ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕಳೆದ ಅಗಷ್ಟ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಮುಂಗಾರು ಹಂಗಾಮಿನಲ್ಲಿ ಕೊಯ್ಲಿಗೆ ಬಂದಿದ್ದ ಹೆಸರು ಬೆಳೆ ಶೇ. 90 ರಷ್ಟು ಹಾನಿ ಸಂಭವಿಸಿವೆ ಎಂದು ತಾಲೂಕು ಕೃಷಿ ಅಧಿಕಾರಿ ರೇವಣೆಪ್ಪ ಮನಗೂಳಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಾಸಿಕ ಸಭೆಯಲ್ಲಿ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.ತಾಲೂಕಿನಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆಯ ಮಳೆಯಾಗಿದ್ದರೆ ಅಗಷ್ಟ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಶೇಂಗಾ, ಮೆಕ್ಕೆಜೋಳ, ಬಿಟಿ ಹತ್ತಿ ಬೆಳೆ ಹಾನಿ ಆಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಹೆಸರು ಬೆಳೆ ಹಾನಿಗೋಳಗಾಗಿವೆ. ಶೇ. 90 ರಷ್ಟು ಪ್ರಮಾಣದ ಹೆಸರು ಬೆಳೆ ಹಾನಿ ಸಂಭವಿಸಿದೆ.
ತಾಲೂಕಿನಲ್ಲಿ ಸುಮಾರು 5850 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ 40000 ಹೆಚ್ಚು ಹೆಕ್ಷೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. 3650 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಳಾಗಿ ಹೋಗಿದೆ. ಅಲ್ಲದೆ ಶೇಂಗಾ, ಮೆಕ್ಕೆಜೋಳ, ಬಿಟಿ ಹತ್ತಿ ಬೆಳೆಗಳು ಹಾನಿಯಾಗಿದ್ದು ಸರ್ಕಾರಕ್ಕೆ ಈ ಕುರಿತು ವಿವರವಾದ ಮಾಹಿತಿ ಕಳುಹಿಸಿ ಕೊಡಲಾಗಿದೆ. ತೋಟಗಾರಿಕೆ ಇಲಾಖೆ 531 ಹೆಕ್ಟೇರ್ ಮೆಣಸಿನಕಾಯಿ, ಈರುಳ್ಳಿ 83 ಹೇಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಹೇಳಿದರು.ಈ ವೇಳೆ ನೋಡಲ್ ಅಧಿಕಾರಿ ಎಂ.ವಿ. ಚಳಗೇರಿ ಮಾತನಾಡಿ ರೈತರು ಸಾಕಷ್ಟು ಪ್ರಮಣದಲ್ಲಿ ಬೆಳೆ ಹಾನಿ ಅನುಭವಿಸಿ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಬೆಳೆ ಹಾನಿಯ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಿ ರೈತರಿಗೆ ಅನುಕೂಲವಾಗುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಇಲಾಖೆಗೆ ಬೇಕಾಗಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು. ಲೋಕೋಪಯೋಗಿ ಇಲಾಖೆಯಡಿಯಲ್ಲಿ ನಿರ್ಮಾಣವಾಗಿರುವ ವಸತಿ ನಿಲಯಗಳಲ್ಲಿನ ಸೌಲಭ್ಯಗಳ ಬಗೆಗೆ ವರದಿ ತಯಾರಿಸಿ ಸರ್ಕಾರಕ್ಕೆ ನೀಡಬೇಕು ಎಂದು ಹೇಳಿದರು.ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಕಟ್ಟಡ ನಿರ್ಮಾಣ, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ₹90 ಲಕ್ಷ ಅನುದಾನ ನಿಗದಿಪಡಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಮಲ್ಲಿಕಾರ್ಜುನಗೌಡ ಪಾಟೀಲ ಹೇಳಿದರು.
ಆರೋಗ್ಯ ಇಲಾಖೆಯ ತಾಲೂಕು ವೈದ್ಯಾಧಿಕಾರಿ ಡಾ. ಸುಭಾಸ ದಾಯಗೊಂಡ ಮಾತನಾಡಿ, ಎಪ್ರೀಲ್ ತಿಂಗಳಿಂದ ಅಗಷ್ಟ ತಿಂಗಳವರೆಗೆ ತಾಲೂಕಿನಲ್ಲಿ 1 ಬಾಣಂತಿ ಸಾವು, 6 ಶಿಶು ಮರಣ ಸಂಭವಿಸಿದ್ದು. ಹೆಚ್ಚು ಮಳೆಗಾಲ ತಾಲೂಕಿನಲ್ಲಿ ಆವರಿಸಿದ್ದರಿಂದ ಚಿಕ್ಕ ಮಕ್ಕಳಲ್ಲಿ ಕೆಮ್ಮು ಶೀತ ಮತ್ತು ಜ್ವರದ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದು. ತಾಲೂಕಿನ ವೈದ್ಯರು ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಕ್ರಮ ಕೈಗೊಳ್ಳಾಗಿದೆ ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮೃತ್ಯುಂಜಯ ಗುಡ್ಡದ್ವಾನೇರಿ ಮಾತನಾಡಿ, ಯಳವತ್ತಿ, ಗೊಜನೂರು ಮತ್ತು ಅಕ್ಕಿಗಂದ ಗ್ರಾಮದ ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾಮಗಾರಿ ಮುಗಿದು ಹೋಗಿ ವರ್ಷಗಳೆ ಕಳೆದಿದ್ದರೂ ಅಧಿಕಾರಿಗಳ ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಲ್ಲ, ಆದ್ದರಿಂದ ಇನ್ನೊಂದು ತಿಂಗಳಲ್ಲಿ ಅವುಗಳ ಉದ್ಗಾಟನೆಯಾಗುವಂತೆ ನೋಡಿಕೊಳ್ಳಬೇಕು ಎಂದು ತಾಪಂ ಇಓ ಕೃಷ್ಣಪ್ಪ ಧರ್ಮರ ಹೇಳಿದರು.
ಜೆಜೆಎಂ ಕಾಮಗಾರಿ ಅರ್ಧಕ್ಕೆ ಮಾಡಿ ಕೈ ಬಿಟ್ಟಿರುವ ಗುತ್ತಿಗೆದಾರರ ಇಎಂಡಿ ಹಣ ಮುಟ್ಟುಗೋಲು ಹಾಕಿಕೊಳ್ಳುವ ಜತೆಯಲ್ಲಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡಲಾಗುವುದು ಎಂದು ತಾಪಂ ಇಓ ಹೇಳಿದರು.ಈ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಯ ಕುಂದು ಕೊರತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಪರಾಮರ್ಶ ನಡೆಸಿದ್ದು ಕಂಡು ಬಂದಿತು.