ದಾವಣಗೆರೆ: ಮೂಲ ರೂಪದಲ್ಲಿದ್ದ ಆಟೋ ರಿಕ್ಷಾಗಳಿಗೆ ವಿಪರೀತ ಅಲಂಕಾರ ಮಾಡಿ, ಹೆಚ್ಚುವರಿ ಸೀಟು, ಅನಗತ್ಯ ಕಬ್ಬಿಣದ ಸರಳು ಅಳವಡಿಸಿ, ಕುಷನ್ ವರ್ಕ್ ಮಾಡಿದ್ದಂತಹ ಆಟೋ ರಿಕ್ಷಾ, ಸಿಗ್ನಲ್ ಜಂಪ್ ಮಾಡಿದಾಗ ಆಟೋ ನಂಬರ್ ಗೊತ್ತಾಗದಂತೆ ಹಗ್ಗ, ಕುಚ್ಚು, ಹಗ್ಗಗಳನ್ನು ಕಟ್ಟಿದ್ದಂತಹ ಆಟೋ ರಿಕ್ಷಾಗಳ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳುವ ಜೊತೆಗೆ ಆಟೋ ರಿಕ್ಷಾಗಳನ್ನು ಮೂಲ ರೂಪಕ್ಕೆ ತರುವ ಕೆಲಸಕ್ಕೆ ಕೈಹಾಕಿದೆ.
ಕೆಲವು ತಿಂಗಳ ಹಿಂದೆಯೇ ಪೊಲೀಸ್ ಇಲಾಖೆ ಸೂಚನೆ ನೀಡಿದ್ದರೂ ಕಿವಿಗೊಡದ ನೂರಾರು ಆಟೋ ರಿಕ್ಷಾಗಳನ್ನು ಇಲ್ಲಿನ ಪೊಲೀಸ್ ಕವಾಯಿತು ಮೈದಾನಕ್ಕೆ ತರಿಸಿಕೊಂಡು, ಅವುಗಳನ್ನು ಸರಿಪಡಿಸುವ ಕೆಲಸಕ್ಕೆ ಇಲಾಖೆ ಮುಂದಾಯಿತು. ಆಟೋ ರಿಕ್ಷಾಗಳ ಹಿಂದೆ, ಅಕ್ಕಪಕ್ಕ, ಕೆಳ ಭಾಗಕ್ಕೆ ಅಳವಡಿಸಿದ್ದ ಕಬ್ಬಿಣದ ಸರಳುಗಳು, ಹೆಚ್ಚುವರಿ ಪ್ರಯಾಣಿಕರು ಕುಳಿತುಕೊಳ್ಳಲು ಅಳವಡಿಸಿದ್ದ ಕಬ್ಬಿಣದ ಸೀಟುಗಳು, ಆಟೋ ಚಾಲಕನ ಪಕ್ಕದಲ್ಲಿ ಅಳವಡಿಸಿದ್ದ ಸರಳು, ಸೀಟುಗಳನ್ನು ತೆರವು ಮಾಡಿಸಲಾಯಿತು.
ವರ್ಕ್ ಶಾಪ್ ಕೆಲಸಗಾರರು, ಪೊಲೀಸ್ ಸಿಬ್ಬಂದಿ ಆಟೋ ರಿಕ್ಷಾ ಚಾಲಕನ ಅಕ್ಕಪಕ್ಕ ನಾಲ್ಕು ಜನ ಕುಳಿತುಕೊಳ್ಳಲು ಮಾಡಿಸಿದ್ದ ಹೆಚ್ಚುವರಿ ಕುಷನ್ ತೆರವು ಮಾಡಿಸಿದರು. ಆಟೋ ರಿಕ್ಷಾದೊಳಗಿನ ಅಲ್ಪ ಜಾಗದಲ್ಲಿ ಕುಷನ್ ವರ್ಕ್ ಮಾಡಿದ್ದು, ಆಟೋಗಳ ಹಿಂದೆ ಎಂಜಿನ್ ಆಯಿಲ್ ಬದಲಿಸಲು, ಎಂಜಿನ್ ದುರಸ್ತಿಗೆ ಸುಲಭವಾಗಲೆಂದು ಕಂಪನಿಯಿಂದ ಡಿಸೈನ್ ಮಾಡಿದ್ದನ್ನೇ ನಾಚುವಂತೆ ತಮಗೆ ಬೇಕಾದಂತೆ ಬದಲಿಸಿಕೊಂಡಿದ್ದ ಚಾಲಕರಿಗೂ ಪೊಲೀಸರು ಬಿಸಿ ಮುಟ್ಟಿಸಲು ಮರೆಯಲಿಲ್ಲ.ಸಂಚಾರ ನಿಯಮ ಉಲ್ಲಂಘನೆ, ಸಿಗ್ನಲ್ ಜಂಪ್ ಆದಾಗ ಸಿಸಿ ಕ್ಯಾಮೆರಾಗಳು, ಪೊಲೀಸರ ಮೊಬೈಲ್‌ಗೆ ಫೋಟೋಗೆ ನಂಬರ್ ಸಿಗಬಾರದೆಂದು ಕಣ್ತಪ್ಪಿಸಲು, ಸಿಸಿ ಕ್ಯಾಮೆರಾಗಳಿಗೆ ಯಾಮಾರಿಸಲೆಂದು ನಂಬರ್ ಪ್ಲೇಟ್ ಇರುವಲ್ಲಿ ಕಂಬಳಿ, ಉಲ್ಲನ್, ಕುಚ್ಚುಗಳು, ಹಗ್ಗ, ಡಿಸೈನ್ ಬಟ್ಟೆ ಇಳಿ ಬಿಟ್ಟಿರುವುದನ್ನೂ ಪೊಲೀಸರು ತೆರವು ಮಾಡಿಸಿದರು.
ಆಟೋ ರಿಕ್ಷಾಗಳನ್ನು ನಂಬಿಕೊಂಡು ಮಕ್ಕಳ ಭವಿಷ್ಯ ಕಟ್ಟಿಕೊಂಡು, ಬದುಕಿನ ಬಂಡಿ ಎಳೆದ ಎಷ್ಟೋ ಆಟೋ ರಿಕ್ಷಾ ಚಾಲಕರು ಈ ವೃತ್ತಿಗೆ ಮಾದರಿಯಾಗಿದ್ದಾರೆ. ಆದರೆ, ಈಗಿನ ಅನೇಕರು ಆಟೋ ರಿಕ್ಷಾ ವೃತ್ತಿಗೆ ಕಳಂಕ ತರುವಂತಹ ವರ್ತನೆ, ಮಾತು, ದುರ್ವರ್ತನೆಯಿಂದ ಆಟೋ ರಿಕ್ಷಾದವರ ಬಗ್ಗೆ ಜನರು ಮೂಗು ಮುರಿಯುವಂತೆ ಮಾಡಿದ್ದಾರೆ.
ನಂಬರ್ ನೀಡುವ ಪ್ರಕ್ರಿಯೆಗೆ ಚಾಲನೆ:
ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಿವೈಎಸ್ಪಿಗಳು, ಇನ್ಸಪೆಕ್ಟರ್‌ಗಳು, ಉತ್ತರ-ದಕ್ಷಿಣ ಸಂಚಾರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್‌ಗಳು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.