ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ತಯಾರಾಗುವ ಸೀರೆಗಳಿಗೆ ಜಿಐ ಟ್ಯಾಗ್ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಲಿದ್ದು, ಸೂರತ್ ಸೀರೆಗಳ ನಿಷೇದಕ್ಕೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ವಿಕಾಸಸೌಧದಲ್ಲಿ ಶುಕ್ರವಾರ ದೊಡ್ಡಬಳ್ಳಾಪುರ ಸ್ಥಳೀಯ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಆಗಮಿಸಿದ್ದ ದೊಡ್ಡಬಳ್ಳಾಪುರ ನೇಕಾರರೊಂದಿಗೆ ಅವರು ಸಭೆ ನಡೆಸಿ ಮಾತನಾಡಿದರು.ಪವರ್‌ಲೂಮ್ ರಿಸರ್ವೇಷನ್ ಆಕ್ಟ್ ತಿದ್ದುದಪಡಿಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ತೆರಳಲಾಗುವುದು. ರಾಜ್ಯ ಸರ್ಕಾರದ ಇತಿಮಿತಿಯಲ್ಲಿ ಸಾಧ್ಯವಿರುವ ನೆರವು ನೀಡಲಾಗುವುದು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ನಿಯೋಗ ತೆರಳಿ ಒತ್ತಡ ತರಲಾಗುವುದು ಎಂದು ಹೇಳಿದರು.
ದೊಡ್ಡಬಳ್ಳಾಪುರಕ್ಕೆ ಬರುವ ಸೂರತ್ ಸೀರೆಗಳನ್ನು ನಿಷೇಧ ಮಾಡಬೇಕು ಎಂಬ ಬೇಡಿಕೆ ಸ್ಥಳೀಯ ನೇಕಾರರ ಹಿತರಕ್ಷಣೆ ದೃಷ್ಟಿಯಿಂದ ಸಾಧುವಾಗಿದೆ. ಆದರೆ ಕಾನೂನಿನಲ್ಲಿ ಅವಕಾಶ ಇದೆಯೇ? ನಿಷೇಧ ಮಾಡಬಹುದೇ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹ ಮಾಡಲಿದ್ದು, ಅವಕಾಶವಿದ್ದರೆ ಖಂಡಿತ ನಿಷೇಧ ಮಾಡಲಾಗುವುದು ಎಂದು ಭರವಸೆ ನೀಡಿದರು.ದೊಡ್ಡಬಳ್ಳಾಪುರದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮಳಿಗೆಗಳ ನಿರ್ಮಾಣ ಹಾಗೂ ನೇಕಾರರ ಭವನ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದು, ಈ ಯೋಜನೆಗೆ ಜಾಗ ಗುರುತಿಸಲಾಗುವುದು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಅಧುನೀಕರಣ ಅನಿವಾರ್ಯವಾಗಿದ್ದು, ಕೈಮಗ್ಗ ಹೊಂದಿರುವವರು ರೇಪಿಯರ್ ಮಗ್ಗಕ್ಕೆ ಪರಿವರ್ತನೆ ಹೊಂದಲು ಬಯಸಿದರೆ ಸಬ್ಸಿಡಿ ಕೊಡುವ ಪ್ರಯತ್ನ ಮಾಡುತ್ತೇವೆ. ಆದರೆ ದೊಡ್ಡಬಳ್ಳಾಪುರದಲ್ಲಿರುವ 25 ಸಾವಿರ ನೇಕಾರರಿಗೆ ಏಕಕಾಲಕ್ಕೆ ಸಬ್ಸಿಡಿ ಕೊಡುವುದು ಕಷ್ಟವಾಗಬಹುದು. ಹಂತ ಹಂತವಾಗಿ ರೇಪಿಯರ್ ಮಗ್ಗಕ್ಕೆ ಬದಲಾವಣೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.ಮಗ್ಗಗಳಿಗೆ ವಿದ್ಯುತ್ ಸಬ್ಸಿಡಿ ಕೊಡಬೇಕು ಎಂಬ ಬೇಡಿಕೆ ಬಂದ ಕಾರಣದಿಂದಲೇ ರಾಜ್ಯ ಸರ್ಕಾರ 10 ಎಚ್‌ಪಿವರೆಗಿನ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದೆ. ಆದರೆ ಈಗ ರೇಪಿಯರ್ ಮಗ್ಗಗಳಿಗೆ
ಶಾಸಕ ಧೀರಜ್ ಮುನಿರಾಜು ಮಾತನಾಡಿ, ಸೂರತ್ ಸೀರೆಗಳಿಂದಲೇ ದೊಡ್ಡಬಳ್ಳಾಪುರ ನೇಕಾರರಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಸೂರತ್ ಸೀರೆಗಳನ್ನು ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ರೇಪಿಯರ್ ಮಗ್ಗಗಳಲ್ಲಿ ಸೀರೆಗಳನ್ನು ನೇಯಲು ಅವಕಾಶ ಇಲ್ಲ. ಆರ್. ಎಲ್. ಜಾಲಪ್ಪ ಅವರು ಜವಳಿ ಸಚಿವರಾಗಿದ್ದ ಸಂದರ್ಭದಲ್ಲಿ ಕಾನೂನು ರೂಪಿಸಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.ದೊಡ್ಡಬಳ್ಳಾಪುರ ಟೆಕ್ಸ್‌ಟೈಲ್ ವೀವರ್ಸ್ ಅಸೋಸಿಯೇಷನ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ದೊಡ್ಡಬಳ್ಳಾಪುರದ ಸೀರೆಗಳ ಉತ್ಪಾದನಾ ವೆಚ್ಚ ₹1500 ಇದ್ದರೆ ಸೂರತ್ ಸೀರೆಗಳ ಉತ್ಪಾದನಾ ವೆಚ್ಚ ₹600 ರಿಂದ ₹700 ವರೆಗೆ ಇದೆ. ಸೂರತ್ ಸೀರೆಗಳು ಗರಿಷ್ಠ ಪ್ರಮಾಣದಲ್ಲಿ ಬರುತ್ತಿರುವುದರಿಂದ ದೊಡ್ಡಬಳ್ಳಾಪುರ ನೇಕಾರರ ಸ್ಥಿತಿ ಶೋಚನೀಯವಾಗಿದೆ. ಈ ನೇಕಾರರ ಉಳಿವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸೂರತ್ ಸೀರೆಗಳನ್ನು ನಿಷೇಧ ಮಾಡಲು ಅವಕಾಶ ಇದೆ. ಸೂರತ್ ಸೀರೆಗಳ ಲಾರಿಗಳನ್ನು ತಡೆದು ಪ್ರತಿಭಟನೆ ಮಾಡುತ್ತೇವೆ. ಜವಳಿ ಇಲಾಖೆಗೆ ಮಾಹಿತಿ ನೀಡಲಿದ್ದು, ಅಧಿಕಾರಿಗಳು ಆಗಮಿಸಿ ಈ ಸೀರೆಗಳನ್ನು ವಶಕ್ಕೆ ಪಡೆಯಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ನೇಕಾರರು ಆಗ್ರಹಪಡಿಸಿದರು.ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಸಚಿವ ಶಿವಾನಂದ ಪಾಟೀಲ ಅವರು ನೆರವಿಗೆ ಬರುವುದಾಗಿ ಭರವಸೆ ನೀಡಿದ್ದಾರೆ. ಕಾಯ್ದೆ ತಿದ್ದುಪಡಿಗೆ ಅವರ ಸಲಹೆಯಂತೆ ಕೇಂದ್ರದ ಬಳಿ ನಿಯೋಗ ತೆರಳುವುದು ಸೂಕ್ತ ಎಂದು ಹೇಳಿದರು.
ಜವಳಿ ಇಲಾಖೆ ಆಯುಕ್ತ ಕ್ಯಾಪ್ಷನ್ ರಾಜೇಂದ್ರ, ಜವಳಿ ಇಲಾಖೆ ಅಧಿಕಾರಿಗಳಾದ ಪ್ರಕಾಶ್, ಯೋಗೇಶ್ ಮತ್ತಿತರು ಉಪಸ್ಥಿತರಿದ್ದರು.ಕೋಟ್...........
ಪವರ್‌ಲೂಮ್ ರಿಸರ್ವೇಷನ್ ಆಕ್ಟ್ ತಿದ್ದುಪಡಿಗೆ ಕೇಂದ್ರ ಸರ್ಕಾರದ ಬಳಿ ನೇಕಾರ ಮುಖಂಡರೊಂದಿಗೆ ನಿಯೋಗ ತೆರಳಲಾಗುವುದು. ರಾಜ್ಯ ಸರ್ಕಾರದ ಮಟ್ಟದಲ್ಲಿ ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು.- ಶಿವಾನಂದ ಪಾಟೀಲ, ಜವಳಿ ಸಚಿವ
ಫೋಟೋ-5ಕೆಡಿಬಿಪಿ5- ದೊಡ್ಡಬಳ್ಳಾಪುರ ನೇಕಾರರ ಸಮಸ್ಯೆ ಪರಿಹಾರಕ್ಕೆ ಸಚಿವ ಶಿವಾನಂದ ಪಾಟೀಲ ಅವರು ಬೆಂಗಳೂರಿನ ವಿಕಾಸಸೌಧದಲ್ಲಿ ಸಭೆ ನಡೆಸಿದರು. ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವೆಂಕಟರಮಣಯ್ಯ ಇದ್ದರು.
--5ಕೆಡಿಬಿಪಿ6- ಬೆಂಗಳೂರಿನಲ್ಲಿ ಜವಳಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ದೊಡ್ಡಬಳ್ಳಾಪುರ ನೇಕಾರರ ಸಭೆಯಲ್ಲಿ ಹಲವು ಮುಖಂಡರು ಭಾಗವಹಿಸಿದ್ದರು.