ವಿಧಾನಮಂಡಲ ಕಲಾಪ ಪ್ರಾರಂಭವಾಗುವ ಮುನ್ನವೇ ರೇಷನ್‌ ಕಾರ್ಡ್‌ ನೀಡಿ : ಆರ್‌. ಅಶೋಕ್‌

KannadaprabhaNewsNetwork |  
Published : Nov 22, 2024, 01:18 AM ISTUpdated : Nov 22, 2024, 07:25 AM IST
ಅಶೋಕ್‌ | Kannada Prabha

ಸಾರಾಂಶ

ವಿಧಾನಮಂಡಲ ಕಲಾಪ ಪ್ರಾರಂಭವಾಗುವ ಮುನ್ನವೇ ರಾಜ್ಯ ಸರ್ಕಾರ ಜನರಿಗೆ ರೇಷನ್‌ ಕಾರ್ಡ್‌ ವಾಪಸ್‌ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

 ಬೆಂಗಳೂರು : ವಿಧಾನಮಂಡಲ ಕಲಾಪ ಪ್ರಾರಂಭವಾಗುವ ಮುನ್ನವೇ ರಾಜ್ಯ ಸರ್ಕಾರ ಜನರಿಗೆ ರೇಷನ್‌ ಕಾರ್ಡ್‌ ವಾಪಸ್‌ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಜಯನಗರದ ಅರಸು ಕಾಲೋನಿಯಲ್ಲಿ ರೇಷನ್‌ ಕಾರ್ಡ್‌ ರದ್ದುಗೊಂಡ ಕುಟುಂಬದವರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರೇಷನ್‌ ಕಾರ್ಡ್‌ ವಾಪಸ್‌ ನೀಡಲು ಕ್ರಮ ಕೈಗೊಳ್ಳಲಿದ್ದರೆ ಬಿಜೆಪಿಯು ರಾಜ್ಯದಲ್ಲಿ ತೀವ್ರ ಹೋರಾಟ ನಡೆಸಲಿದೆ. ಸರ್ಕಾರಿ ಕಚೇರಿಗಳಿಗೆ ಮತ್ತು ವಿಧಾನಸೌಧಕ್ಕೆ ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಎಂದು ಹೇಳಿ ಕನ್ನಭಾಗ್ಯ ಕೊಟ್ಟಿದ್ದಾರೆ. ಅನ್ನವನ್ನು ಕದ್ದು ಲಕ್ಷಾಂತರ ಜನರಿಗೆ ಅನ್ಯಾಯ ಮಾಡಿದ್ದಾರೆ. ಅಂಕಿ ಅಂಶದ ಪ್ರಕಾರ, 250 ಸರ್ಕಾರಿ ನೌಕರರ ಬಳಿ ರೇಷನ್‌ ಕಾರ್ಡ್‌ ಇದ್ದರೂ, 12 ಲಕ್ಷ ಜನರ ಕಾರ್ಡ್‌ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಆಹಾರ ಸಚಿವರು ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ. 

ಕಾಂಗ್ರೆಸ್‌ ನಾಯಕರು ತಪ್ಪು ಮಾಡಿದ ಮೇಲೆ ಜನರು ಯಾಕೆ ಮರಳಿ ಅರ್ಜಿ ಹಾಕಬೇಕು? ಎಂದು ಕಿಡಿಕಾರಿದರು.ಮರಳಿ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಒಂದು ಕಾರ್ಡ್‌ಗೆ 10-15 ಸಾವಿರ ರು. ಲಂಚ ನೀಡಬೇಕಾಗುತ್ತದೆ. ಯಾರೂ ಅರ್ಜಿ ಹಾಕಬಾರದು, ಸರ್ಕಾರವೇ ಮರಳಿ ರೇಷನ್‌ ಕಾರ್ಡ್‌ ಕೊಡಬೇಕು. ಬಡವರ ರೇಷನ್‌ ಕಾರ್ಡ್‌ ರದ್ದು ಮಾಡಲಾಗಿದ್ದು, ಇದರ ವಿರುದ್ಧ ಸದನದೊಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಏಕಾಏಕಿ ರೇಷನ್‌ ಕಾರ್ಡ್‌ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದ್ದು, ರಸ್ತೆ ಗುಂಡಿ ಮುಚ್ಚಲು ಕೂಡ ಹಣವಿಲ್ಲ. 20-30 ಸಾವಿರ ಕೋಟಿ ರೂ. ಉಳಿಸಿ, ಶಾಸಕರ ಬಂಡಾಯ ಶಮನಕ್ಕೆ ಬಳಸಲಾಗುತ್ತದೆ. ಅಲ್ಲದೇ, ಸಚಿವರ ಮನೆ ಆಧುನೀಕರಣಕ್ಕೆ 40-50 ಕೋಟಿ ರು., ಮುಖ್ಯಮಂತ್ರಿಗಳ ಮನೆ ನವೀಕರಣಕ್ಕೆ 2 ಕೋಟಿ ರು. ಖರ್ಚು ಮಾಡಲಾಗಿದೆ. ಆದರೆ ಬಡ ಜನರಿಗೆ ಅಕ್ಕಿ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಜೀವನ ನರಕ:

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಜೀವನ ನರಕ ಮಾಡಲು ಹೊರಟಿದ್ದಾರೆ. ಕಡು ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದೆ. ಅವರು ತೆರಿಗೆ ಕಟ್ಟುವವರು ಎಂಬುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಅವರೆಲ್ಲಾ ತೆರಿಗೆ ಪಾವತಿಸಲು ಸಾಧ್ಯವೇ? ಬಿಪಿಎಲ್ ಕಾರ್ಡ್ ರದ್ದಾದರೆ ಕೇವಲ ಅಕ್ಕಿ ಮಾತ್ರ ರದ್ದಾಗುವುದಿಲ್ಲ, ಬದಲಿಗೆ ಔಷಧಿ , ಆಸ್ಪತ್ರೆ ಸೌಲಭ್ಯ ಎಲ್ಲವೂ ಸ್ಥಗಿತವಾಗಲಿದೆ ಎಂದು ಕಿಡಿಕಾರಿದರು. 

ಕಾರ್ಡ್ ರದ್ದು ಮಾಡಿರುವುದನ್ನು ವಿರೋಧಿಸಿದ ಬಳಿಕ ಈಗ ವಾಪಸ್ ತೆಗೆದುಕೊಳ್ಳುವ ಕೆಲಸಕ್ಕೆ ಸರ್ಕಾರ ಮುಂದಾಗುತ್ತಿದೆ. ರೇಷನ್ ಕಾರ್ಡ್ ರದ್ದಾದವರು ಅರ್ಜಿ ಹಾಕಿದರೆ ತಕ್ಷಣ ವಾಪಸ್ ಕೊಡಲಾಗುವುದು ಎಂಬುದಾಗಿ ತಿಳಿಸಲಾಗಿದೆ. ಅರ್ಜಿ ಹಾಕಿದ ಮೇಲೆ ಕಾರ್ಡ್ ಬರುವುದು ಯಾವಾಗ? ಅಲ್ಲಿಯವರೆಗೆ ಕಾರ್ಡ್ ರದ್ದಾಗಿರುವ ಬಡವರು ಏನು ತಿನ್ನಬೇಕು ಎಂದು ಸರ್ಕಾರ ನಡೆಯನ್ನು ಟೀಕಿಸಿದರು.ಈ ಸಂದರ್ಭದಲ್ಲಿ ಶಾಸಕ ಸಿ.ಕೆ.ರಾಮಮೂರ್ತಿ. ಸಂಸದ ಪಿ.ಸಿ.ಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ