ಹೊನ್ನಾಳಿ: ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ರೈತರನ್ನ ಕಷ್ಟಕ್ಕೆ ದೋಡುತ್ತಿರುವ ಸರ್ಕಾರ ಹಾಗೂ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಎಚ್ಚರಿಕೆಯ ನೀತಿ ಪಾಠ ಹೇಳಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಗುರುವಾರ ಸಂಘದ ಗ್ರಾಮ ಘಟಕದ ಧ್ವಜ ಸ್ಥಂಭ ಹಾಗೂ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.ರೈತರ ಸಹಾಯಕ್ಕಾಗಿ ಹುಟ್ಟಿಕೊಂಡ ಈ ಸಂಘವು ಹೊನ್ನಾಳಿ ತಾಲೂಕಿನ ಎಸ್.ಎಚ್.ರುದ್ರಪ್ಪ. ಪ್ರೊ.ನಂಜುಂಡಸ್ವಾಮಿ ಅವರಿಂದ 1986ರಲ್ಲಿ ಜನ್ಮತಾಳಿದ ಕರ್ನಾಟಕ ರಾಜ್ಯ ರೈತ ಸಂಘ ಇಂದು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದು ತಿಳಿಸಿದರು.
ಗೊಬ್ಬರ ಔಷಧಿ, ರೈತರ ಕೃಷಿ ಉಪಕರಣಗಳ ಬೆಲೆಯನ್ನು ಹೆಚ್ಚು ಮಾಡುತ್ತಿರುವ ಸರ್ಕಾರ ರೈತರು ವರ್ಷವಿಡಿ ಜಮೀನುಗಳಲ್ಲಿ ದುಡಿದು ತಾವು ಬೆಳೆದ ಬೆಳೆಗಳಿಗೆ ನಿಗದಿಪಡಿಸಿದ ದರ ಸಿಗದೇ ಆದಾಯಕ್ಕಿಂತ ನಷ್ಟವನ್ನೇ ಅನುಭವಿಸಿ ಸಾಲ ತೀರಿಸಲಾಗದೆ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾನೆ. ಕೃಷಿ ಬೆಲೆ ಆಯೋಗ ಭತ್ತಕ್ಕೆ ಪ್ರತಿ ಕ್ವಿಂಟಲ್ ಗೆ 3800 ರುಪಾಯಿ ನಿಗದಿಪಡಿಸಿದೆ, ಆದರೆ ರೈತರಿಗೆ ಮಾತ್ರ ನೀಡುತ್ತಿಲ್ಲ. ಈಗಲಾದರೂ ಸಂಬಂಧಪಟ್ಟ ಸರ್ಕಾರಗಳು ಬೆಳೆಗಳಿಗೆ ವಾಸ್ತವ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಅಗ್ರಹಿಸಿದರು.ದೇಶಕ್ಕೆ ಅನ್ನ ನೀಡುವ ರೈತ ತನ್ನ ಕುಟುಂಬವನ್ನು ನಿರ್ವಹಣೆ ಮಾಡದೇ ಕಷ್ಟಪಡುತ್ತಿದ್ದಾನೆ. ಪ್ರತಿ ಗ್ರಾಮದಲ್ಲೂ ಪ್ರತಿಮನೆಯಲ್ಲೂ ಒಬ್ಬೊಬ್ಬ ಪ್ರಗತಿಪರ ರೈತರಾಗಬೇಕು. ಹಸಿರು ಶಾಲುಗಳನ್ನು ಹಾಕಿಕೊಂಡು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಶಿವಮೊಗ್ಗ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಮಾತನಾಡಿ, ರೈತರು ಔಷಧಿ ಗೊಬ್ಬರಗಳ ಮೇಲೆ ಹೆಚ್ಚು ಅವಲಂಭಿತರಾದೆ ಮನೆಯಲ್ಲಿ ನಾಟಿ ಹಸುಗಳನ್ನು ಸಾಕಿ ಅವುಗಳಿಂದ ಜೀವಾಮೃತ ತಯಾರಿಸಿ ಅವುಗಳ ಹಾಲನ್ನು ಮಕ್ಕಳಿಗೆ ನೀಡಿ. ಅದರ ಸಗಣಿಯಿಂದ ಜೀವಾಮೃತ ತಯಾರಿಸಿ ಬೆಳೆಗಳಿಗೆ ಬಳಸಿ ಇದರಿಂದ ಭೂಮಿ ಫಲವತ್ತಾಗುತ್ತದೆ. ಯಾವುದೇ ಕಾರಣಕ್ಕೂ ತೋಟಗಳಲ್ಲಿ ಉಳಿಮೆ ಮಾಡಿಸಬೇಡಿ. ಇವುಗಳಿಗೆ ಬಳಸುವ ಹಣವೂ ಕುಟುಂಬ ಆರ್ಥಿಕ ಸಹಾಯವಾಗುತ್ತದೆ ಎಂದರು.
ಗ್ರಾಮ ಘಟಕದ ಅಧ್ಯಕ್ಷ ಮಲ್ಲೇಶಾಚಾರಿ.ಎಲ್.ಎನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷ ಚಂದ್ರಪ್ಪ, ಹೊನ್ನಾಳಿ ತಾಲೂಕಿನ ಅಧ್ಯಕ್ಷ ಗಣೇಶ್, ನ್ಯಾಮತಿ ತಾಲೂಕಿನ ಅಧ್ಯಕ್ಷ ಬಸವರಾಜಪ್ಪ, ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ ವಿವಿಧ ಭಾಗಗಳಿಂದ ಆಗಮಿಸಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು