ಹುಬ್ಬಳ್ಳಿ:
ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣ ಖಂಡಿಸಿ ಶನಿವಾರವೂ ನಗರದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸದ್ಭಾವ ವೇದಿಕೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರೆ, ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು.ಇಲ್ಲಿನ ಉಪನಗರ ಠಾಣೆಗೆ ತೆರಳಿದ ಸದ್ಭಾವ ವೇದಿಕೆಯ ಪದಾಧಿಕಾರಿಗಳು, ನೇಹಾ ಹಿರೇಮಠಳನ್ನು ಜಿಹಾದಿ ಮಾನಸಿಕತೆ ಇರುವ ಫಯಾಜ್ ಹತ್ಯೆ ಮಾಡಿದ್ದಾನೆ. ಇದರಿಂದ ವಿದ್ಯಾರ್ಥಿಗಳು, ಪಾಲಕರಲ್ಲಿ ಭಯವನ್ನುಂಟು ಮಾಡಿದೆ. ಲವ್ ಜಿಹಾದ್ ಹೆಸರಲ್ಲಿ ವಿದ್ಯಾರ್ಥಿಗಳನ್ನು, ಮಹಿಳೆಯರನ್ನು ಗುರಿಯನ್ನಾಗಿಸಲಾಗುತ್ತಿದೆ. ಈ ಕುರಿತು ಕಠಿಣ ಕ್ರಮಕೈಗೊಳ್ಳಬೇಕು. ಆರೋಪಿಗೆ ಅತಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ತ್ವರಿತವಾಗಿ ಪ್ರಕರಣ ಬೇಧಿಸಿ ಆರೋಪಿಗಳಿಗೆ ಶಿಕ್ಷೆಯಾಗಲು ಕ್ರಮ ಕೈಗೊಂಡು ವಿದ್ಯಾರ್ಥಿನಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುತ್ತೇವೆ ಎಂದು ಹೇಳಿದರು.ಈ ವೇಳೆ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ನಂದಕುಮಾರ, ದ್ಯಾವಪ್ಪನವರ, ಎ.ಸಿ. ಗೋಪಾಲ, ಮಹಾದೇವ ಕರಮರ, ರಘು ಅಕ್ಮುಂಚಿ, ಸುಭಾಸಸಿಂಗ್ ಜಮಾದಾರ, ಸಂದೀಪ ಬೂದಿಹಾಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರತ್ಯೇಕ ಪ್ರತಿಭಟನೆ:ಈ ನಡುವೆ ಜಯಕರ್ನಾಟಕ, ಜಗದ್ಗುರು ರೇಣುಕಾಚಾರ್ಯ ಫೌಂಡೇಶನ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದವು.ವಿದ್ಯಾರ್ಥಿನಿಯ ಕೊಲೆ ಪ್ರಕರಣ ಪಾಲಕರು, ಮಕ್ಕಳಲ್ಲಿ ಭಯ ಹುಟ್ಟಿದೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಶಂಕರಣ್ಣ ಮುನವಳ್ಳಿ ಹೇಳಿದರು.
ವಿದ್ಯಾರ್ಥಿನಿ ಕೊಲೆ ಪ್ರಕರಣ ದುರ್ಬಳ ಮಾಡುವ ರೀತಿ ಆಗುತ್ತಿದೆ. ವಿಶೇಷ ಪ್ರಾಸಿಕ್ಯೂಟರ್ ನೇಮಕ ಮಾಡಬೇಕು. ಆರು ತಿಂಗಳೊಳಗಾಗಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಅಂದಾಗ ಜನತೆಗೆ ಕಾನೂನಿನ ಮೇಲೆ ನಂಬಿಕೆ ಉಳಿಯುತ್ತದೆ. ರಾಜಕೀಯಕ್ಕಾಗಿ ಪ್ರಕರಣದ ತಿರುಚಬಾರದು ಎಂದು ನಂದಕುಮಾರ ಒತ್ತಾಯಿಸಿದರು.