ಶೋಧ ಕಾರ್ಯಕ್ಕೆ ನಮಗೂ ಅವಕಾಶ ನೀಡಿ: ಲಾರಿ ಚಾಲಕರು

KannadaprabhaNewsNetwork |  
Published : Jul 23, 2024, 12:36 AM IST
ಅಂಕೋಲಾ- ಕಾರವಾರ ತಾಲೂಕಿನ ಚಾಲಕರ ಒಕ್ಕೂಟ ಪಧಾದಿಕಾರಿಗಳು-ಸದಸ್ಯರು ಧಾವಿಸಿ ಶಿರೂರಿನತ್ತ ಧಾವಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಚಾಲಕರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಮಧ್ಯಾಹ್ನದ ಹೊತ್ತಿಗೆ ಶಿರೂರಿನಲ್ಲಿ ಪೊಲೀಸರು ಹಾಕಿರುವ ಬ್ಯಾರೀಕೇಡ್ ಬಳಿ ಜಮಾಯಿಸಿ ಒಳಗೆ ಬಿಡುವಂತೆ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಅಂಕೋಲಾ: ಶಿರೂರಿನ ಗುಡ್ಡ ಕುಸಿತ ದುರಂತದಲ್ಲಿ ಅಪಾಯಕ್ಕೆ ಸಿಲುಕಿರುವ ಕೇರಳದ ಅರ್ಜುನ ಸಹಾಯಕ್ಕೆ ಅಂಕೋಲಾ- ಕಾರವಾರ ತಾಲೂಕಿನ ಚಾಲಕರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಶಿರೂರಿನತ್ತ ಧಾವಿಸಿ, ನಮಗೂ ಕಾರ್ಯಾಚರಣೆ ಮಾಡಲು ಅವಕಾಶ ಕೊಡಿ. ಮಾಧ್ಯಮದವರನ್ನು ಹೊರಗಿಟ್ಟು ಕಾರ್ಯಾಚರಣೆ ಮಾಡುವ ಒಳಮರ್ಮ ಏನು ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಸೋಮವಾರ ಮಧ್ಯಾಹ್ನದ ಹೊತ್ತಿಗೆ ಶಿರೂರಿನಲ್ಲಿ ಪೊಲೀಸರು ಹಾಕಿರುವ ಬ್ಯಾರೀಕೇಡ್ ಬಳಿ ಜಮಾಯಿಸಿ ಒಳಗೆ ಬಿಡುವಂತೆ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಅರ್ಜುನ ಹಾಗೂ ಲಾರಿಯನ್ನು ಮಣ್ಣಿನಿಂದ ಹೊರ ತೆಗೆಯಲು ನಾವು ಸಹ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಗಟ್ಟಿ ಧ್ವನಿಯಿಂದಲೇ ಹೇಳಿದರು.

ಚಾಲಕರ ಒಕ್ಕೂಟದ ಅಂಕೋಲಾ ಘಟಕದ ಖಜಾಂಚಿ ರಾಮಚಂದ್ರ ಗೌಡ ಮಾತನಾಡಿ, ಕಾರ್ಯಾಚರಣೆ ನಡೆಯುತ್ತಿರುವುದು ಕೇವಲ ಟಿವಿಯಲ್ಲಿ ಕೇಳಿದ್ದೇವೆ. ಅದರೆ ವಾಸ್ತವ ಸಂಗತಿ ಏನೆಂದು ಇನ್ನೂ ತಿಳಿಯುತ್ತಿಲ್ಲ. ಹಾಗಾಗಿ ಅದರ ಮಾಹಿತಿ ಬೇಕು. ಅವಶ್ಯವಿದ್ದರೆ ನಾವೇ ಕೆಲಸ ಮಾಡಲು ಸಿದ್ಧ. ದಯಮಾಡಿ ಅವಕಾಶ ಕೊಡಿ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಚಾಲಕರ ಸಂಘ ಘಟಕದ ಗೌರವಾಧ್ಯಕ್ಷ ಪ್ರಭಾಕರ ನಾಯ್ಕ, ಪ್ರಧಾನ ಕಾರ್ಯದರ್ಶಿ ಅನಂತ ಗೌಡ, ಸಂಘಟನಾ ಕಾರ್ಯದರ್ಶಿ ವಿಕಾಸ ನಾಯ್ಕ, ಕಾರ್ಯದರ್ಶಿ ವಿಶ್ವನಾಥ ನಾಯ್ಕ, ಉಪಾಧ್ಯಕ್ಷ ಪ್ರಸಾದ ನಾಯ್ಕ, ಮಹೇಂದ್ರ ನಾಯ್ಕ, ಪಾಂಡು ನಾಯ್ಕ, ವೆಂಕಟೇಶ ನಾಯ್ಕ, ದೀಪಕ ನಾಯ್ಕ, ಉಲ್ಲಾಸ ಗಾಂವಕರ, ವಿನೋದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಉಗ್ರ ಹೋರಾಟ: ಒಬ್ಬ ವ್ಯಕ್ತಿ ಏಳು ದಿನಗಳಿಂದ ಮಣ್ಣಿನ ಒಳಗೆ ಇದ್ದಾನೆ. ಆದರೂ ಆತನ ಪತ್ತೆ ಮಾಡಲು ಆಗುತ್ತಿಲ್ಲವೆಂಬುದು ಬೇಸರದ ಸಂಗತಿ. ಅದಕ್ಕಾಗಿ ಕರ್ನಾಟಕ ಚಾಲಕರ ಒಕ್ಕೂಟದ ಕರಾವಳಿ ಭಾಗದ ಎಲ್ಲ ತಾಲೂಕಿನ ಪದಾಧಿಕಾರಿಗಳು ಹಾಗೂ ಸದಸ್ಯರು ಒಟ್ಟಾಗಿ ಬಂದಿದ್ದೇವೆ. ಒಂದು ವೇಳೆ ನಮ್ಮನ್ನು ಒಳಗೆ ಬಿಡದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಾರವಾರ ಚಾಲಕರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಚಿಪ್ಕರ್ ತಿಳಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ