ಪ್ರಜ್ವಲ್‌ ರೇವಣ್ಣಗೆ ರೆಡ್ ಕಾರ್ನರ್ ನೀಡಿ ವೀಸಾ ರದ್ದುಪಡಿಸಿ: ಜಿಲ್ಲಾ ಚಳುವಳಿಗಳ ಒಕ್ಕೂಟ

KannadaprabhaNewsNetwork |  
Published : May 19, 2024, 01:50 AM IST
ಸಭೆ | Kannada Prabha

ಸಾರಾಂಶ

ಕೂಡಲೇ ರೆಡ್ ಕಾರ್ನರ್ ನೋಟಿಸ್ ಕೊಟ್ಟು ರಾಜತಾಂತ್ರಿಕ ವೀಸ ರದ್ದುಪಡಿಸಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಎಂದು ಅಶ್ಲೀಲ ವಿಡಿಯೋ ಪ್ರಕರಣ ಕುರಿತು ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಆಗ್ರಹಿಸಲಾಯಿತು. ಹಾಸನದಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಶನಿವಾರ ರಾಜ್ಯ ಮಟ್ಟದ ಸಮಾಲೋಚನಾ ಸಭೆ ನಡೆಸಿತು.

ರಾಜ್ಯ ಮಟ್ಟದ ಸಮಾಲೋಚನಾ ಸಭೆ । ಬಂಧನಕ್ಕೆ ಆಗ್ರಹ । ರಾಜ್ಯವ್ಯಾಪಿ ಚಳವಳಿಗೆ ತೀರ್ಮಾನ

ಕನ್ನಡಪ್ರಭ ವಾರ್ತೆ ಹಾಸನ

ಕೂಡಲೇ ರೆಡ್ ಕಾರ್ನರ್ ನೋಟಿಸ್ ಕೊಟ್ಟು ರಾಜತಾಂತ್ರಿಕ ವೀಸ ರದ್ದುಪಡಿಸಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಎಂದು ಅಶ್ಲೀಲ ವಿಡಿಯೋ ಪ್ರಕರಣ ಕುರಿತು ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಆಗ್ರಹಿಸಲಾಯಿತು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ದಲಿತ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಮತ್ತು ಸಮಾನ ಮನಸ್ಕರ ಐಕ್ಯ ವೇದಿಕೆ ಸೇರಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಶನಿವಾರ ರಾಜ್ಯ ಮಟ್ಟದ ಸಮಾಲೋಚನಾ ಸಭೆ ನಡೆಸಿತು.

ಮೇ 30 ಇಲ್ಲವೇ 31 ರಂದು ಹಾಸನ ಚಲೋ ಎಂಬ ಹೋರಾಟವನ್ನು ಹಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲದೇ ರಾಜ್ಯಮಟ್ಟದಿಂದ ಹೋರಾಟಗಾರರು ಆಗಮಿಸಲು ಸಭೆಯಲ್ಲಿ ಕೋರಲಾಯಿತು. ಸಂಸದ ಪ್ರಜ್ವಲ್ ರೇವಣ್ಣನನ್ನು ಶೀಘ್ರ ಬಂಧಿಸಿ, ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿ ಘನತೆ ಕಾಪಾಡುವಂತೆ ಆಗ್ರಹಿಸಿ ರಾಜ್ಯವ್ಯಾಪಿ ಬೃಹತ್ ಚಳುವಳಿ ರೂಪಿಸಲು ಸಭೆಯಲ್ಲಿ ಅನೇಕರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ಹಿರಿಯ ವಕೀಲರಾದ ವೆಂಕಟೇಶ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ದಲಿತ ಮುಖಂಡ ಎಚ್.ಕೆ.ಸಂದೇಶ್ ಮಾತನಾಡಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ತನಗಿರುವ ರಾಜಕೀಯ ಅಧಿಕಾರ, ರಾಜ್ಯದ ಪ್ರಮುಖ ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆ ಮತ್ತು ತನಗಿರುವ ಪ್ರಬಲ ಜಾತಿಯ ಹಿನ್ನೆಲೆ ಬಳಸಿಕೊಂಡು ನೂರಾರ ಮಹಿಳೆಯರೊಂದಿಗೆ ನಡೆಸಿರುವ ವಿಡಿಯೋ ಸಂಭಾಷಣೆಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವಿಡಿಯೋ, ಫೋಟೋ, ವಿಡಿಯೋ ಕಾಲ್ ಸ್ಟೀನ್ ಶಾಟ್‌ಗಳನ್ನು ಸಾವಿರಾರು ಸಂಖ್ಯೆಯಲ್ಲಿ ಶೇಖರಿಸಿಟ್ಟುಕೊಂಡಿರುವ ಪ್ರಕರಣ ಈ ಹಿಂದೆ ಎಲ್ಲಿಯೂ ಕಂಡು ಕೇಳರಿಯದ ಅತ್ಯಂತ ಹೀನ ಕೃತ್ಯವಾಗಿದೆ. ಮಹಿಳೆಯರ ಘನತೆಯ ಮೇಲೆ ದಾಳಿ ಮಾಡಿದ ವ್ಯಕ್ತಿಗಳ ತ್ವರಿತ ಬಂಧನ, ವಿಚಾರಣೆ ಹಾಗೂ ಶಿಕ್ಷೆಯನ್ನು ಖಾತ್ರಿಗೊಳಿಸಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಗೌಪ್ಯತೆ ಕಾಪಾಡಿ, ಅವರಿಗೆ ಆಪ್ತ ಸಮಾಲೋಚನೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಈ ಮೊದಲೇ ತಿಳಿದಿದ್ದರೂ ಕೂಡ 2024ರ ಲೋಕಸಭಾ ಚುನಾವಣೆಯಲ್ಲಿ ಆತನನ್ನೇ ಮತ್ತೆ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿ ಚುನಾವಣೆ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡೆ ತೀವ್ರ ಖಂಡನೀಯವಾದುದು. ಜೆ.ದೇವರಾಜೇಗೌಡ ಮತ್ತು ಪ್ರಜ್ವಲ್ ರೇವಣ್ಣ ಕಾರಿನ ಮಾಜಿ ಚಾಲಕ ಕಾರ್ತಿಕ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಆಶ್ಲೀಲ ವೀಡಿಯೋಗಳು ಮತ್ತು ಅಶ್ಲೀಲ ಚಿತ್ರಗಳು ಹಂಚಿಕೆಯಾಗದಂತೆ ತಡೆಯುವುದರಲ್ಲಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿದೇಶದಲ್ಲಿರುವ ಸಂಸದ ಪ್ರಜ್ವಲ್ ಬಂಧಿಸಲು ಕೇಂದ್ರ ಸರ್ಕಾರ ಅನುಸರಿಸಲೇಬೇಕಾದ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸದೆ ಕೇವಲ ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವುದು ಹಲವು ಅನುಮಾನಗಳಿಗೆ ಅವಕಾಶ ನೀಡುತ್ತದೆ. ಕಾಂಗ್ರೆಸ್ ಕೂಡ ಬಿಜೆಪಿ ಮತ್ತು ಜೆಡಿಸ್ ಜೊತೆಗೆ ಕೆಸರೆರಚಾಟದಲ್ಲಿ ತೊಡಗಿದ್ದು ಪ್ರಕರಣದ ಗಂಭೀರತೆಗೆ ಧಕ್ಕೆ ಉಂಟಾಗುತ್ತಿದೆ. ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಲ್ಲಿ ಜೆಡಿಎಸ್‌ನ ಮಹಿಳಾ ನಾಯಕಿಯರು ಮತ್ತು ಪ್ರಮುಖ ಕಾರ್ಯಕರ್ತೆಯರೂ ಜೊತೆಗೆ ಮಹಿಳಾ ಅಧಿಕಾರಿಗಳು, ನೌಕರರು ಮತ್ತು ವೃತ್ತಿಪರರು ಇರುವುದರಿಂದ ಮುಂದೆ ಮಹಿಳೆಯರು ನೇರವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪಾಲ್ಗೊಳ್ಳುವ ಕುರಿತು ಬಹಳ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಸಂಘಟನೆಯ ಮುಖಂಡರು, ಸಾಹಿತಿಗಳಾದ ರೂಪ ಹಾಸನ್, ಎಂ.ಸೋಮಶೇಖರ್, ಗೊರೂರು ರಾಜು, ಮುಬಾಶೀರ್ ಅಹಮದ್, ಎಚ್.ಆರ್.ನವೀನ್ ಕುಮಾರ್, ಆರ್.ಪಿ.ವೆಂಕಟೇಶ್ ಮೂರ್ತಿ, ಕೆ.ಈರಪ್ಪ, ಎಂ.ಜಿ.ಪೃಥ್ವಿ, ಶಿವಣ್ಣ, ವಿಜಯಕುಮಾರ್, ಸುವರ್ಣ ಇತರರು ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ