ಕನ್ನಡಪ್ರಭ ವಾರ್ತೆ ಕಮಲನಗರ
ಪ್ರತಿವರ್ಷ ಆಷಾಢ ಮಾಸದಲ್ಲಿ ಮೂರು ದಿನಗಳವರೆಗೆ ಪ್ರತಿನಿತ್ಯ ಸದ್ಗುರು ಸಂತ ಹರಿನಾಥ ಮಹಾರಾಜರ ಮಂದಿರದಲ್ಲಿ ಭಜನೆ, ಕಿರ್ತನೆ, ಬಾರುಢ, ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ಕೊನೆ ದಿನ ಸಮಾರೋಪ ಸಮಾರಂಭ ಹಾಗೂ ಧರ್ಮ ಜಾಗೃತಿ ಅಂಗವಾಗಿ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಿತು.
ಈ ವೇಳೆ ಗೋಪಾಳರಾವ ಪಾಟೀಲ್ ಮಾತನಾಡಿ, ಸಂತ ಹರಿನಾಥ ಮಹಾರಾಜರು ಹಿಂದು-ಮುಸ್ಲಿಂರ ಮಧ್ಯೆ ಧಾರ್ಮಿಕ ಸಾಮರಸ್ಯ ಮೂಡಿಸಲು ಹಾಗೂ ಪ್ರೀತಿ ವಿಶ್ವಾಸದ ಬದುಕು ರೂಪಿಸಲು ಧರ್ಮ ಪ್ರಚಾರ ಕೈಗೊಂಡರು.ಪರಮ ಶಿಷ್ಯ ಕೇಶವನಾಥ ಮಹಾರಾಜರ ಜತೆಗೂಡಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸಂಚರಿಸಿ ಸತ್ಯ, ಅಹಿಂಸೆ ಮತ್ತು ಭಕ್ತಿ ಮಾರ್ಗದ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬೇಕು ಎಂದು ಸಾರಿ ಹೇಳಿದ್ದರು ಎಂದರು.
ಅಡ್ಡಪಲ್ಲಕ್ಕಿ ಮೆರವಣಿಗೆ ಉದ್ದಕ್ಕೂ ಹರಿನಾಥ ಮಹಾರಾಜ ಯುವಕ ಸಂಘ, ಭಜನಾ ಮಂಡಳಿ, ಅಕ್ಕನ ಬಳಗ ಭಜನ ಮಂಡಳಿ ಸದಸ್ಯರು, ಹಾಡುವ ಭಾರುಡ, ಭಜನೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.
ಅದ್ಧೂರಿ ಮೆರವಣಿಗೆಯೊಂದಿಗೆ ಮಂಗಲವಾದ್ಯಗಳಿಂದ ಹೊರಟ ಉತ್ಸವ ನೋಡುಗರಿಗೆ ಗಮನ ಸೆಳೆಯಿತು.