- ಒಳಮೀಸಲು ಸಂಬಂಧ ಮಾದಿಗ-ಛಲವಾದಿ ವಕೀಲರ ಒತ್ತಾಯ
- - - ಕನ್ನಡಪ್ರಭ ವಾರ್ತೆ ದಾವಣಗೆರೆಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆ ಆಧರಿಸಿ ಒಳ ಮೀಸಲಾತಿ ಜಾರಿಗೊಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಅಲ್ಲದೇ, ನಾಡಿನ ಸಾಂಸ್ಕೃತಿಕ ನಾಯಕ ಎಂದು ಕರೆಯಲ್ಪಡುವ ದೇವನೂರು ಮಹಾದೇವ, ವಿಚಾರವಂತರಾದ ಮೈಸೂರಿನ ಎಚ್.ಗೋವಿಂದಯ್ಯ, ಕೋಲಾರದ ಕೋಟಿಗಾನಹಳ್ಳಿ ರಾಮಯ್ಯ, ಎನ್.ವೆಂಕಟೇಶರಂತಹವರು ಸಹ ಈ ಬಗ್ಗೆ ಧ್ವನಿ ಎತ್ತಬೇಕು ಎಂದು ಮಾದಿಗ, ಛಲವಾದಿ ಸಮಾಜಗಳ ಹಿರಿಯ ವಕೀಲರು ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಸಮಾಜದ ಹಿರಿಯ ಮುಖಂಡ, ವಕೀಲ ಬಿ.ಎಂ. ಹನುಮಂತಪ್ಪ ಅವರು, ಸ್ಪೃಶ್ಯ ಸಮುದಾಯಗಳಿಗೆ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಸ್ಪೃಶ್ಯ ಸಮುದಾಯಗಳಿಗೆ ಬೇರೆ ಮೀಸಲಾತಿ ಕೊಡಿ. ಆದರೆ, ಅಸ್ಪೃಶ್ಯರಾದ ನಮ್ಮ ಸಮುದಾಯಗಳಿಗೆ ಸಿಗಬೇಕಾದ ಅವಕಾಶ, ಹಕ್ಕು, ಸೌಲಭ್ಯ, ಮೀಸಲಾತಿ ನ್ಯಾಯಯುತವಾಗಿ ಕೊಡಿ ಎಂದು ಆಗ್ರಹಿಸಿದರು.ಹೊಲೆ ಮಾದಿಗರು ನಾವು. ಮಲ-ಮೂತ್ರ ತಲೆ ಮೇಲೆ ಹೊತ್ತವರು. ಇಂದಿಗೂ ಒಳಚರಂಡಿ ಗುಂಡಿಗಳಲ್ಲಿ ಇಳಿದು ನಮ್ಮ ಸಮುದಾಯದವರು ಕೆಲಸ ಮಾಡುವುದನ್ನು ನೋಡುತ್ತಿದ್ದೇವೆ. ಎಷ್ಟೋ ಜನ ಇಂತಹ ಗುಂಡಿಯಲ್ಲಿ ಇಳಿದು ಸಾವನ್ನಪ್ಪಿರುವುದು, ಅನಾರೋಗ್ಯ ಪೀಡಿತರಾಗಿ ಬದುಕುತ್ತಿರೋದು ಕಾಣುತ್ತಿದ್ದೇವೆ. ಅವಮಾನ, ಅಪಮಾನ, ಅಸಹ್ಯದ ಬಾಳು ಇದು. ಒಂದುವೇಳೆ ಮಾಧ್ಯಮಗಳು ಇಲ್ಲದೇ ಇದ್ದಿದ್ದರೆ, ಸಂವಿಧಾನ ನಮಗೆ ತಲೆಯೆತ್ತಿ ಬಾಳುವ ಅವಕಾಶ ನೀಡದಿದ್ದರೆ ನಮ್ಮ ಬಾಳು ನರಕವಾಗಿರುತ್ತಿತ್ತು ಎಂದ ಅವರು, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವುದು ವಿಳಂಬವಾದರೆ ರಾಜ್ಯವ್ಯಾಪಿ ಅಸ್ಪೃಶ್ಯ ಸಮುದಾಯದ ವಕೀಲರು ಬೀದಿಗಿಳಿದು ಆಂದೋಲನ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಾಜದ ಮುಖಂಡರಾದ ವಕೀಲೆ ಎಸ್.ನೇತ್ರಾವತಿ, ಹರಿಹರದ ಎ.ಕೆ. ಸುಭಾಶ್ಚಂದ್ರ ಬೋಸ್, ಚನ್ನಗಿರಿ ಎ.ಎನ್.ಲಿಂಗಮೂರ್ತಿ, ಎಸ್.ರಾಜಪ್ಪ, ಜಗಳೂರಿನ ಡಿ.ಸಿ. ತಿಪ್ಪೇಸ್ವಾಮಿ, ಹರಪನಹಳ್ಳಿಯ ಟಿ.ಹನುಮಂತಪ್ಪ, ಹಾಲೇಶ ಕೋಡಿಹಳ್ಳಿ ಇತರರು ಇದ್ದರು.- - -
ಬಾಕ್ಸ್ * ನಾಳೆ ಜಿಲ್ಲಾಧಿಕಾರಿಗೆ ಮನವಿ ಸುಪ್ರೀಂ ಕೋರ್ಟ್ ಆದೇಶ ನೀಡಿ ಎರಡೂವರೆ ತಿಂಗಳೇ ಕಳೆದಿದೆ. ಆದರೆ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ನಿರ್ಧಾರ ಪ್ರಕಟಿಸದಿರುವುದು ನಿರಾಸೆ ತಂದಿದೆ. ಅ.21ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲೆಯ ಎಲ್ಲ ತಾಲೂಕುಗಳ ಅಸ್ಪೃಶ್ಯ ಸಮುದಾಯಗಳಾದ ಮಾದಿಗ ಹಾಗೂ ಛಲವಾದಿ ಸಮುದಾಯಗಳ ವಕೀಲರು ಆಗಮಿಸಿ, ಒಳ ಮೀಸಲಾತಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಸರ್ಕಾರ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡದೇ, ನಮ್ಮ ಬೇಡಿಕೆ ಈಡೇರಿಸಲಿ ಎಂದು ಹನುಮಂತಪ್ಪ ತಾಕೀತು ಮಾಡಿದರು.- - -
ಟಾಪ್ ಕೋಟ್ 3 ದಶಕದಿಂದಲೂ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸುತ್ತಿದ್ದೇವೆ. ಇದೀಗ ಸುಪ್ರೀಂ ಕೋರ್ಟ್ ಸಹ ಒಳ ಮೀಸಲಾತಿ ನೀಡುವುದು ಆಯಾ ರಾಜ್ಯ ಸರ್ಕಾರಗಳ ಕೆಲಸ ಎಂಬುದಾಗಿ ತೀರ್ಪು ನೀಡಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲಿ- ಬಿ.ಎಂ.ಹನುಮಂತಪ್ಪ, ವಕೀಲ
- - --19ಕೆಡಿವಿಜಿ8, 9:
ದಾವಣಗೆರೆಯಲ್ಲಿ ಶನಿವಾರ ಹಿರಿಯ ವಕೀಲ ಬಿ.ಎಂ.ಹನುಮಂತಪ್ಪ ನೇತೃತ್ವದಲ್ಲಿ ಮಾದಿಗ-ಛಲವಾದಿ ಸಮುದಾಯಗಳ ವಕೀಲರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.