ರಸ್ತೆ ದುರಸ್ತಿಗಾಗಿ ತುಪ್ಪದಕುರಹಟ್ಟಿ ಗ್ರಾಮ ಪಂಚಾಯಿತಿಗೆ ಬೀಗ

KannadaprabhaNewsNetwork |  
Published : Jul 23, 2024, 12:36 AM IST
ಮೂಲಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಸೋಮವಾರ ವಿದ್ಯಾರ್ಥಿಗಳೊಂದಿಗೆ ಗ್ರಾಮಸ್ಥರು ತುಪ್ಪದಕುರಹಟ್ಟಿ ಗ್ರಾಪಂಗೆ ಬೀಗಜಡಿದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಇಒ ಸಿಂಧೆ, ಗ್ರಾಮದಲ್ಲಿರುವ ಸಮಸ್ಯೆಗಳನ್ನು ನಿವಾರಿಸಲಾಗುವುದು. ಮಂಗಳವಾರ ಜಿಪಂ ಎಂಜಿನಿಯರ್‌ ಅವರನ್ನು ಗ್ರಾಮಕ್ಕೆ ಕರೆದುಕೊಂಡು ಬರಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಅಣ್ಣಿಗೇರಿ:

ಮೂಲಭೂತ ಸೌಲಭ್ಯ ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ರಸ್ತೆ ನಿರ್ಮಿಸಿಕೊಂಡುವಂತೆ ಒತ್ತಾಯಿಸಿ ಸೋಮವಾರ ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮಸ್ಥರು ಶಾಲಾ ವಿದ್ಯಾರ್ಥಿಗಳೊಂದಿಗೆ ಗ್ರಾಪಂಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕಳೆದ ಹತ್ತಾರು ವರ್ಷಗಳಿಂದ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿಲ್ಲ. ಗ್ರಾಮವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಈ ಕುರಿತು ಸ್ಥಳೀಯ ಗ್ರಾಪಂ ಸದಸ್ಯರಿಗೆ, ಪಿಡಿಒ ಅವರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಪ್ರಭಾರಿ ಪಿಡಿಒಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಸಮಸ್ಯೆಗಳ ಇತ್ಯರ್ಥಕ್ಕೆ ಗ್ರಾಪಂ ಸದಸ್ಯರು ಮನಸ್ಸು ಮಾಡುತ್ತಿಲ್ಲ. ಹೀಗಾದರೆ ನಾವು ಯಾರ ಹತ್ತಿರ ಸಮಸ್ಯೆ ಹೇಳಿಕೊಳ್ಳಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಗಂಟೆಗೂ ಹೆಚ್ಚುಕಾಲ ಗ್ರಾಪಂ ಕಚೇರಿಗೆ ಬೀಗ ಜಡಿದರು. ವಿಷಯ ತಿಳಿದು ಗ್ರಾಪಂಗೆ ಆಗಮಿಸಿದ ಇಒ ಸಿಂಧೆ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಆನಂತರ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುವ ರಸ್ತೆಯನ್ನು ಪರಿಶೀಲಿಸಿದರು. ಗ್ರಾಮಸ್ಥರ ಸಮಸ್ಯೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು. ಮಂಗಳವಾರ ಜಿಪಂ ಅಭಿಯಂತರರನ್ನು ಗ್ರಾಮಕ್ಕೆ ಕರೆದುಕೊಂಡು ಬಂದು ರಸ್ತೆ ಕಾಮಗಾರಿ ಕೈಗೊಳ್ಳಲು ಅಗತ್ಯ ನೀಲನಕ್ಷೆ ಸಿದ್ಧಪಡಿಸಿ ಶೀಘ್ರವೇ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.

ಗ್ರಾಮಸ್ಥರು ಒಂದು ವಾರಗಳ ಗಡುವು ನೀಡಿದರು. ಕಾಮಗಾರಿ ಆರಂಭಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ಸಂಗನಗೌಡ ಜಕ್ಕನಗೌಡ್ರ, ಮಾರುತಿ ತಳವಾರ, ಶ್ರೀಶೈಲ ನಮಸ್ತೆಮಠ, ಮೌನೇಶ ಗುಡ್ಡಮ್ಮನವರ, ವೀರಪ್ಪ ಕಲ್ಲೂರ, ಬಸಪ್ಪ ದೋತಾರಿ, ಯಲ್ಲಪ್ಪಗೌಡ ಕೆಂಚನಗೌಡ್ರ, ಬಸವರಾಜ ಕುರಹಟ್ಟಿ, ರವಿ ಜಟ್ಟಣ್ಣವರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು