ಧರಣಿ । ಸರ್ಕಾರಕ್ಕೆ ಆಗ್ರಹ । ರೈತ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಪಾವಗಡಭೂ ಮಾಲೀಕರು, ವಿನಾ ಕಾರಣ ದೌರ್ಜನ್ಯಕ್ಕೆ ಮುಂದಾಗಿ ಕಿರುಕುಳ ನೀಡುತ್ತಿರುವ ಪರಿಣಾಮ ಅನೇಕ ವರ್ಷದಿಂದ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡ ವಾಸವಿದ್ದ ಅನೇಕ ಮಂದಿ ನಿರ್ಗತಿಕರು ನಾನಾ ರೀತಿಯ ಹಿಂಸೆಗೆ ಒಳಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಮೂಲಕ ಬಡವರ ನೆಮ್ಮದಿಯ ಜೀವನಕ್ಕೆ ಅನುಕೂಲ ಕಲ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪಾವಗಡದ ದೊಡ್ಡಹಳ್ಳಿ ಪೂಜಾರಪ್ಪ ತಹಸೀಲ್ದಾರ್ ಹಾಗೂ ತಾಪಂ ಇಒಗೆ ಒತ್ತಾಯಿಸಿದರು.
ಪಟ್ಟಣದಲ್ಲಿ ರಾಜ್ಯ ರೈತ ಸಂಘದ ತಾಲೂಕು ಶಾಖೆ ಹಾಗೂ ಇತರೆ ಇಲ್ಲಿನ ಪ್ರಗತಿಪರ ಸಂಘಟನೆಗಳ ವತಿಯಿಂದ ಮಂಗಳವಾರ ಪ್ರತಿಭಟನೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ವೇಳೆ ನೇತೃತ್ವ ವಹಿಸಿ ಸ್ಥಳೀಯ ಆಡಳಿತ ವೈಖರಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.ನಿಡಗಲ್ ವ್ಯಾಪ್ತಿಯ ಮಂಗಳವಾಡ, ಮದ್ದೆ, ಅರಸೀಕರೆ, ಬ್ಯಾಡನೂರು ಸೇರಿದಂತೆ ವೈ.ಎನ್.ಹೊಸಕೋಟೆ ನಾಗಲಮಡಿಕೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ನಿವೇಶನ ರಹಿತ 38 ಬಡ ಕುಟುಂಬಗಳು ಅಳತೆ ಅನ್ವಯ ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಮೂರು ನಾಲ್ಕು ದಶಕಗಳಿಂದ ಇದೇ ಮನೆಗಳಲ್ಲಿ ವಾಸವಾಗಿ ಕೂಲಿ ಕೆಲಸಗಳಿಂದ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಹಕ್ಕು ಪತ್ರ ಸಹ ನೀಡಿಲ್ಲ. ಈಗ ಪಕ್ಕದ ಜಮೀನುಗಳ ಮಾಲೀಕರು ವಾಸದ ಮನೆಗಳನ್ನು ತೆರವುಗೊಳಿಸಿ ಎಂದು ತೊಂದರೆ ನೀಡುತ್ತಿರುವುದು ಖಂಡನೀಯ. ಆದ್ದರಿಂದ ಕೂಡಲೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಅಕ್ರಮ ಸಕ್ರಮ ಯೋಜನೆಯಲ್ಲಿ ಹಕ್ಕುಪತ್ರ ವಿತರಿಸಿ ಅನುಕೂಲ ಕಲ್ಪಿಸುವಂತೆ ತಾಲೂಕು ಆಡಳಿತಕ್ಕೆ ಆಗ್ರಹಿಸಿದರು. ಸಂಬಂಧ ಪಟ್ಟ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಗಳಿಗೆ ಸ್ಥಳ ಪರಿಶೀಲನೆ ಮತ್ತು ಸರ್ವೆ ಮಾಡುವ ಮೂಲಕ ಸಂತ್ರಸ್ಥ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮಹಾ ಆದಿಗ ಸಂಘಟನೆಯ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಬಡ, ನಿರ್ಗತಿಕರು ಸರ್ಕಾರಿ ಜಮೀನುಗಳಲ್ಲಿ ನಿರ್ಮಿಸಿಕೊಂಡಿರುವ ಮನೆಯ ಫಲಾನುಭವಿಗಳಿಗೆ ಕೂಡಲೇ ಸರ್ಕಾರದಿಂದ ಹಕ್ಕುಪತ್ರ ವಿತರಣೆ ಮಾಡಬೇಕು. ನಿರ್ಲಕ್ಷ ಮಾಡಿದರೆ ಹೋರಾಟದ ಮೂಲಕ ನ್ಯಾಯ ಪಡೆಯಲಾಗುವುದು ಎಂದರು.ಕಿಸಾನ್ ಸಂಘದ ಅಧ್ಯಕ್ಷ ಕೃಷ್ಣಾರಾವ್ ಮಾತನಾಡಿ, ಅಧಿಕಾರಿಗಳು ನಿರ್ಗತಿಕರು ನಿರ್ಮಿಸಿಕೊಂಡಿರುವ ಮನೆಗಳಿಗೆ ತೊಂದರೆ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಾಂಜಿನಪ್ಪ,ರೈತ ಸಂಘದ ತಾಲೂಕು ಅಧ್ಯಕ್ಷ ಬ್ಯಾಡನೂರು ಶಿವು, ಗೌರವಾಧ್ಯಕ್ಷ ವೆಂಕಟಸ್ವಾಮಿ, ಮುಖಂಡರಾದ ರಾಜಣ್ಣ, ಲಕ್ಷ್ಮೀದೇವಿ, ಬಾಲಾಜಿ, ಸಿದ್ದಪ್ಪ, ನರಸಣ್ಣ, ಪ್ರಸನ್ನ, ಇತರರು ಇದ್ದರು.