ಕನ್ನಡಪ್ರಭ ವಾರ್ತೆ ಮಂಡ್ಯ
ಕುಡಿಯಲು ಕಾವೇರಿ ನೀರು ಪೂರೈಸುವಂತೆ ಒತ್ತಾಯಿಸಿ ಕೆಎಚ್‌ಬಿ ಮಹಾರಾಜನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳು ಬೈಕ್ ರ್ಯಾಲಿ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಶನಿವಾರ ಮನವಿ ಸಲ್ಲಿಸಿದರು.ಕೆಎಚ್‌ಬಿ ಮಹಾ ರಾಜನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಪಂಚಮುಖಿ ಗಣಪತಿ ದೇವಸ್ಥಾನದ ಬಳಿ ಸೇರಿದ ಬಡಾವಣೆ ನಿವಾಸಿಗಳು ಅಲ್ಲಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಬೈಕ್ ರ್ಯಾಲಿ ನಡೆಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿಗೆ ಮನವಿ ಸಲ್ಲಿಸಿದರು.
ಕೆಎಚ್‌ಬಿ ಬಡಾವಣೆ ನಿರ್ಮಾಣ ಮಾಡಿ ೨೦ ವರ್ಷ ಕಳೆದರೂ ಈವರೆಗೂ ಬಡಾವಣೆ ಜನರಿಗೆ ಕುಡಿಯುವ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಲ್ಲ. ೨೦೧೯ರಲ್ಲಿ ಕರ್ನಾಟಕ ಗೃಹಮಂಡಳಿ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಿದೆ. ಕಳೆದ ೬ ವರ್ಷಗಳಿಂದ ಬಡಾವಣೆ ನಿವಾಸಿಗಳು ಕಂದಾಯ ಕಟ್ಟುತ್ತಿದ್ದಾರೆ. ಆದರೆ, ಈವರೆಗೂ ನಗರಸಭೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ ಎಂದು ಟೀಕಿಸಿದರು.ಕೆಆರ್‌ಎಸ್ ಜಲಾಶಯದಿಂದ ಬೆಂಗಳೂರಿಗೆ ಸಾವಿರಾರು ಕೋಟಿ ರು. ವೆಚ್ಚ ಮಾಡಿ ನಿತ್ಯ ನೀರು ಪೂರೈಸಲಾಗುತ್ತಿದೆ. ೫ನೇ ಹಂತ ಪೂರ್ಣಗೊಳಿಸಿ ೬ನೇ ಹಂತದ ಬಗ್ಗೆ ಯೋಜನೆ ರೂಪಿಸುತ್ತಿದೆ. ರಾಮನಗರ ಜಿಲ್ಲೆಗೂ ಕಾವೇರಿ ನೀರು ಪೂರೈಸುವ ಯೋಜನೆ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ. ಆದರೆ, ಮಂಡ್ಯ ಜಿಲ್ಲೆಯಲ್ಲಿರುವ ಕೆ.ಆರ್.ಎಸ್. ಆಣೆಕಟ್ಟೆಯಿಂದ ಮಂಡ್ಯ ಜಿಲ್ಲಾ ಕೇಂದ್ರದಲ್ಲಿರುವ ಕೆಹೆಚ್‌ಬಿ ಬಡಾವಣೆ ಜನರಿಗೆ ಮಾತ್ರ ಕಾವೇರಿ ನೀರು ಪೂರೈಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯಲ್ಲಿ ಸುಮಾರು ೫೦೦ ಕುಟುಂಬಗಳು ವಾಸ ಮಾಡುತ್ತಿದ್ದು, ಬಡಾವಣೆಗೆ ಕುಡಿಯಲು ಕಾವೇರಿ ನೀರು, ಸಮರ್ಪಕ ಒಳಚರಂಡಿ, ಬೀದಿ ದೀಪಗಳು, ರಸ್ತೆಗಳಿಲ್ಲ. ಗಿಡ ಗಂಟೆಗಳು ರಸ್ತೆಗಳಲ್ಲೇ ಬೆಳೆದು ನಿಂತಿವೆ. ಕಂದಾಯ ಕಟ್ಟುತ್ತಿರುವುದಕ್ಕಾದರೂ ನಗರಸಭೆ ರಸ್ತೆಯಲ್ಲಿರುವ ಗಿಡ ಗಂಟೆಗಳನ್ನು ತೆರವುಗೊಳಿಸಲು ಮುಂದಾಗಿಲ್ಲ ಎಂದು ಕಿಡಿಕಾರಿದರು.ಕಾವೇರಿ ನೀರು ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಮನೆ ನಿರ್ಮಾಣ ಮಾಡುವವರು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಆದರೆ, ಆ ನೀರು ಸಂಪೂರ್ಣ ಕಲುಷಿತಗೊಂಡಿದ್ದು ಕುಡಿಯುವುದಕ್ಕಿರಲಿ, ಸ್ನಾನಕ್ಕೂ ಯೋಗ್ಯವಾಗಿಲ್ಲ. ಈ ಸಂಬಂಧ ಸಾಕಷ್ಟು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆ ಹಾಗೂ ಕೆಎಚ್‌ಬಿ ನಡುವಿನ ತಿಕ್ಕಾಟದಿಂದ ಬಡಾವಣೆ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.
ಬಡಾವಣೆ ಹಸ್ತಾಂತರ ಸಮಯದಲ್ಲಿ ಗೃಹಮಂಡಳಿ ೫.೫೦ ಕೋಟಿ ರು. ಹಣವನ್ನು ನಗರಸಭೆಗೆ ನೀಡಿತ್ತು. ಅದರಲ್ಲಿ ೪.೪೬ ಕೋಟಿ ರು. ವೆಚ್ಚದಲ್ಲಿ ಕೆಲವೇ ಕೆಲವು ರಸ್ತೆಗಳ ಕಾಮಗಾರಿ ಮಾಡಿದ್ದಾರೆ, ಅದನ್ನು ಹೊರತುಪಡಿಸಿದರೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಕೂಡಲೇ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಹೋರಾಟ ರೂಪಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಮಹಾರಾಜನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಸಿ.ಶ್ರೀಕಾಂತ್, ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಪುಟ್ಟಯ್ಯ, ಕಾರ್ಯದರ್ಶಿ ಅಶೋಕ್, ಸಂಘಟನಾ ಕಾರ್ಯದರ್ಶಿ ಶಶಿಧರ್, ಮೋಹನ್, ಯಶಸ್ವಿನಿ, ಕಾಂತರಾಜು, ಶ್ರೀನಿವಾಸ್ ಹಾಗೂ ಬಡಾವಣೆಯ ನಿವಾಸಿಗಳು ಹೆಂಗಸರು ಹಾಗೂ ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಟ್ಯಾಂಕ್ ಮೂಲಕ ನೀರು ಪೂರೈಸಲು ಕ್ರಮ: ಎಡಿಸಿ
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಮನವಿ ಸ್ವೀಕರಿಸಿ ಮಾತನಾಡಿ, ಬಡಾವಣೆಯ ಸಮಸ್ಯೆಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಇತ್ತೀಚೆಗೆ ನಗರಸಭೆಯಲ್ಲಿ ಕೆಎಚ್‌ಬಿ ಬಡಾವಣೆಯನ್ನು ಮತ್ತೆ ವಾಪಸ್ ಗೃಹ ಮಂಡಳಿಗೆ ಹಸ್ತಾಂತರ ಮಾಡಲು ನಿರ್ಣಯ ಮಾಡಿದ್ದಾರೆ. ಇದಕ್ಕೆ ಅವಕಾಶವಿಲ್ಲ. ಕಂದಾಯ ಹಣದಿಂದ ಬಡಾವಣೆಯನ್ನು ನಿರ್ವಹಣೆ ಮಾಡುವುದು ನಗರಸಭೆ ಜವಾಬ್ದಾರಿ ಎಂದರು.ಕೊಳವೆಬಾವಿ ನೀರು ಕುಲುಷಿತಗೊಂಡಿರುವ ಕಾರಣ ನಗರಸಭೆ ನಾಳೆಯಿಂದಲೇ ಟ್ಯಾಂಕರ್ ಮೂಲಕ ಕಾವೇರಿ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸಬೇಕೆಂದು ಸ್ಥಳದಲ್ಲಿಯೇ ಇದ್ದ ನಗರಸಭೆ ಆಯುಕ್ತರಿಗೆ ಸೂಚಿಸಿದರು.
ನಗರಸಭೆ, ಕರ್ನಾಟಕ ಹೌಸಿಂಗ್ ಬೋರ್ಡ್ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ವಾರದೊಳಗೆ ಸರ್ವೆ ನಡೆಸಿ ವರದಿ ತಯಾರಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.