ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗ್ರಾಮೀಣ ಭಾಗದ ಕ್ರೀಡೆಗಳಿಗೆ ಉತ್ತೇಜನ ನೀಡುವ ಮೂಲಕ ಹೆಚ್ಚು ಸಂಖ್ಯೆಯ ಗ್ರಾಮೀಣ ಕ್ರೀಡಾಪಟುಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಾಗಬೇಕು ಎಂದು ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ನೀಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಖೊ ಖೋ, ಕಬ್ಬಡ್ಡಿ, ಹಗ್ಗ ಜಗ್ಗಾಟ, ವಾಲಿಬಾಲ್ ಮತ್ತಿತ್ತರ ಕ್ರೀಡಾಪಟುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮೀಣ ಭಾಗದಲ್ಲಿ ಕಾಣಬಹುದಾಗಿದೆ. ಗ್ರಾಮೀಣ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಶಾಸಕರು ತಿಳಿಸಿದರು.ದೃಢಕಾಯ, ಶಕ್ತಿ ಹಾಗೂ ಬುದ್ಧಿವಂತಿಕೆಯು ಖೋ ಖೋ ಕಬಡ್ಡಿಯಂತಹ ಕ್ರೀಡೆಗಳಿಗೆ ಅಗತ್ಯವಿದೆ. ಇಂತಹ ಆಟೋಟಗಳು ಹೆಚ್ಚಿನ ಉಲ್ಲಾಸ ಹಾಗೂ ದೈಹಿಕ ಸಾಮರ್ಥ್ಯಕ್ಕೆ ನೆರವಾಗಲಿವೆ. ಗ್ರಾಮೀಣ ಭಾಗದವರು ಸಹ ಇಂತಹ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದನ್ನ ನೋಡಿದ್ದೇವೆ. ಈ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಬೇಕು ಎಂದರು. ವಿದ್ಯಾರ್ಥಿಗಳು ವ್ಯಾಸಂಗದ ಜೊತೆ ಕ್ರೀಡೆ ಬಗ್ಗೆಯೂ ಆಸಕ್ತಿ ಹೊಂದಬೇಕಿದೆ. ಕ್ರೀಡೆ ಅಭ್ಯಾಸದಿಂದ ದುಶ್ಚಟಗಳನ್ನು ದೂರವಿರಿಸಬಹುದಾಗಿದೆ. ಕ್ರೀಡಾಪಟುಗಳು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿಯೂ ಹೆಚ್ಚಿನ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಅವರು ತಿಳಿಸಿದರು.
ನೆಟ್ ಬಾಲ್ ಅಸೋಯೇಷನ್ ಅಧ್ಯಕ್ಷ ವಿ.ಶ್ರೀನಿವಾಸಪ್ರಸಾದ್, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಜಿ.ಬಂಗಾರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಟರಾಜು, ಗೌರವ ಅಧ್ಯಕ್ಷ ಮೋಹನ್ ಕುಮಾರ್, ಶಿವಮಲ್ಲು, ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕರಾದ ಬಸವರಾಜು, ಪುಟ್‌ಬಾಲ್ ತರಬೇತುದಾರರಾದ ಗೋಪಾಲ್, ಕಾರ್ತಿಕ್‌ನಾಯಕ್, ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.