ಎಲೆಚುಕ್ಕಿ ರೋಗ ಸಂಶೋಧನೆಗೆ ಹೆಚ್ಚಿನ ಅನುದಾನ ನೀಡಿ

KannadaprabhaNewsNetwork | Published : Oct 22, 2023 1:01 AM

ಸಾರಾಂಶ

ಅಡಕೆ ವಹಿವಾಟಿನ ಸಂಸ್ಥೆಗಳು ಸಹ ಈ ಸಂಶೋಧನೆಯಲ್ಲಿ ಭಾಗಿ ಆಗಬೇಕು. ಅಡಕೆ ಬೆಳೆಗಾರ ಪ್ರದೇಶದಿಂದ ಬಂದ ಯುವ ವಿಜ್ಞಾನಿಗಳ ಸಂಖ್ಯೆ ಸಹ ಜಾಸ್ತಿ ಇದೆ. ಅವರೂ ತೊಡಗಿಸಿಕೊಳ್ಳಬೇಕು. ಸರ್ಕಾರ ಈ ಎಲ್ಲ ಸಂಸ್ಥೆ ಒಗ್ಗೂಡಿಸಿ ಹಣ ಪೂರೈಸಬೇಕು

ಶಿರಸಿ:

ಅಡಕೆ ಬೆಳೆಗೆ ಈಗ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಔಷಧ ಸಂಶೋಧನಾ ಕೇಂದ್ರಗಳಿಗೆ ಸರ್ಕಾರ ಕೇವಲ ₹ 2 ಕೋಟಿ ಮಾತ್ರ ಬಿಡುಗಡೆ ಮಾಡಿದ್ದು ಸಾಕಾಗುವುದಿಲ್ಲ. ಹೆಚ್ಚಿನ ಹಣ ಬಿಡುಗಡೆ ಹಾಗೂ ಸಂಶೋಧನೆಗೆ ನಿರಂತರ ಹಣದ ಪೂರೈಕೆ ಮಾಡಬೇಕು ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳದಿ ರೋಗ ಮತ್ತು ಎಲೆಚುಕ್ಕಿ ರೋಗ ಆರಂಭಗೊಂಡ ವೇಳೆ ನಮ್ಮ ಸರ್ಕಾರ ₹ 10 ಕೋಟಿ ಬಿಡುಗಡೆ ಮಾಡಿತ್ತು. ಈಗ ಬಿಡುಗಡೆ ಮಾಡಿರುವ ಅನುದಾನ ಸಾಲುವುದಿಲ್ಲ. ಅಡಕೆ ಬೆಳೆಗೆ ಉತ್ತಮ ದರ ಇದ್ದು ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸರ್ಕಾರಕ್ಕೆ ಭರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಜಾಸ್ತಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಅಡಕೆ ವಹಿವಾಟಿನ ಸಂಸ್ಥೆಗಳು ಸಹ ಈ ಸಂಶೋಧನೆಯಲ್ಲಿ ಭಾಗಿ ಆಗಬೇಕು. ಅಡಕೆ ಬೆಳೆಗಾರ ಪ್ರದೇಶದಿಂದ ಬಂದ ಯುವ ವಿಜ್ಞಾನಿಗಳ ಸಂಖ್ಯೆ ಸಹ ಜಾಸ್ತಿ ಇದೆ. ಅವರೂ ತೊಡಗಿಸಿಕೊಳ್ಳಬೇಕು. ಸರ್ಕಾರ ಈ ಎಲ್ಲ ಸಂಸ್ಥೆ ಒಗ್ಗೂಡಿಸಿ ಹಣ ಪೂರೈಸಬೇಕು ಎಂದರು.ಪೃಕೃತಿ ಅಸಮತೋಲನದಿಂದ ಎಲೆಚುಕ್ಕಿ, ಹಳದಿ ರೋಗ ಭೀಕರವಾಗಿ ಕಾಡುತ್ತಿದೆ. ಹಳದಿ ರೋಗ ಕೊಪ್ಪ, ಶೃಂಗೇರಿ ಭಾಗದಲ್ಲಿ ಬಂದು ತೋಟಗಳೇ ನಾಶವಾಗಿವೆ. ಎಲೆಚುಕ್ಕಿ ರೋಗ ಹಿಂದಿನಿಂದಲೂ ಕಾಡುತ್ತಿದ್ದು, ಈ ವರ್ಷ ಉಲ್ಬಣಗೊಂಡಿದೆ. ರೈತರಿಗೆ ಸಹಜವಾಗಿ ಆತಂಕ ಮೂಡಿಸಿದೆ. ತಾಲೂಕಿನ ಕೆಲವೆಡೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು ರೈತರು ಆತಂಕಕ್ಕೆ ಒಳಗಾಗುವ ಸನ್ನಿವೇಶ ಇಲ್ಲ. ಆದರೆ, ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕಿದೆ. ರೈತರು ವಿಶ್ವಾಸದಲ್ಲಿ ಈ ಪರಿಸ್ಥಿತಿ ಎದುರಿಸಬೇಕು. ಭೂಮಿಯಲ್ಲಿ ಕೊರತೆ ಇರುವ ಅಂಶ ತುಂಬಿಕೊಳ್ಳಬೇಕು. ಮಣ್ಣನ್ನು ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳಬೇಕು ಎಂದು ಧೈರ್ಯ ಹೇಳಿದರು.ಅಡಕೆ ಒಂದು ವಾಣಿಜ್ಯ ಬೆಳೆ. ವಿದೇಶಿ ಆಮದು ನಿಯಂತ್ರಿಸಿದ್ದರಿಂದ ಉತ್ತಮ ದರ ಸಿಗುತ್ತಿದೆ. ದಿನದಿಂದ ದಿನಕ್ಕೆ ಕ್ಷೇತ್ರವೂ ವಿಸ್ತರಣೆ ಆಗುತ್ತಿದೆ. ೫ ಲಕ್ಷ ಕುಟುಂಬದ ಬದುಕಿಗೆ ವಿಶ್ವಾಸ ಕೊಡುವ ಬೆಳೆ ಅಡಕೆಯಾಗಿದೆ. ಸೂಕ್ತ ಔಷಧದ ಜತೆ ಲಘು ಪೋಷಕಾಂಶ, ಅಗತ್ಯ ವಸ್ತುಗಳನ್ನೂ ಪೂರೈಸಬೇಕು. ರೋಗಕ್ಕೆ ಪರಿಹಾರ ಕ್ರಮಕೈಗೊಳ್ಳಬೇಕೆಂದರೆ ಔಷಧಿ ಸಿಂಪಡಣೆ ಸಾಮೂಹಿಕವಾಗಿ ಆಗಬೇಕು. ಸಿಂಪಡಣೆಯ ತಂತ್ರಜ್ಞಾನ ಸರಳವಾಗಿಲ್ಲ. ಆ ಊರಿನ ರೈತರನ್ನು ಒಳಗೊಂಡು ಸ್ಥಳೀಯ ಸಂಘಟನೆ, ಸಂಸ್ಥೆಗಳು ಮಾಡಬೇಕಿದೆ. ಈ ಹಂತದಲ್ಲಿ ಮೇಲ್ನೋಟಕ್ಕೆ ಅಡಕೆ ಬೆಳೆಗಾರರ ಕಣ್ಣೊರೆಸುವ ಪ್ರಯತ್ನ ಬೇಡ ಎಂದರು.ಶಿರಸಿ-ಕುಮಟಾ ರಸ್ತೆ ಕುರಿತು ಪ್ರಶ್ನೆಗೆ, ತೀರಾ ಅನಿವಾರ್ಯ ಆದರಷ್ಟೇ ರಸ್ತೆ ಬಂದ್ ಮಾಡಬಹುದು. ಈ ರೀತಿ ಅರ್ಧ ವರ್ಷ ಬಂದ್ ಸರಿಯಲ್ಲ. ಬದಲಿ ಮಾರ್ಗ ಸರಿಪಡಿಸಿಕೊಳ್ಳದೇ ಮ್ಯಾಪ್ ನಲ್ಲಿ ಬೇರೆ ಮಾರ್ಗ ತೋರಿಸಿದರೆ ಸರಿಯಲ್ಲ ಎಂದರು.

ರವಿ ಹೆಗಡೆ ಹಳದೋಟ, ಜಿ ಆರ್ ಹೆಗಡೆ ಬೆಳ್ಳೆಕೇರಿ ಸುದ್ದಿಗೋಷ್ಠಿಯಲ್ಲಿ ಇದ್ದರು.

Share this article