ಹುಬ್ಬಳ್ಳಿ: ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರದೇ, ಹು-ಧಾ ಮಹಾನಗರ ಪಾಲಿಕೆಗೆ ನೀಡದೇ ಬಾಕಿ ಉಳಿಸಿಕೊಂಡಿರುವ ₹303 ಕೋಟಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.
ಇಲ್ಲಿಯ ಪಾಲಿಕೆಯ ಸಭಾಭವನದಲ್ಲಿ 24ನೇ ಅವಧಿಯ ನೂತನ ಮೇಯರ್ ಜ್ಯೋತಿ ಪಾಟೀಲ ಹಾಗೂ ಉಪಮೇಯರ್ ಸಂತೋಷ ಚವ್ಹಾಣ ಅವರಿಗೆ ಸೋಮವಾರ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಬಿಜೆಪಿ ಆಡಳಿತ ಇರುವ ಬೆಳಗಾವಿ ಹಾಗೂ ಹು-ಧಾ ಮಹಾನಗರ ಪಾಲಿಕೆಗೆ ತೊಂದರೆ ಕೊಡುವ ಪ್ರಯತ್ನ ಸರ್ಕಾರದಿಂದ ಆಗುತ್ತಿದೆ. ಈ ಮಧ್ಯೆಯೂ ಸ್ಥಳೀಯವಾಗಿ ಆದಾಯ ಕ್ರೋಢಿಕರಿಸಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಬಾಕಿ ಹಣ ಬಂದರೆ ಹೆಚ್ಚು ಅಭಿವೃದ್ಧಿ ಮಾಡಲು ಸಾಧ್ಯವಾಗಲಿದ್ದು, ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು ಎಂದರು.
ಪಾಲಿಕೆಯ ನೌಕರರಿಗೆ ರಾಜ್ಯ ಸರ್ಕಾರ ಸಂಬಳ ನೀಡುತ್ತಿತ್ತು. ಆದರೀಗ ಅದನ್ನು ಬಂದ್ ಮಾಡಲಾಗಿದೆ. ಇಂದಿರಾ ಕ್ಯಾಂಟೀನ್‌ನ್ನು ಪಾಲಿಕೆಯಿಂದ ನಿರ್ವಹಿಸಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಇದರ ಪ್ರಚಾರ ಪಡೆಯುತ್ತಿದೆ. ಹು-ಧಾ ನಗರ ಪಾಲಿಕೆಯ ಸಭಾಭವನ ನಿರ್ಮಾಣಕ್ಕೆ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಸಾಕ್ಷಿಕರಿಸುತ್ತದೆ. ಇದೇ ಪರಿಸ್ಥಿತಿ ಮುಂದುವರಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಮಹಾನಗರದ ಜನತೆ ಮತ್ತೇ ಪಾಠ ಕಲಿಸುತ್ತಾರೆ ಎಂದರು.ಈ ಹಿಂದಿನ ಮೇಯರ್ ರಾಮಪ್ಪ ಬಡಿಗೇರ ರಾಜ್ಯ ಸರ್ಕಾರದ ಸ್ಪಂದನೆ ಕೊರತೆ ಮಧ್ಯೆಯೂ ಉತ್ತಮ ಕೆಲಸ ಮಾಡಿದ್ದಾರೆ. ಅದರಂತೆ ನೂತನ ಮೇಯರ್ ಹಾಗೂ ಉಪಮೇಯರ್ ಮೂಲಭೂತ ಸೌಕರ್ಯ ವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಅಲ್ಲದೇ, ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಅವುಗಳ ಸುಧಾರಣೆಗೆ ಕ್ರಮವಹಿಸಬೇಕು ಎಂದು ಸಲಹೆ ಮಾಡಿದರು.
ರಾಜ್ಯಾಧ್ಯಕ್ಷರ ಆಯ್ಕೆ ಶೀಘ್ರ: ಹುಬ್ಬಳ್ಳಿ: ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಕುರಿತು ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕಿದೆ. ಶೀಘ್ರದಲ್ಲೇ ನೇಮಕ ಮಾಡಬಹುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಳಿದ ರಾಜ್ಯಗಳ ಅಧ್ಯಕ್ಷರ ಆಯ್ಕೆ ಯಾವ ರೀತಿ ನಡೆಯುತ್ತದೆಯೋ ಅದೇ ರೀತಿ ಕರ್ನಾಟಕ ರಾಜ್ಯದ ಅಧ್ಯಕ್ಷರ ಆಯ್ಕೆಯೂ ನಡೆಯುತ್ತದೆ. ನಮ್ಮಲ್ಲಿ ಪ್ರಜಾಪ್ರಭುತ್ವವಿದೆ ಎಂದರು. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಚರ್ಚೆಯೇ ಇದೀಗ ಅಪ್ರಸ್ತುತ ಎಂದರು.
ಕೇಂದ್ರದಿಂದ ಅನ್ಯಾಯವಾಗಿಲ್ಲ:ಹುಬ್ಬಳ್ಳಿ: ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನದಲ್ಲಿ ಅನ್ಯಾಯ ಮಾಡಿಲ್ಲ, ಮಾಡುವುದೂ ಇಲ್ಲ. ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿ, ಮೆಟ್ರೋ ರೈಲು, ಉಪನಗರ ರೈಲು ಯೋಜನೆ, ರಾಜ್ಯದ ರೈಲ್ವೆ ಯೋಜನೆಗಳಿಗೆಲ್ಲ ಹೆಚ್ಚಿನ ಅನುದಾನ ನೀಡಿದೆ. ಇದಲ್ಲದೇ ಅನುದಾನ ಹಂಚಿಕೆ ವಿಷಯದಲ್ಲಿ ಯಾವುದೇ ಬಗೆಯ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆರ್ಥಿಕ ಸ್ಥಿತಿಗತಿ ಸರಿಯಿಲ್ಲ. ಇದನ್ನು ಅವರದೇ ಶಾಸಕರು ಹೇಳುತ್ತಿದ್ದಾರೆ. ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದರು.ಇನ್ನು ಇಲ್ಲಿನ ಮಂತ್ರಿ ಮಹೋದಯರೊಬ್ಬರು (ಸಂತೋಷ ಲಾಡ್) ಮಾತೆತ್ತಿದರೆ, ಮೋದಿ, ಟ್ರಂಪ್ ಬಗ್ಗೆ ಮಾತನಾಡುತ್ತಾರೆಯೇ ಹೊರತು, ಇಲ್ಲಿನ ಸ್ಥಿತಿ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕಿಸಿದರು. ರಸ್ತೆ ರಿಪೇರಿ ಮಾಡಿ ಅಂದರೆ ಮೋದಿ- ಟ್ರಂಪ್ ಬಗ್ಗೆ ಕೇಳಿ ಅಂತಾರೆ ಎಂದು ವ್ಯಂಗ್ಯವಾಡಿದರು.