ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಕೂಡಲೇ ಹೇಮಾವತಿ ಕಾಲುವೆಗೆ ನೀರು ಹರಿಸಬೇಕು ಹಾಗೂ ತಾಲೂಕಿನಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಕುಣಿಗಲ್ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಜೆಡಿಎಸ್ ಮುಖಂಡ ಕುಲುಮೇ ಪಾಳ್ಯದ ಶಿವಣ್ಣ ಅವರ ನೇತೃತ್ವದಲ್ಲಿ ಸಂಘಟನೆಗೊಂಡ ರೈತರು ಸರ್ಕಾರ ಮತ್ತು ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕುಲುಮೆ ಪಾಳ್ಯದ ಶಿವಣ್ಣ ವ್ಯವಸಾಯ ಮಾಡುವ ರೈತರು ತನ್ನ ಒಕ್ಕಲನ್ನು ಬಿಟ್ಟು ರಾಗಿ ಭತ್ತ ಕಟಾವಿನ ಸಂದರ್ಭದಲ್ಲಿ ನೀರಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಮನವಿಗೆ ಸ್ಪಂದಿಸದ ತಹಸೀಲ್ದಾರ್ ಕಚೇರಿಯಲ್ಲಿ ಇಲ್ಲದೇ ರೈತರ ಹಕ್ಕುಗಳನ್ನು ಮತ್ತು ಭಾವನೆಗಳನ್ನು ಕಡೆಗಣಿಸಿದ್ದಾರೆ ಎಂದರು, ಪ್ರತಿಭಟನೆಯ ಸಂಬಂಧ ತಹಸಿಲ್ದಾರ್ ಗೆ ನಾವು ಮನವಿ ಸಲ್ಲಿಸಿ, ಅವರಿಂದ ಒಪ್ಪಿಗೆ ಪಡೆದಿದ್ದೇವೆ ಆದರೂ ಕೂಡ ಕಚೇರಿಯಲ್ಲಿ ಇಲ್ಲದೆ ರೈತರನ್ನು ಕಡೆಗಣಿಸಿರುವುದು ಅವರಿಗೆ ರೈತನ ಮೇಲಿರುವ ಕಾಳಜಿ ಎಷ್ಟು ಎಂದು ಪ್ರಶ್ನಿಸಿದರು. ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್ ಮಾತನಾಡಿ, ಕಸಬಾ ಹೋಬಳಿ ಸೇರಿದಂತೆ ಕುಣಿಗಲ್ ಬಹುತೇಕ ಕೆರೆಗಳು ರೈತರ ಕೊಳವೆ ಬಾವಿಗಳಲ್ಲಿ ನೀರು ಇಲ್ಲದಂತಾಗಿದೆ. ನೀರಿನ ಸಮಸ್ಯೆ ರೈತರನ್ನು ಪ್ರತಿದಿನ ಕಾಡುತ್ತಿದ್ದು ಹಲವಾರು ರೈತ ಮಕ್ಕಳು ಗ್ರಾಮಾ ತೊರೆದು ಬೆಂಗಳೂರಿಗೆ ಹೋಗುತ್ತಿದ್ದಾರೆ. ಮಾರ್ಕೋನಹಳ್ಳಿ ಇಂದ ನಾಗಮಂಗಲಕ್ಕೆ ದೊಡ್ಡ ಕೆರೆಯಿಂದ ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ಆಸಕ್ತಿ ಕುಣಿಗಲ್ ಶಾಸಕರಿಗೆ ಇದೆ. ಹೊರತು ಕುಣಿಗಲ್ ನಿಂದ ಪೋಲಾಗುತ್ತಿರುವ ನೀರನ್ನು ಬಳಕೆ ಮಾಡುವ ಆಸಕ್ತಿ ಅವರಿಗೆ ಇಲ್ಲ ಎಂದರು. ಜೆಡಿಎಸ್ ಮುಖಂಡ ಡಾಕ್ಟರ್ ರವಿ ಡಿ ನಾಗರಾಜಯ್ಯ ಮಾತನಾಡಿ ತಾಲೂಕು ನೀರಿನ ಸಮಸ್ಯೆ ರೈತರ ಸಮಸ್ಯೆ ಬಗ್ಗೆ ಇಲ್ಲಿನ ಶಾಸಕರಿಗೆ ಅರಿವಿಲ್ಲ. ಅದಕ್ಕಾಗಿ ಅಕಾಲದಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ರಾಗಿ ಬಿತ್ತನೆಗೆ ನೀರು ಕೊಟ್ಟರು ಕೂಡ ರಾಗಿ ಅಸಮರ್ಪಕವಾಗಿ ಬೆಳೆಯುತ್ತಿಲ್ಲ ಎಂದರು. ತಾಲೂಕಿನ ಪಾಲಿನ ನೀರನ್ನು ಸರಿಯಾಗಿ ಬಳಸಿಕೊಳ್ಳಲು ಆಗದೆ ಮಾಗಡಿಗೆ ನೀರು ಹರಿಸುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ಕಪನೀಪಾಳ್ಯ ಶಿವಣ್ಣ ದಲಿತ ಮುಖಂಡ ವರದರಾಜು, ಜಿಕೆ ನಾಗಣ್ಣ ಮೋದೂರ್ ಗಂಗಾಧರ್ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.