- ಗೊಬ್ಬರಕ್ಕೆ ಆಗ್ರಹಿಸಿ ಜಗಳೂರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ರೈತರ ಆಗ್ರಹ
- ಮಂಗಳವಾರ ಸಂಜೆ ಯೂರಿಯಾ ದಾಸ್ತಾನು ಬರಲಿದೆ: ತಹಸೀಲ್ದಾರ್ ಸೈಯದ್ ಹೇಳಿಕೆ- - -
ಕನ್ನಡಪ್ರಭ ವಾರ್ತೆ ಜಗಳೂರುಅಸಮರ್ಪಕ ಯೂರಿಯಾ ಪೂರೈಕೆ ಹಿನ್ನೆಲೆ ವಿವಿಧ ಗ್ರಾಮಗಳ ನೂರಾರು ರೈತರು ತಹಸೀಲ್ದಾರ್ ಕಚೇರಿ ಮುತ್ತಿಗೆ ಹಾಕಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.
ತಾಲೂಕಿನ ಕೆಚ್ಚೇನಹಳ್ಳಿ, ತಮಲೇಹಳ್ಳಿ, ಲಿಂಗಣ್ಣನಹಳ್ಳಿ, ಮರೇನಹಳ್ಳಿ, ಹನುಮಂತಾಪುರ ಸೇರಿದಂತೆ ಸುತ್ತಮುತ್ತಲನ ಹತ್ತಾರು ಗ್ರಾಮಗಳ 500ಕ್ಕೂ ಹೆಚ್ಚು ರೈತರು ತಹಸೀಲ್ದಾರ್ ಕಚೇರಿ ಬಳಿ ಧಿಕ್ಕಾರ ಕೂಗಿ ಗೊಬ್ಬರಕ್ಕಾಗಿ ಆಗ್ರಹಿಸಿದರು.ಬೆಳಗ್ಗೆಯಿಂದಲೇ ವಿವಿಧ ಫರ್ಟಿಲೈಜರ್ ಅಂಗಡಿಗಳ ಮುಂದೆ ಯೂರಿಯಾ ಗೊಬ್ಬರಕ್ಕಾಗಿ ಕಾದು ಕುಳಿತ ರೈತರಿಗೆ ಅಂಗಡಿ ಮಾಲೀಕರು ಗೊಬ್ಬರ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೈತರು ರಸಗೊಬ್ಬರ ಅಂಗಡಿ ಮಾಲೀಕರು ಮತ್ತು ಕೆಲಸಗಾರರ ವಿರುದ್ಧವೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಅಂಗಡಿಗಳ ಮಾಲೀಕರು ಸ್ವಯಂ ಅಂಗಡಿಗಳನ್ನು ಬಂದ್ ಮಾಡಿದರು.
ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ರೈತರು ರಸಗೊಬ್ಬರ ಕೊಡಿ ಇಲ್ಲ ವಿಷ ಕೊಡಿ ಎಂದು ಕೂಗುತ್ತಾ ತಹಸೀಲ್ದಾರ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಆಗ ತಕ್ಷಣ ಪೊಲೀಸ್ ಸಬ್ಇನ್‌ಸ್ಪೆಕ್ಟರ್ ಗಾದಿ ಲಿಂಗಪ್ಪ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ರೈತರನ್ನು ತಡೆದು ಹೊರ ಕಳುಹಿಸಿದರು.ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಆಗಮಿಸಿ, ರೈತರನ್ನು ಸಮಾಧಾನಪಡಿಸಿದರು. ಮಂಗಳವಾರ ಸಂಜೆ ಯೂರಿಯಾ ದಾಸ್ತಾನು ಬರಲಿದೆ. ಈ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಶೀಘ್ರ ಗೊಬ್ಬರ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಅನಂತರ ಪ್ರತಿಭಟನಾನಿರತ ರೈತರು ಮನೆಗಳ ಕಡೆಗೆ ನಡೆದರು. ಕೃಷಿ ಇಲಾಖೆ ಎಡಿಎ ಎಚ್.ಶ್ವೇತಾ ಸೇರಿದಂತೆ ಇಲಾಖೆ ಸಿಬ್ಬಂದಿ ಮತ್ತು ತೋಟಗಾರಿಕೆ ಇಲಾಖೆ ಎಸ್ಎಡಿಎಚ್ ಪ್ರಭು ಶಂಕರ್ ಸ್ಥಳದಲ್ಲಿ ಹಾಜರಿದ್ದರು.
- - - --28ಜೆ.ಎಲ್.ಆರ್.ಚಿತ್ರ2:
ಜಗಳೂರು ತಹಸೀಲ್ದಾರ್ ಕಚೇರಿಯ ಮುಂದೆ ರಸಗೊಬ್ಬರಕ್ಕಾಗಿ ಆಗ್ರಹಿಸಿ ರೈತರು ಮುತ್ತಿಗೆ ಹಾಕಲು ಯತ್ನಿಸಿದರು.