ಸಾವಯವ ಕೃಷಿಗೆ ಆದ್ಯತೆ ನೀಡಿ, ಮಣ್ಣಿನ ಫಲವತ್ತತೆ ರಕ್ಷಿಸಿ: ಡಾ.ಬಿ.ಎನ್. ಧನಂಜಯ ಅಭಿಮತ

KannadaprabhaNewsNetwork |  
Published : May 05, 2025, 12:52 AM IST
50 | Kannada Prabha

ಸಾರಾಂಶ

ಕೃಷಿಕರು ದುಶ್ಚಟಗಳಿಗೆ ಬಲಿಯಾಗಬಾರದು. ರೈತರು ಕಡ್ಡಾಯವಾಗಿ ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು ಹಾಗೂ ದೇಶಿಯ ತಳಿಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಸಾವಯವ ಕೃಷಿಗೆ ಆದ್ಯತೆ ನೀಡಿ, ಮಣ್ಣಿನ ಫಲವತ್ತತೆಯನ್ನು ರಕ್ಷಿಸಬೇಕು. ಮಣ್ಣು ಕೃಷಿಯ ಕಣ್ಣು ಎಂದು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ಬಿ.ಎನ್. ಧನಂಜಯ ತಿಳಿಸಿದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ರೈತರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬದುಕಿನ ಆಶ್ರಯದಾತರು. ಅವರು ಬೆಳೆಯುವ ಬೆಳೆಯಿಂದಲೇ ಜೀವನ. ಭಾರತದಲ್ಲಿ ಕೃಷಿಗೆ ಅತ್ಯಂತ ಮಹತ್ವವಿದೆ. ಕೃಷಿಯನ್ನು ಖುಷಿಯಿಂದ ಮಾಡಬೇಕು ಎಂದರು.

ಕೃಷಿಕರು ದುಶ್ಚಟಗಳಿಗೆ ಬಲಿಯಾಗಬಾರದು. ರೈತರು ಕಡ್ಡಾಯವಾಗಿ ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು ಹಾಗೂ ದೇಶಿಯ ತಳಿಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ನೈಸರ್ಗಿಕ ಕೃಷಿ ತಜ್ಞ ಚಂದ್ರಶೇಖರ್ ನಾರಣಾಪುರ ಮಾತನಾಡಿ, ಬಹು ಬೆಳೆ ಪದ್ಧತಿಯನ್ನು ಪ್ರಪಂಚಕ್ಕೆ ಪರಿಚಯಿಸಿದವರು ಭಾರತೀಯರು. ಕೃಷಿಯ ಜೊತೆಗೆ ಪಶು ಸಂಗೋಪನೆ, ಕುರಿ ಸಾಕಾಣಿಕೆ, ಮೀನುಗಾರಿಕೆ ಮುಂತಾದ ಉಪಕಸುಬುಗಳನ್ನು ಮೈಗೂಡಿಸಿಕೊಳ್ಳಬೇಕು. ಏಕ ಬೆಳೆ ಪದ್ಧತಿಯಿಂದ ಮಣ್ಣು ಬರಡಾಗುತ್ತದೆ. ಅದಕ್ಕಾಗಿ ವೈವಿದ್ಯಮಯ ಬೆಳೆಗಳನ್ನು ಬೆಳೆಯಬೇಕು. ಹೆಚ್ಚು ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಡಾ.ಬಿ.ಎನ್. ಜ್ಞಾನೇಶ್‌ ಮಾತನಾಡಿ, ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಕೃಷಿ ಇಳುವರಿ ಕುಸಿತಗೊಂಡಿದೆ. ಅತಿವೃಷ್ಟಿ, ಅನಾವೃಷ್ಟಿ, ವಾಯುಮಾಲಿನ್ಯ, ಸಮುದ್ರಮಟ್ಟದ ಏರಿಕೆಯಂತಹ ಸಮಸ್ಯೆಗಳು ಉಂಟಾಗುತ್ತಿವೆ. ಕೈಗಾರಿಕೀಕರಣ, ನಗರೀಕರಣ ಕೃಷಿ ಭೂಮಿಯಲ್ಲಿ ಅತ್ಯಧಿಕ ರಾಸಾಯನಿಕಗಳ ಬಳಕೆಯಿಂದಾಗಿ ವಾತಾವರಣ ಕಲುಷಿತಗೊಂಡಿದೆ ಎಂದು ಹೇಳಿದರು.

ಶಿಬಿರಾರ್ಥಿಗಳು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಮತ್ತು ಯೋಗಾಭ್ಯಾಸಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮಧ್ಯಾಹ್ನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಕೃಷಿಗೆ ಸಂಬಂಧಿಸಿದಂತೆ ವಿವಿಧ ಬೆಳೆಗಳು, ಮಣ್ಣಿನ ಸಂರಕ್ಷಣೆ, ನೀರಾವರಿ ಪದ್ಧತಿ ಅಳವಡಿಕೆ, ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆ ಕುರಿತು ಸಂವಾದ ನಡೆಸಿದರು.

ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಬೆಳೆಗಳ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಎಂ. ಧ್ಯಾನಾ ಶಿವಬಸಪ್ಪ ಪ್ರಾರ್ಥಿಸಿದರು. ಡಾ.ಜಿ.ಎಂ. ವಿನಯ್ ಸ್ವಾಗತಿಸಿದರು. ಶಾಮರಾಜು ವಂದಿಸಿದರು. ಡಾ.ವೈ.ಪಿ. ಪ್ರಸಾದ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ