 18 ವರ್ಷ, ಗಂಡು ಮಗುವಿಗೆ 21 ವರ್ಷ ತುಂಬಿದ ನಂತರ ವಿವಾಹ ಮಾಡಬೇಕು. ಒಂದೊಮ್ಮೆ ಕಾನೂನು ಉಲ್ಲಂಘನೆ ಮಾಡಿದರೆ ವಧು ವರರ ತಂದೆ ತಾಯಿ, ಪೋಷಕರಿಗೆ ಮೂರು ವರ್ಷಗಳ ಕಾಲ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು. ಗ್ರಾಮಾಂತರ ಪ್ರದೇಶದ ಪೋಷಕರು ಇದರ ಬಗ್ಗೆ ಕಾನೂನು ಅರಿವು ತಿಳಿದುಕೊಂಡಿರಬೇಕು. ಇತ್ತೀಚಿನ ದಿನಗಳಲ್ಲಿ ಪೋಷಕರ ತಮ್ಮ ಮಕ್ಕಳಿಗೆ ಮೊಬೈಲ್ ನೀಡುತ್ತಿರುವುದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ದಾರಿ ತಪ್ಪುತ್ತಿದ್ದಾರೆ. ತಾವು ಮೊಬೈಲ್ ನೀಡದೆ ವಿದ್ಯಾರ್ಥಿ ದೆಸೆಯಿಂದಲೇ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಇದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು ಎಂದರು.

ಈ ಹಿಂದೆ ಹೆಣ್ಣು ಮಗು 15 ವರ್ಷಗಳ ನಂತರ ಯೌವನ ಸ್ಥಿತಿಗೆ ಬರುತ್ತಿದ್ದಳು. ಪ್ರಸ್ತುತ ದಿನಗಳಲ್ಲಿ ಆಹಾರ ಪದ್ಧತಿ, ಜೀವನಶೈಲಿ ರಾಸಾಯನಿಕ ಪದಾರ್ಥ ಬೆರಸಿ ತಯಾರಿಸಿದ ಆಹಾರ ಸೇವನೆಯಿಂದ 8 ವರ್ಷಕ್ಕೆ ಯೌವನ ವ್ಯವಸ್ಥೆಗೆ ಬರುತ್ತಿದ್ದಾರೆ. ಇದರಿಂದ ಪೋಷಕರು ತಮ್ಮ ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೋ ಎಂದು ತಮ್ಮ ಮಕ್ಕಳಿಗೆ ಬೇಗ ವಿವಾಹ ಮಾಡುತ್ತಿದ್ದಾರೆ. ತಮ್ಮ ಹೆಣ್ಣು ಮಕ್ಕಳಿಗೆ ಮಾನಸಿಕ ಸ್ಥಿರತೆ ಇಲ್ಲದೆ ಅತಿ ಬೇಗ ಮದುವೆ ಮಾಡಿದರೆ ಅವರಿಗೂ ಸಹ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಬಾಲ್ಯ ವಿವಾಹ ಮಾಡುವ ಬದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಬಾಲ್ಯ ವಿವಾಹ ತಡೆಗಟ್ಟಲು ಪ್ರತಿಯೊಬ್ಬ ಪೋಷಕರು ಸಹಕಾರ ನೀಡಬೇಕು ಎಂದರು.

ಹೆಣ್ಣು ಮಕ್ಕಳಿಗೆ ಗಂಡಂದಿರು ಮಾನಸಿಕವಾಗಿ, ದೈಹಿಕವಾಗಿ ಹಲ್ಲೆ ಮಾಡುವುದು ಮಾತ್ರ ದೌರ್ಜನ್ಯವಲ್ಲ ಅಣ್ಣ-ತಮ್ಮಂದಿರು ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರೆ ಅದು ಸಹ ದೌರ್ಜನ್ಯ ವ್ಯಾಪ್ತಿಗೆ ಬರುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರೆ ನಿಮಗೆ ಸೂಕ್ತ ರಕ್ಷಣೆ ಸಿಗಲಿದೆ ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವೈಕೆ ಗುರುಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ನರೇಗಾ ಸಂಯೋಜಕರು ರಾಧಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಯಶೀಲ, ವಕೀಲರ ಸಂಘದ ಅಧ್ಯಕ್ಷ ರವಿ ಉಪಾಧ್ಯಕ್ಷರಾದ ನಿರ್ಮಲ, ಪಿಡಿಒ ಪುಷ್ಪಲತಾ, ಮೇಲ್ವಿಚಾರಕ್ಕೆ ಶಿವಲೀಲಾ, ವಕೀಲರು ಸೇರಿದಂತೆ ಇನ್ನಿತರರು ಹಾಜರಿದ್ದರು.