ಅಕ್ಷರಸಂತ ಹರೇಕಳ ಹಾಜಬ್ಬ ಸ್ಥಾಪಿಸಿದ ನ್ಯೂಪಡ್ಪು ಶಾಲೆ ನೂತನ ಕಟ್ಟಡ ಉದ್ಘಾಟನೆ

KannadaprabhaNewsNetwork |  
Published : Jul 01, 2025, 12:47 AM IST
232 | Kannada Prabha

ಸಾರಾಂಶ

‘ಕನ್ನಡಪ್ರಭ ವರ್ಷದ ವ್ಯಕ್ತಿ’, ಪದ್ಮಶ್ರೀ ಹರೇಕಳ ಹಾಜಬ್ಬರು ಸ್ಥಾಪಿಸಿದ ಹರೇಕಳ ಗ್ರಾಮದ ನ್ಯೂಪಡ್ಪು ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಸದಾಗಿ ನಿರ್ಮಿಸಲಾದ ನಾಲ್ಕು ಕೊಠಡಿಗಳ ಒಂದಸ್ತಿನ ನೂತನ ಕಟ್ಟಡವನ್ನು ಶನಿವಾರ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲಊರಿನ ಸರ್ಕಾರಿ ಶಾಲೆಗಳಿಗೆ ಆಯಾ ಪ್ರದೇಶದ ಗ್ರಾಮಸ್ಥರ ಸಹಕಾರ ದೊರೆತರೆ ಎಲ್ಲಾ ಸೌಲಭ್ಯಗಳೊಂದಿಗೆ ಶಾಲೆಯು ಅಭಿವೃದ್ಧಿ ಕಾಣುವುದರಲ್ಲಿ ಸಂಶಯವಿಲ್ಲ.‌ ಇದಕ್ಕೆ ನ್ಯೂಪಡ್ಪುವಿನ ಶಾಲೆಯೇ ಸಾಕ್ಷಿಯಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅವರು ಹೇಳಿದರು.

‘ಕನ್ನಡಪ್ರಭ ವರ್ಷದ ವ್ಯಕ್ತಿ’, ಪದ್ಮಶ್ರೀ ಹರೇಕಳ ಹಾಜಬ್ಬರು ಸ್ಥಾಪಿಸಿದ ಹರೇಕಳ ಗ್ರಾಮದ ನ್ಯೂಪಡ್ಪು ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಸದಾಗಿ ನಿರ್ಮಿಸಲಾದ ನಾಲ್ಕು ಕೊಠಡಿಗಳ ಒಂದಸ್ತಿನ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಥಮಿಕ ಶಾಲೆ ಬೇರೆ ಬೇರೆ ಕಾರಣದಿಂದ ವಿದ್ಯಾರ್ಥಿಗಳ ಕೊರತೆಯಿಂದ ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿಯ ಗ್ರಾಮ ಪಂಚಾಯಿತಿ ಆಡಳಿತ, ಶಾಲಾಭಿವೃದ್ಧಿ ಸಮಿತಿ, ದಾನಿಗಳು ಹಾಗೂ ಶಿಕ್ಷಕ ವರ್ಗದ ಸಹಕಾರದಿಂದ ಅಹರ್ನಿಶಿ ದುಡಿದ ಕಾರಣ ಎಲ್‌ಕೆಜಿ, ಯುಕೆಜಿ ಜೊತೆಗೆ ಒಂದು ಹಾಗೂ ಎರಡನೆಯ ತರಗತಿಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆ ಮಾಡಲಾಯಿತು ಎಂದರು.

ಅಕ್ಷರ ಸಂತ ಹರೇಕಳ ಹಾಜಬ್ಬ ಮಾತನಾಡಿ, ಹರೇಕಳ ನ್ಯೂಪಡ್ಪುವಿನಲ್ಲಿ ಪದವಿಪೂರ್ವ ಕಾಲೇಜು ಆರಂಭವಾಗಿದ್ದು, ದೂರದ ಊರುಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ನೂತನ ಸುಸಜ್ಜಿತ ಕಟ್ಟಡಕ್ಕೆ ಅನುದಾನ ಒದಗಿಸಿಕೊಡುವಂತೆ ಶಾಸಕರಲ್ಲಿ ವಿನಂತಿಸಿದರು.ಹರೇಕಳ ಗ್ರಾಮ ಪಂಚಾಯಿತಿ ಸದಸ್ಯ ಬದ್ರುದ್ದಿನ್ ಹರೇಕಳ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫ ಶಾಲಾ ಅಭಿವೃದ್ಧಿಯ ಪಥದ ಕುರಿತಾಗಿ ಮಾತುಗಳನ್ನಾಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಅಬ್ದುಲ್ ಮಜೀದ್, ಸಮಾಜಸೇವಕಿ ಮೈಮುನಾ ರಾಜ್ ಕಮಲ್, ಡಿಡಿಪಿಐ ಗೋವಿಂದ ಮಡಿವಾಳ, ತಾಲೂಕು ಪಂಚಾಯಿತಿ ಇಒ ಗುರುದತ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ವಾರ್ಡ್ ಸದಸ್ಯರಾದ ಸತ್ತಾರ್, ಬಶೀರ್ ಹಾಗೂ ಸಿದ್ದಿಕ್, ಸದಸ್ಯೆ ಕಲ್ಯಾಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಿಯಾಝ್ ಹಾಗೂ ಪ್ರಾಂಶುಪಾಲ ಮುಸ್ತಫ, ಶಿಕ್ಷಕಿಯರಾದ ಪ್ರೇಮಲತಾ, ಶ್ವೇತಾ, ಸಮೀನಾ ಹಾಗೂ ಪುಷ್ಪಲತಾ ಇದ್ದರು.ಸ್ಪೀಕರ್‌ ಖಾದರ್‌ ಹಾಗೂ ಗಣ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರೀ ಸ್ವಾಗತಿಸಿದರು. ನಾಗರಾಜ ಪಟಗಾರ ನಿರೂಪಣೆಗೈದರು. ವಿದ್ಯಾಕಿರಣ್ ಸನ್ಮಾನಪತ್ರ ವಾಚಿಸಿದರು. ವಿನ್ನಿ ಲೆನ್ನಿ ಲೂಯಿಸ್ ವಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌