ಎಸ್ಸೆಸ್ಸೆಂಗೆ ರಾಜ್ಯ ವಿದೇಶಾಂಗ ಖಾತೆ ಕೊಡಿ: ಬಿ.ಪಿ.ಹರೀಶ

KannadaprabhaNewsNetwork |  
Published : Oct 23, 2026, 01:15 AM IST
22ಕೆಡಿವಿಜಿ4-ದಾವಣಗೆರೆಯಲ್ಲಿ ಗುರುವಾರ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಬದಲಿಗೆ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ರಾಜ್ಯದ ವಿದೇಶಾಂಗ ಖಾತೆ ಮಾಡಿ, ಅದರ ಸಚಿವರನ್ನಾಗಿ ಮಾಡಲಿ. ಸದಾ ವಿದೇಶ ಪ್ರವಾಸ ಮಾಡುವ ಇಲ್ಲಿನ ಸಚಿವರಿಗೆ ಇಂತಹ ಹೊಸ ಖಾತೆಯೇ ಸೂಕ್ತ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದ್ದಾರೆ.

- ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಷ್ಟು ಚರ್ಚಿಸಿದ್ದಾರೆ?, ಸದನದಲ್ಲಿ ಎಷ್ಟು ನಿಮಿಷ ಇದ್ದರೆಂದು ಸರ್ಕಾರ ಉತ್ತರಿಸಲಿ ಎಂದು ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಬದಲಿಗೆ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ರಾಜ್ಯದ ವಿದೇಶಾಂಗ ಖಾತೆ ಮಾಡಿ, ಅದರ ಸಚಿವರನ್ನಾಗಿ ಮಾಡಲಿ. ಸದಾ ವಿದೇಶ ಪ್ರವಾಸ ಮಾಡುವ ಇಲ್ಲಿನ ಸಚಿವರಿಗೆ ಇಂತಹ ಹೊಸ ಖಾತೆಯೇ ಸೂಕ್ತ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ತಮ್ಮ ಕ್ಷೇತ್ರದಲ್ಲಾಗಲೀ, ಜಿಲ್ಲೆಯಷ್ಟೇ ಅಲ್ಲ, ದೇಶದಲ್ಲೇ ಇರುವುದಿಲ್ಲ. ಹಾಗಾಗಿ, ಈಗ ಹೊಂದಿರುವ ಖಾತೆಗಳ ಬದಲಿಗೆ ರಾಜ್ಯದ ವಿದೇಶಾಂಗ ಖಾತೆ ಮಾಡಿ, ಅದರ ಸಚಿವರಾಗಿ ಮಾಡಲಿ ಎಂದರು.

ಎಷ್ಟು ದಿನ ದಾವಣಗೆರೆ ನಗರ, ಜಿಲ್ಲೆ, ರಾಜ್ಯದಲ್ಲಿ ಎಸ್ಸೆಸ್ ಮಲ್ಲಿಕಾರ್ಜುನ ಇರುತ್ತಾರೆ, ಎಷ್ಟು ನಿಮಿಷದ ಕಾಲ ವಿಧಾನಸಭಾ ಕಲಾಪದಲ್ಲಿ ಭಾಗವಹಿಸಿದ್ದರು, ಎಷ್ಟು ಸಚಿವ ಸಂಪುಟ ಸಭೆಗಳಲ್ಲಿ ಭಾಗಿಯಾಗಿದ್ದರು, ನಮ್ಮ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸದನದಲ್ಲಿ ಎಷ್ಟು ಸಲ ಎಸ್ಸೆಸ್ ಮಲ್ಲಿಕಾರ್ಜುನ ಮಾತನಾಡಿದ್ದಾರೆಂಬ ಬಗ್ಗೆ ಸರ್ಕಾರ ಪ್ರಕಟಿಸಲಿ ಎಂದು ಆಗ್ರಹಿಸಿದರು.

ಜಿಲ್ಲೆ ಅಭಿವೃದ್ಧಿಪಡಿಸದ ಸಚಿವರು ತಮ್ಮ ಪತ್ನಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮೂಲಕ ಸುಳ್ಳು ಹೇಳಿಸುತ್ತಾ, ರೈತರಿಗೆ ಮೋಸ ಮಾಡುತ್ತಿದ್ದಾರೆ. ಭದ್ರಾ ಅಚ್ಚುಕಟ್ಟು ಕೊನೆ ಭಾಗದ ರೈತರಿಗೆ ನೀರು ಕೊಡಿಸುವುದಾಗಿ, ನಾಲೆಗಳ ಆಧುನೀಕರಣ ಮಾಡುವುದಾಗಿ ಸಂಸದರು ಭಾಷಣ ಮಾಡುತ್ತಿದ್ದಾರೆ. ಮಳೆಗಾಲದ ಬತ್ತದ ಬೆಳೆಗೆ ಭದ್ರಾ ನಾಲೆಯಿಂದ ನೀರನ್ನು ಕೊಡಿಸುವ ಕೆಲಸ ಸಚಿವ- ಸಂಸದರು ಮಾಡಲಿಲ್ಲ. ಅದೇ ರೈತರಿಗೆ ತೊಂದರೆ ಆಗುವಂತೆ ತಮ್ಮ ಟೀಂ ಮೂಲಕ ಪ್ರಯತ್ನಿಸುತ್ತಿರುವುದನ್ನೂ ರೈತರು ಗಮನಿಸುತ್ತಿದ್ದಾರೆ ಎಂದು ದೂರಿದರು.

ತುಂಗಾದಿಂದ ಭದ್ರಾ ಮೇಲ್ದಂಡೆಗೆ ನೀರು ಲಿಫ್ಟ್ ಮಾಡದೇ, ಭದ್ರಾ ಡ್ಯಾಂನಿಂದ 800 ಕ್ಯುಸೆಕ್ ನೀರು ನಿತ್ಯ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಿದರೂ ಧ್ವನಿ ಎತ್ತದ ಇಂತಹ ಸಚಿವ, ಸಂಸದರು ಮಳೆಗಾಲದ ಬೆಳೆ ಕೈತಪ್ಪುವಂತೆ ಮಾಡಿದ್ದಾರೆ. ಹಿರಿಯೂರು ಉಪ ಚುನಾವಣೆ ಉದ್ದೇಶಕ್ಕೆ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ರೈತರಿಗೆ ಸಂಕಷ್ಟ ಬಂದೊದಗಲು ಕಾರಣರಾಗಿದ್ದಾರೆ. ಈಗ ಸಂಸದರ ಮೂಲಕ ಕೊನೆ ಭಾಗಕ್ಕೆ ನೀರು ಕೊಡುತ್ತೇವೆ, ನಾಲೆ ಆಧುನೀಕರಣ ಮಾಡಿಸುತ್ತೇವೆಂದು ಸುಳ್ಳು ಭರವಸೆ ನೀಡುವ ಕೆಲಸ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೌಡಿಗಳು, ನೀರಗಂಟಿಗಳಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಭದ್ರಾ ನಾಲೆಯ ಮಲೆಬೆನ್ನೂರು ವಿಭಾಗದಲ್ಲಿ 15 ಜನ ಎಂಜಿನಿಯರ್‌ಗಳು ಇರಬೇಕು. ಆದರೆ, ಕೇವಲ 5 ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ತಮ್ಮ ಕಾರ್ಖಾನೆ ಸುತ್ತಲಿನ ರೈತರ ಜಮೀನು ವಶಕ್ಕೆ ಪಡೆಯಲು ನೂತನ ಸಿಡಿಪಿ ಪ್ಲಾನ್‌ನಲ್ಲಿ 200 ಎಕರೆ ರೈತರ ಜಮೀನನ್ನೇ ಸಾರ್ವಜನಿಕ ಉದ್ದೇಶಕ್ಕೆ ಅಂತಾ ಮೀಸಲಿಡಿಸಿದ್ದಾರೆ. ತಮಗೆ ಸಿಗದ ಜಾಗವನ್ನೇ ಪಾರ್ಕ್‌, ಸಾರ್ವಜನಿಕ ಉದ್ದೇಶಕ್ಕೆಂದು ಮಾಡಿಸಿದ್ದಾರೆ ಎಂದು ಸಚಿವರ ವಿರುದ್ಧ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆಯೇ ಇಲ್ಲ. ಇದೊಂದು ಭಂಡ ಸರ್ಕಾರವಾಗಿದ್ದು, ಏನೇ ಹೋರಾಟ ಮಾಡಿದರೂ ಸ್ಪಂದಿಸುವುದಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು 2028ರ ವಿಧಾನಸಭೆ ಚುನಾವಣೆಯಲ್ಲಿ ಮನೆಗೆ ಕಳಿಸಿದ ನಂತರವೇ ಇಡೀ ರಾಜ್ಯದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಹೋರಾಟಗಳಿಗೆ ತಾರ್ಕಿಕ ಅಂತ್ಯ ಸಿಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಎಷ್ಟು ಹೋರಾಟ ಮಾಡಬೇಕು? ಕಾಂಗ್ರೆಸ್ ಸರ್ಕಾರದ ಸಾವಿರಾರು ಹಗರಣಗಳ ವಿರುದ್ಧ ನಿತ್ಯವೂ ಹೋರಾಟ ಮಾಡಿದರೂ ಸಾಲದು ಎಂದು ಬಿ.ಪಿ.ಹರೀಶ ಕುಟುಕಿದರು.

ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಪಾಲಿಕೆ ಮಾಡಿ ಸದಸ್ಯ ಶಿವನಗೌಡ ಟಿ.ಪಾಟೀಲ, ಹಿರಿಯ ಮುಖಂಡರಾದ ಟಿಂಕರ್ ಮಂಜಣ್ಣ, ಬಾಲಚಂದ್ರ ಶ್ರೇಷ್ಠಿ, ಸಚಿನ್ ಲೆಕ್ಕದ್, ಸೋಗಿ ಗುರು ಇತರರು ಇದ್ದರು.

- - -

(ಬಾಕ್ಸ್‌)

* ಟಿಕೆಟ್‌ ಹೈಕಮಾಂಡ್‌ ತೀರ್ಮಾನಿಸುತ್ತದೆ

2028ರ ವಿಧಾನ ಸಭಾ ಚುನಾವಣೆಯಲ್ಲಿ ಇಂತಹವರಿಗೆ ಟಿಕೆಟ್ ಅಂತೇನೂ ಖಚಿತವಾಗಿಲ್ಲ. ನಾನೂ ಆಕಾಂಕ್ಷಿ ಎಂಬುದಾಗಿ ಹೇಳುವುದು, ಟಿಕೆಟ್ ಬಯಸುವುದು ತಪ್ಪೇನೂ ಅಲ್ಲ. ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ಅಂತಿಮವಾಗಿ ತೀರ್ಮಾನಿಸುತ್ತದೆ ಎಂದು ಬಿ.ಪಿ.ಹರೀಶ ಹೇಳಿದರು.

ವಿಪ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಬಿಜೆಪಿಯ ಕೆ.ಎಂ.ಸುರೇಶ ಸ್ಪರ್ಧಿಸಿದ್ದು, 4 ಸಲ ಬಿಜೆಪಿ, 2 ಸಲ ಜೆಡಿಎಸ್ ಗೆದ್ದ ಕ್ಷೇತ್ರ ಇದು. ಈ ಸಲ ಕೆ.ಎಂ.ಸುರೇಶ ಗೆಲುವು ನಿಶ್ಚಿತವಾಗಿದ್ದು, ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್‌ ಹೆಸರಿನಲ್ಲಿ ಮತ್ತೊಬ್ಬರ ತೇಜೋವಧೆ ಹೆಚ್ಚುತ್ತಿರುವುದು ಸರಿಯಲ್ಲ. ಇಂತಹದ್ದರಿಂದ ರಾಜಕೀಯವೇ ಅಸಹ್ಯವೆನಿಸುತ್ತದೆ. ಸ್ಟಿಂಗ್ ಆಪರೇಷನ್‌ ಕೊನೆಯಾಗಬೇಕು. ರಾಜ್ಯ ಸರ್ಕಾರ ಸ್ಟಿಂಗ್ ಆಪರೇಷನ್ ತಡೆಗೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಬಿ.ಪಿ.ಹರೀಶ ಒತ್ತಾಯಿಸಿದರು.

- - -

-22ಕೆಡಿವಿಜಿ4: ದಾವಣಗೆರೆಯಲ್ಲಿ ಗುರುವಾರ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ದಸರಾದಲ್ಲಿ ಸ್ತ್ರೀ ಶಕ್ತಿಗೆ ಭಾರೀ ಮೆಚ್ಚುಗೆ
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕೊಡಲು ವಿಳಂಬ