ಶಿವಮೊಗ್ಗ: ಬಾಲ್ಯದಲ್ಲಿಯೆ ಇಂಗ್ಲಿಷ್ ಹೇರದೆ, ನಮಗೆ ತಿಳಿಯುವಂತಹ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿ ಎಂದು ಜಾವಳ್ಳಿಯ ಜ್ಞಾನದೀಪ ಶಾಲಾ ವಿದ್ಯಾರ್ಥಿ ಕವಿ ಪಿ.ಬಿ.ಶ್ರೀಕಾಂತ ಒತ್ತಾಯಿಸಿದರು.ಇಲ್ಲಿನ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ 21ನೇ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ,
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕವಯತ್ರಿ ಹಂಸಿಕಾ.ಜೆ ಮಾತನಾಡಿ, ಶಾಲಾ ಹಂತದಲ್ಲಿ ನಮಗೆ ದೊರಕುತ್ತಿರುವ ಮಕ್ಕಳ ಸಮ್ಮೇಳನದಂತಹ ಅವಕಾಶಗಳಿಂದ, ನಮ್ಮೊಳಗೆ ಸಾಹಿತ್ಯ ಬಿತ್ತುವ ಕೆಲಸವಾಗುತ್ತಿದೆ. ಪರಿಣಾಮ ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದು, ಪುಸ್ತಕ ಪ್ರಕಟಿಸುವ ತಯಾರಿಯಲ್ಲಿದ್ದೇನೆ ಎಂದು ತಿಳಿಸಿದರು.
ಸಾಹಿತ್ಯ ಅಭಿರುಚಿಗೆ ಶಾಲಾ ಹಂತದಲ್ಲಿ ಕಾರ್ಯಾಗಾರ ನಡೆಯಬೇಕು. ಪಠ್ಯ ಪುಸ್ತಕಗಳಲ್ಲಿ, ಬಾಲ ಸಾಹಿತಿಗಳ ರಚನೆ ಸೇರ್ಪಡಯಾಗಬೇಕು. ನಮಗೆ ಕೃತಿ ಹೊರತರಲು ಸರ್ಕಾರ ವಿಶೇಷ ಧನಸಹಾಯ ನೀಡಬೇಕು. ಗ್ರಾಮ ಪಂಚಾಯಿತಿಗಳು ಬಾಲ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಬೇಕು. ಅತಿಥಿ ಶಿಕ್ಷಕರ ಬದಲಿಗೆ ಖಾಯಂ ಶಿಕ್ಷಕರನ್ನು ನೇಮಿಸಿ. ಕಡ್ಡಾಯವಾಗಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳಬೇಕು. ಮೆಡಿಕಲ್, ಎಂಜಿನಿಯರಿಂಗ್ ನಂತಹ ಕೋರ್ಸ್‌ಗಳನ್ನು ಕನ್ನಡದಲ್ಲಿ ಪುಸ್ತಕ ಅಧ್ಯಯನ ಮತ್ತು ಬೋಧನೆ ನಡೆಯಬೇಕು ಎಂದು ಹಕ್ಕೊತ್ತಾಯ ಮಾಡಿದರು.ದಿವ್ಯ ಸಾನ್ನಿದ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ನಾದಮಯಾನಂದನಾಥ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ.ಮಂಜುನಾಥ ಆಶಯ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಕವಿಗೋಷ್ಠಿ ಅಧ್ಯಕ್ಷರಾದ ರುಕ್ಮಿಣಿ.ಬಿ.ಎಲ್., ಕಥಾಗೋಷ್ಠಿ ಅಧ್ಯಕ್ಷರಾದ ಕವಿತಾ.ಸಿ., ಪ್ರಬಂಧ ಗೋಷ್ಠಿ ಅಧ್ಯಕ್ಷರಾದ ಸಾಹಿತ್ಯ.ಕೆ, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಭದ್ರಾವತಿಯ ಸುಧಾಮಣಿ ವೆಂಕಟೇಶ್, ಸೊರಬದ ಶಂಕರ್ ಶೇಟ್, ಸಾಗರದ ಸದಾನಂದ ಶರ್ಮ, ಶಿಕಾರಿಪುರದ ಕೆ.ಎಸ್.ಹುಚ್ಚರಾಯಪ್ಪ, ಎಸ್.ಎನ್.ನರಸಿಂಹಸ್ವಾಮಿ ಉಪಸ್ಥಿತರಿದ್ದರು.ಎಂ.ನವೀನ್ ಕುಮಾರ್ ಸ್ವಾಗತಿಸಿ, ಮಹಾದೇವಿ ನಿರೂಪಿಸಿ,ಪಿ.ಕೆ. ಸತೀಶ್ ವಂದಿಸಿದರು. ಇದೇ ವೇಳೆ ಸಹ್ಯಾದ್ರಿ ರಂಗತರಂಗ ತಂಡದಿಂದ ಕುವೆಂಪು ಬರೆದ ಬೊಮ್ಮನಹಳ್ಳಿ ಕಿಂದರಜೋಗಿ ನಾಟಕವನ್ನು ಪ್ರದರ್ಶಿಸಿದರು.
ಅರಳಿದ ಮಕ್ಕಳ ಕವಿಮನಎಸೆಯುತ್ತಿದ್ದಾರೆ ಕಸವನ್ನು..., ಕಳೆದುಕೊಳ್ಳುತ್ತೇವೆ ಉತ್ತಮ ಪರಿಸರವನ್ನು... ಎಂದು ಮಕ್ಕಳು ತಮ್ಮ ಕವನ ವಾಚಿಸುತ್ತಿದ್ದರೆ, ಇಡೀ ಸಭಾಂಗಣ ಮೌನದಿ ಕಾವ್ಯಪರವಶವಾಗಿತ್ತು. ನಮ್ಮ ಊರು, ಮೆಚ್ಚಿದ ಪುಸ್ತಕ, ದೇಶ, ನಾಡು, ನುಡಿ ಸೇರಿದಂತೆ ತಮ್ಮ ನಡುವೆ ಇರುವ ಅನೇಕ ವಾಸ್ತವ ಸಮಸ್ಯೆಗಳನ್ನು ತಮ್ಮ ಕವನದ ಮೂಲಕ ಕಟ್ಟಿಕೊಡುವಲ್ಲಿ ಮಕ್ಕಳು ಯಶಸ್ವಿಯಾಗಿದ್ದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಕಥೆ, ಕಾವ್ಯ, ಪ್ರಬಂಧ ಗೋಷ್ಠಿಗಳಲ್ಲಿ ಉತ್ಸುಕರಾಗಿ ಭಾಗವಹಿಸಿದ್ದರು. ಮೌಢ್ಯತೆ, ಸಾಮಾಜಿಕ ವ್ಯವಸ್ಥೆ, ಶ್ರಮಕ್ಕೆ ತಕ್ಕ ಫಲ ಎಂಬ ವಿಭಿನ್ನ ಸಾರಾಂಶ ಹೊಂದಿದ್ದ ಕಥೆಗಳನ್ನು ಮಕ್ಕಳು ವಾಚಿಸಿದರು.