ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕೆ ನಮ್ಮ ನಾಡಿನ ಮಠಗಳಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಮತ್ತು ಬೀದರ್‌ನ ಬಾಲ್ಕಿ ಮಠಗಳ ಕೊಡುಗೆ ಅಪಾರ
ನರಗುಂದ: ಗಡಿನಾಡಿನಲ್ಲಿ ಕನ್ನಡದ ನಂದಾದೀಪ ಪ್ರಜ್ವಲಿಸಿದ ಬಾಲ್ಕಿ ಹಾಗೂ ನಾಗನೂರು ಶ್ರೀಗಳು ಕನ್ನಡ ಕಟ್ಟಿದ ಶ್ರೇಷ್ಠ ಸಂತರು. ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಫಜಲ್ ಅಲಿ ಹಾಗೂ ಮಹಾಜನ್ ಆಯೋಗಕ್ಕೆ ನೇರ ವರದಿ ನೀಡಿ ಬೆಳಗಾವಿ ನಮ್ಮದೆ ಎಂದು ಪ್ರತಿಪಾದಿಸಿದ ನಾಗನೂರು ಶ್ರೀಗಳ ಕನ್ನಡ ಪ್ರೇಮ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯದರ್ಶಿ ಮಹಾಂತೇಶ ಹಿರೇಮಠ ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಏಕೀಕರಣ ಯೋಧರ ಯಶೋಗಾಥೆ-41 ಕಾರ್ಯಕ್ರಮ ಹಾಗೂ ಬಾಲ್ಕಿ ಚನ್ನಬಸವ ಪಟ್ಟದ್ದೇವರ ಹಾಗೂ ನಾಗನೂರು ಶಿವಬಸವ ಶ್ರೀಗಳ ಜಯಂತ್ಯುತ್ಸವ ಸಮಾರಂಭದಲ್ಲಿ ಬಾಲ್ಕಿ ಹಾಗೂ ನಾಗನೂರು ಶ್ರೀಗಳ ಬದುಕು ಮತ್ತು ಹೋರಾಟ ವಿಷಯದ ಕುರಿತು ಮಾತನಾಡಿ, ಕರ್ನಾಟಕ ಏಕೀಕರಣ ಹೋರಾಟದ ಇತಿಹಾಸದಲ್ಲಿ ಮಠಾದೀಶರೆಂಬ ಯಾವುದೆ ಹಮ್ಮು ಬಿಮ್ಮುಗಳಿಲ್ಲದೆ ಜನಸಾಮಾನ್ಯರಾಗಿ ಕನ್ನಡ ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದ ಪೂಜ್ಯದ್ವಯರು ಅಖಂಡ ಕರ್ನಾಟವನ್ನು ಅಖಂಡ ಕರ್ನಾಟಕವನ್ನಾಗಿಸುವ ಕನಸನ್ನು ಕಂಡವರು. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕೆ ನಮ್ಮ ನಾಡಿನ ಮಠಗಳಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಮತ್ತು ಬೀದರ್‌ನ ಬಾಲ್ಕಿ ಮಠಗಳ ಕೊಡುಗೆ ಅಪಾರವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಅನ್ನ,ಅಕ್ಷರ, ಅರಿವು ಕೊಟ್ಟು ತ್ರಿವಿಧ ದಾಸೋಹ ಮಾಡುವ ಮೂಲಕ ಲಕ್ಷಾಂತರ ಮಕ್ಕಳ ಬಾಳಿಗೆ ದಾರಿದೀಪವಾಗಿ ಕೈಂಕರ್ಯ ಮಾಡುತ್ತಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ನಾಡಿನ ಇತಿಹಾಸದಲ್ಲಿ ಏಕೀಕರಣಕ್ಕಾಗಿ ಹೋರಾಟ ಮಾಡಿದ ಮಠಗಳಲ್ಲಿ ಬಾಲ್ಕಿ ಹಾಗೂ ನಾಗನೂರು ಮಠಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ ಎಂದು ಹೇಳಿದರು.
ವೇದಿಕೆ ಮೇಲೆ ಗ್ರಾಪಂ ಅಧ್ಯಕ್ಷ ಜ್ಞಾನದೇವ ಮನೇನಕೊಪ್ಪ, ಗುರುಪಾದಪ್ಪ ಹಸಬಿ, ರೇಖಾ ಹಸಬಿ, ಸಹನಾ ತಟ್ಟಿ, ಮಲ್ಲಪ್ಪ ಶೆಟ್ಟರ್, ಶಿವಣ್ಣ ಮೊರಬದ, ಬಸವರಾಜ ಐನಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.