ಕನ್ನಡಪ್ರಭ ವಾರ್ತೆ ಪಾವಗಡ
ಈ ಕುರಿತು ಶನಿವಾರ ಪಟ್ಟಣದ ತಾಪಂ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಂಡಯ್ಯ, ನಾನು ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತ ಮಾಜಿ ಸಚಿವ ವೆಂಕಟರಮಣಪ್ಪ ಅವರ ಅಪ್ಪಟ ಬೆಂಬಲಿಗರಾಗಿದ್ದು ಅವರ ಮಾರ್ಗದರ್ಶನ ಹಾಗೂ ಗರಡಿಯಲ್ಲಿ ಬೆಳೆದಿದ್ದೇನೆ. ಕಳೆದ 10ವರ್ಷದಿಂದ ಪಕ್ಷ ಸಂಘಟನೆಗೆ ಶ್ರಮವಹಿಸಿ ಕೆಲಸ ಮಾಡಿದ್ದರೂ ಸಹ ನನ್ನನ್ನು ಸಹ ಗುರ್ತಿಸದೇ ನಿರ್ಲಕ್ಷ್ಯ ಮಾಡಿದ್ದು ಅತ್ಯಂತ ನೋವು ತಂದಿದೆ. ಇದೇ ಜು.21ಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಇತರೆ ಸಚಿವರು ಪಾವಗಡಕ್ಕೆ ಆಗಮಿಸಲಿದ್ದು ಯಾರು ಸಹ ಬನ್ನಿ ಎಂದು ಆಹ್ವಾನ ನೀಡದೇ ಕಡೆಗಾಣಿಸಿದ್ದಾರೆ. ತಾಲೂಕಿನ ವಿಕಲಚೇತರನ್ನು ಸಂಘಟಿಸಿ ಚುನಾವಣೆಯಲ್ಲಿ ಮತ ನೀಡಿ ನಮ್ಮ ಶಾಸಕರ ಗೆಲುವಿಗೆ ಹೆಚ್ಚು ಒತ್ತು ನೀಡಿದ್ದೇವೆ. ಸೌಜನ್ಯಕ್ಕಾದರೂ ಗುರ್ತಿಸಿ ಕರೆದಿಲ್ಲ .ಕಳೆದ 10ವರ್ಷದ ಹಿಂದೆ ಬೆಂಗಳೂರು ಹಾಗೂ ಬಳ್ಳಾರಿಯ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗವಹಿಸಲಾಗಿತ್ತು. ಆ ವೇಳೆ ನನ್ನ ಪಕ್ಷ ನಿಷ್ಠೆ, ಗುರ್ತಿಸಿ ಬಳ್ಳಾರಿಯ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಈಗಿನ ದೆಹಲಿಯ ಪ್ರತಿನಿಧಿ ಟಿ.ಬಿ.ಜಯಚಂದ್ರ ಇತರೆ ಗಣ್ಯರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದು ಎಂದೂ ಮರೆಯುವಂತಿಲ್ಲ. ತಾಲೂಕಿನಲ್ಲಿ ಸುಮಾರು 40ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಕುರುಬ ಸಮಾಜದ ಜನ ಸಂಖ್ಯೆ ಹೊಂದಿದೆ. ಸರ್ಕಾರದ ವಿವಿಧ ಯೋಜನೆ ಅಡಿ ಸೌಲಭ್ಯ ಸಹ ಕಲ್ಪಿಸುತ್ತಿಲ್ಲ. ಕುರುಬ ಸಮಾಜದ ಪ್ರಗತಿಗೆ ವಿಶೇಷ ಒತ್ತು ನೀಡುವಂತೆ ಸಿಎಂ ಹಾಗೂ ಇತರೆ ಸಚಿವರಲ್ಲಿ ಅವರು ಮನವಿ ಮಾಡಿದ್ದಾರೆ.