- ಫಲಾನುಭವಿಗಳಿಗೆ ಜೇನು ಸಾಕಣೆ ಪೆಟ್ಟಿಗೆಗಳ ವಿತರಿಸಿ ಶಾಸಕ ಬಸವರಾಜು - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ರೈತರು ತೋಟ ಬೆಳೆಗಳ ಜೊತೆಯಲ್ಲಿ ಜೇನು ಸಾಕಾಣಿಕೆ, ಕುರಿ ಸಾಕಾಣಿಕೆ, ಹೈನುಗಾರಿಕೆಯಂತಹ ಉಪ ಕಸುಬುಗಳನ್ನು ಮಾಡಿಕೊಂಡು ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕಾಕಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಿಕೊಡುತ್ತೇನೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜೇನುಕೃಷಿ ತರಬೇತಿ ಮತ್ತು ಪರಂಪರಾಗತ ಕೃಷಿ ವಿಕಾಸ ಯೋಜನೆಯಲ್ಲಿ 99 ಜನ ಪರಿಶಿಷ್ಟ ಜಾತಿ-ಪಂಗಡದ ಫಲಾನುಭವಿಗಳಿಗೆ ಜೇನು ಸಾಕಾಣಿಕಾ ಪೆಟ್ಟಿಗೆಗಳನ್ನು ವಿತರಿಸಿ ಅವರು ಮಾತನಾಡಿದರು.
ಗುಣಮಟ್ಟದ ಜೇನುತುಪ್ಪಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಜೇನುಕೃಷಿ ಮಾಡುವ ರೈತರು ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಜೇನು ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು. ತೋಟಗಾರಿಕ ಬೆಳೆಗಳು ವಾರ್ಷಿಕ ಬೆಳೆಗಳಾಗಿರುತ್ತವೆ. ಇದರ ಜೊತೆಗೆ ಉಪ ಕಸುಬುಗಳನ್ನು ಮಾಡಿಕೊಂಡಾಗ ಮಾತ್ರ ಹೆಚ್ಚಿನ ಆರ್ಥಿಕತೆ ಸಾಧಿಸಬಹುದು ಎಂದು ತಿಳಿಸಿದರು.ಪ್ರತಿಯೊಬ್ಬ ರೈತನಿಗೂ ಕೃಷಿಯಲ್ಲಿ ವಿನೂತನವಾದ ಪ್ರಯೋಗಗಳನ್ನು ಮಾಡಬೇಕೆಂಬ ಬಯಕೆ ಇದೆ. ಆದರೆ, ಆರ್ಥಿಕತೆ ಕೊರತೆಯಿಂದ ಇಂತಹ ಉಪ ಕಸುಬುಗಳನ್ನು ಮಾಡಲು ಹೋಗುವುದಿಲ್ಲ. ಸರ್ಕಾರ ರೈತರ ಆರ್ಥಿಕತೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಮಾರಂಭದಲ್ಲಿ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ಗ್ರಾಪಂ ಅಧ್ಯಕ್ಷೆ ಭಾಗ್ಯ ಗುಜ್ಜರ್, ಉಪಾಧ್ಯಕ್ಷೆ ಶೃತಿ ರುದ್ರೇಶ್, ಕಾಕನೂರು ಎಂ.ಬಿ. ನಾಗರಾಜ್, ಪಿ.ಎಸ್.ಐ. ಜಗದೀಶ್, ರಹಮತ್ ಹುಲ್ಲಾ, ರಂಗನಾಥ್, ಪಿಡಿಒ ಮಾರುತಿ ರೈತರು ಹಾಜರಿದ್ದರು.- - -
ಕೋಟ್ ಚಿಕ್ಕ ಜಾಗದಲ್ಲಿಯೂ ಸಹ ಜೇನುಕೃಷಿ ಮಾಡಬಹುದಾಗಿದೆ. ಅಧಿಕಾರಿಗಳು ಸಹ ಸರ್ಕಾರದ ಇಂತಹ ಯೋಜನೆಗಳ ಬಗ್ಗೆ ಜನರಿಗೆ ಹೆಚ್ಚು ಹೆಚ್ಚು ಮಾಹಿತಿ ಸಿಗುವಂತೆ ಪ್ರಚಾರ ಮಾಡಬೇಕಾಗಿದೆ- ಬಸವರಾಜು ಶಿವಗಂಗಾ, ಶಾಸಕ
- - - -27ಕೆಸಿಎನ್‌ಜಿ1:ಅರ್ಹ ಪರಿಶಿಷ್ಟ ಜಾತಿ- ಪಂಗಡದ ತೋಟ ಬೆಳೆಗಾರ ಫಲಾನುಭವಿಗಳಿಗೆ ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜು ಶಿವಗಂಗಾ ಜೇನು ಸಾಕಾಣಿಕಾ ಪೆಟ್ಟಿಗೆಗಳನ್ನು ವಿತರಿಸಿದರು.