ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಅಡಿಯಲ್ಲಿ ಬಿಬಿಎಂಪಿ ವಿಭಜನೆ ಕೈ ಬಿಡಿ, ಚುನಾವಣೆ ಮಾಡಿ : ಜನಾಭಿಪ್ರಾಯ

KannadaprabhaNewsNetwork | Updated : Feb 11 2025, 05:06 AM IST

ಸಾರಾಂಶ

ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕದ ಅಡಿಯಲ್ಲಿ ಬಿಬಿಎಂಪಿ ವಿಭಜಿಸಿ ಒಂದಕ್ಕಿಂತ ಹೆಚ್ಚಿನ ನಗರ ಪಾಲಿಕೆ ಮಾಡುವುದರಿಂದ ಸಮಸ್ಯೆಗಳು ಹೆಚ್ಚಾಗಲಿವೆ. ಅದರ ಬದಲು ಇರುವ ವ್ಯವಸ್ಥೆಗೆ ಚುನಾವಣೆ ನಡೆಸಬೇಕು ಎಂದು ಸಾರ್ವಜನಿಕರು ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಗೆ ಆಗ್ರಹಿಸಿದರು.

 ಬೆಂಗಳೂರು : ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕದ ಅಡಿಯಲ್ಲಿ ಬಿಬಿಎಂಪಿ ವಿಭಜಿಸಿ ಒಂದಕ್ಕಿಂತ ಹೆಚ್ಚಿನ ನಗರ ಪಾಲಿಕೆ ಮಾಡುವುದರಿಂದ ಸಮಸ್ಯೆಗಳು ಹೆಚ್ಚಾಗಲಿವೆ. ಅದರ ಬದಲು ಇರುವ ವ್ಯವಸ್ಥೆಗೆ ಚುನಾವಣೆ ನಡೆಸಬೇಕು ಎಂದು ಸಾರ್ವಜನಿಕರು ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಗೆ ಆಗ್ರಹಿಸಿದರು.

ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಕುರಿತು ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ಸದಸ್ಯರು ಸೋಮವಾರ ಪೂರ್ವ ವಲಯ ಮತ್ತು ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬಹುತೇಕ ಸಾರ್ವಜನಿಕರು ಬಿಬಿಎಂಪಿ ಚುನಾವಣೆ ಕುರಿತು ಪ್ರಸ್ತಾಪಿಸಿದರು. ನಗರದಲ್ಲಿ ಕಾರ್ಪೋರೇಟರ್‌ಗಳಿಲ್ಲ. ನಾಗರಿಕರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನಕೊಡದಂತಾಗಿದ್ದು, ಬಿಬಿಎಂಪಿ ವಿಭಜಿಸುವ ಬದಲು ಈಗಿರುವ ವ್ಯವಸ್ಥೆಗೆ ಚುನಾವಣೆ ಮಾಡಬೇಕು. ಅಲ್ಲದೆ, ಬಿಬಿಎಂಪಿಗೆ ಈಗಾಗಲೇ 110 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿದ್ದು, ಅದಕ್ಕೆ ಸರಿಯಾದ ಅನುದಾನ ಹಂಚಿಕೆಯಾಗುತ್ತಿಲ್ಲ. ನಾಗರಿಕರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಪದ ಬಳಸಿ:

ಗ್ರೇಟರ್‌ ಬೆಂಗಳೂರು ವಿಧೇಯಕದಲ್ಲಿ ಗ್ರೇಟರ್‌ ಬದಲು ಕನ್ನಡ ಪದವನ್ನು ಬಳಸಬೇಕು. ಆ ಪ್ರಾಧಿಕಾರಕ್ಕೆ ಮಹಾಪೌರರನ್ನೇ ಮುಖ್ಯಸ್ಥರನ್ನಾಗಿ ನೇಮಿಸಬೇಕು. ಬೆಳೆಯುತ್ತಿರುವ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಹೊಸ ವಿಧೇಯಕಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು ಮತ್ತು ಪಾರದರ್ಶಕ ಆಡಳಿತ ನೀಡಬೇಕು ಎಂದು ಸಲಹೆ ನೀಡಿದರು.ಸಮಿತಿ ಅಧ್ಯಕ್ಷ ರಿಜ್ವಾನ್‌ ಅರ್ಷದ್‌, ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಎ.ಸಿ. ಶ್ರೀನಿವಾಸ್‌, ಪ್ರಿಯಕೃಷ್ಣ, ಬೈರತಿ ಬಸವರಾಜ್‌, ವಿಧಾನಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಇತರರಿದ್ದರು.

ಇ-ಮೇಲ್ ಮೂಲಕ ಸಲಹೆ ನೀಡಬಹುದು: ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಕುರಿತು ಸಾರ್ವಜನಿಕರು, ಸಂಘ ಸಂಸ್ಥೆಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಇ-ಮೇಲ್ gbasuggestion@gmail.com ಮೂಲಕ ಸಲ್ಲಿಸಬಹುದಾಗಿದೆ.

ನಗರದ ಮೂಲಸೌಕರ್ಯಕ್ಕಾಗಿ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ರೂಪಿಸಲಾಗಿದೆ. ಅದರ ಸಾಧಕ-ಭಾದಕಗಳ ಪರಿಶೀಲನೆಗಾಗಿ ಜಂಟಿ ಪರಿಶೀಲನಾ ಸಮಿತಿ ರಚಿಸಲಾಗಿದೆ. ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯ ಸ್ವೀಕರಿಸಲಾಗುತ್ತಿದ್ದು, ವಿಧೇಯಕದಲ್ಲಿ ಅಳವಡಿಸಲಾಗುವುದು.

ರಿಜ್ವಾನ್ ಅರ್ಷದ್‌, ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ

Share this article