ದಿಶಾ ಸಮಿತಿ ಸಭೆಯಲ್ಲಿ ಖೂಬಾ । 500 ಮೇಗಾ ವ್ಯಾಟ್ ಸೋಲಾರ್ ಪಾರ್ಕ್‌ಗೆ 250 ಎಕರೆ ಜಮೀನಿನ ಒಪ್ಪಿಗೆ ಪತ್ರಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯಲ್ಲಿ ನಡೆಯುತ್ತಿರುವ ಜಲ ಜೀವನ ಮಿಷನ್ (ಜೆಜೆಎಂ) ಕಾಮಗಾರಿಯ ಗುಣಮಟ್ಟದ ಕುರಿತು ಜಿಲ್ಲೆಯ ಜನರಲ್ಲಿ ಗೊಂದಲಗಳಿವೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಜನರಲ್ಲಿರುವ ಗೊಂದಲಗಳನ್ನು ನಿವಾರಿಸುವ ಮೂಲಕ ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.ಅವರು ಮಂಗಳವಾರ ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಕೆಲವು ಭಾಗಗಳಲ್ಲಿ ಜೆಜೆಎಂ ಕಾಮಗಾರಿಯಡಿ ರಸ್ತೆ ಅಗೆದು ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಯನ್ನು ವ್ಯವಸ್ಥಿತವಾಗಿ ಪುನರ್ ನಿರ್ಮಾಣ ಮಾಡದಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಯಾವ ಕಡೆಗಳಲ್ಲಿ ರಸ್ತೆ ಪುನರ್ ನಿರ್ಮಾಣವಾಗಿಲ್ಲವೋ ಅಂತಹ ಕಡೆಗಳಲ್ಲಿ ಶೀಘ್ರ ಕಾಮಗಾರಿ ಕೈಗೊಂಡು ಸರಿಪಡಿಸಬೇಕು. ಇದರ ವರದಿಯನ್ನು 15 ದಿನದೊಳಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
250 ಎಕರೆ ಜಮೀನಿನ ಒಪ್ಪಿಗೆ ಪತ್ರ:ಔರಾದ್-ಕಮಲನಗರ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿರುವ 500 ಮೇಗಾ ವ್ಯಾಟ್ ಸೋಲಾರ್ ಪಾರ್ಕ್ ನಿರ್ಮಾಣಕ್ಕಾಗಿ ಅಲ್ಲಿನ ಸ್ಥಳೀಯರಿಂದ 250 ಎಕರೆ ಜಮೀನಿನ ಒಪ್ಪಿಗೆ ಪತ್ರ ಪಡೆಯಲಾಗಿದೆ. ಈ ಯೋಜನೆಯ ಡಿಪಿಅರ್ ಸಲ್ಲಿಸಲು 1000 ಎಕರೆ ಜಮೀನಿನ ಅವಶ್ಯಕತೆ ಇದೆ. ಆದರೆ ಕೆಲವರು ಬಾಡಿಗೆ ಆಧಾರದಲ್ಲಿ ಜಮೀನು ನೀಡಲು ಒಪ್ಪುತ್ತಿಲ್ಲ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಿತೇಂದ್ರನಾಥ ಸುಗೂರ ಮಾತನಾಡಿ, ಕಳೆದ ವರ್ಷ ನೆಟೆ ರೋಗದಿಂದ ಹಾನಿಯಾದ ಬೆಳೆಗಳ ಸರ್ವೆ ಮಾಡಿಸಿ ಡಾಟಾ ಎಂಟ್ರಿ ಮಾಡಲಾಗಿದೆ. ಈಗಾಗಲೇ ಇದರಿಂದ ನಷ್ಟ ಅನುಭವಿಸಿದ ಕೆಲವು ರೈತರಿಗೆ ಹಣ ಪಾವತಿಸಲಾಗಿದೆ, ಉಳಿದ ರೈತರಿಗೆ ಮುಂದಿನ ಹಂತಗಳಲ್ಲಿ ಹಣ ಪಾವತಿಸಲಾಗುವುದು ಎಂದು ತಿಳಿಸಿದರು.ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ಮೊಬೈಲ್‌ಗಳನ್ನು ಉಪಯೋಗಿಸದಂತೆ ಸರ್ಕಾರದ ಆದೇಶವಿದೆ ಆದರೆ ಇದನ್ನು ಯಾರು ಪಾಲನೆ ಮಾಡುತ್ತಿಲ್ಲ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಮ್ಮ ಅಧೀನದ ಶಾಲಾ ಶಿಕ್ಷಕರಿಗೆ ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡುವ ಸಂದರ್ಭದಲ್ಲಿ ಮೊಬೈಲ್‌ಗಳನ್ನು ಬಳಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಹೇಳಿದರು.
ಎಂಎಲ್ಸಿ ಅರವಿಂದಕುಮಾರ ಅರಳಿ ಮಾತನಾಡಿ, ಅಧಿಕಾರಿಗಳು ಅವರಿಗೆ ವಹಿಸಿದ ಕೆಲಸಗಳು ಸರಿಯಾಗಿ ಮಾಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚೆತ್ತು ಕೆಲಸ ಮಾಡಬೇಕೆಂದು ಹೇಳಿದರು.ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಔರಾದ್-ಕಮಲನಗರ ತಾಲೂಕುಗಳ ವ್ಯಾಪ್ತಿಯಲ್ಲಿ 500 ಮೆಗಾ ವ್ಯಾಟ್ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಅವಶ್ಯವಿರುವ ಜಮೀನಿನ ಸಲುವಾಗಿ ಈಗಾಗಲೇ ಸ್ಥಳೀಯ ರೈತರೊಂದಿಗೆ ಮಾತುಕತೆ ನಡೆಸಿ ಪ್ರತಿ ಎಕರೆಗೆ 30 ಸಾವಿರ ರು. ನೀಡುವುದಾಗಿ ತಿಳಿಸಲಾಗಿದೆ. ರೈತರು ಜಮೀನು ಬಾಡಿಗೆ ಬದಲಾಗಿ ನಮ್ಮ ಜಮೀನನ್ನು ಖರೀದಿಸಿ ಎಂದು ಹೆಚ್ಚಿನ ಜನರು ಮನವಿ ಮಾಡುತ್ತಿದ್ದಾರೆ. ಅಧಿಕಾರಿಗಳು ಮತ್ತೊಮ್ಮೆ ಸಮಾಲೋಚಿಸಿ ಮನವಲಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಜಿ.ಪಂ ಸಿಇಒ ಶಿಲ್ಪಾ ಎಂ. ಮಾತನಾಡಿ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಧಿಕಾರಿಗಳು ತಮಗೆ ವಹಿಸಿದ ಕೆಲಸ ಸರಿಯಾಗಿ ಮಾಡಬೇಕು, ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿಗದಿತ ಸಮಯಕ್ಕೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷ ಮೊಹಮ್ಮದ ಗೌಸೋದ್ದಿನ್, ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ, ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ. ಸೇರಿದಂತೆ ಇತರೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
---ಚಿತ್ರ 17ಬಿಡಿಆರ್54
ಬೀದರ್‌ನ ಜಿ.ಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು. ಡಿಸಿ, ಸಿಶೊಓ, ಡಿಎಫ್ಒ ಇದ್ದರು.---