ವಿಪ ಸ್ಥಾನ ವೀರಭದ್ರಪ್ಪಗೇ ಕೊಡಿ: ಮಂಜಪ್ಪ ಹಲಗೇರಿ

KannadaprabhaNewsNetwork |  
Published : Jul 15, 2025, 01:01 AM IST
14ಕೆಡಿವಿಜಿ1-ದಾವಣಗೆರೆಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ವಕೀಲ ಮಂಜಪ್ಪ ಹಲಗೇರಿ, ಎಲ್.ಎಂ.ಹನುಮಂತಪ್ಪ, ಹೆಗ್ಗೆರೆ ರಂಗಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವಿಧಾನ ಪರಿಷತ್‌ನ 3 ಸ್ಥಾನಗಳ ಪೈಕಿ 1 ಅನ್ನು ಮತ್ತೆ ಕಲಬುರಗಿ ಜಿಲ್ಲೆಯವರಿಗೇ ಕೊಡದೇ, ಮಾದಿಗ ಸಮಾಜ ಹಿರಿಯ, ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕ ಜಿಲ್ಲಾಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಅವರಿಗೆ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌, ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗೆ ಮಾದಿಗ ಸಮಾಜ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

- ದಾವಣಗೆರೆ ಸೇರಿ ಮಧ್ಯ ಕರ್ನಾಟಕ ಮಾದಿಗ ಜನಾಂಗಕ್ಕೆ ಸಿಗದ ಪ್ರಾತಿನಿಧ್ಯ: ಆರೋಪ । ಹೈ ಕಮಾಂಡ್‌ ಗಮನಿಸಲು ಆಗ್ರಹ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಧಾನ ಪರಿಷತ್‌ನ 3 ಸ್ಥಾನಗಳ ಪೈಕಿ 1 ಅನ್ನು ಮತ್ತೆ ಕಲಬುರಗಿ ಜಿಲ್ಲೆಯವರಿಗೇ ಕೊಡದೇ, ಮಾದಿಗ ಸಮಾಜ ಹಿರಿಯ, ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕ ಜಿಲ್ಲಾಧ್ಯಕ್ಷ ಬಿ.ಎಚ್‌. ವೀರಭದ್ರಪ್ಪ ಅವರಿಗೆ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌, ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗೆ ಮಾದಿಗ ಸಮಾಜ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸಮಾಜದ ಹಿರಿಯ ಮುಖಂಡ, ವಕೀಲ ಮಂಜಪ್ಪ ಹಲಗೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 45 ವರ್ಷಗಳಿಂದಲೂ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ, ಎಸ್‌ಸಿ ಘಟಕ ಜಿಲ್ಲಾಧ್ಯಕ್ಷನಾಗಿ ಬಿ.ಎಚ್. ವೀರಭದ್ರಪ್ಪ ಪಕ್ಷ ಸೇವೆ ಮಾಡಿದ್ದಾರೆ. ಇಂತಹ ಹಿರಿಯರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಬೇಕು ಎಂದರು.

ಇಂದಿರಾ ಗಾಂಧಿಗೆ ಜೈಲಿಗೆ ಹಾಕಿದ್ದಾಗ ದಾವಣಗೆರೆಯಲ್ಲಿ ಹೋರಾಟ ಮಾಡಿ, ಜೈಲು ಪಾಲಾದವರು ಬಿ.ಎಚ್. ವೀರಭದ್ರಪ್ಪ. ಮಾದಿಗರು ಕಾಂಗ್ರೆಸ್‌ಗೆ ನಿಷ್ಠವಾಗಿದ್ದರೂ ಇಂದಿಗೂ ದೊಡ್ಡ ಸ್ಥಾನಮಾನ, ಅವಕಾಶ ದಾವಣಗೆರೆಯಲ್ಲಿ ನೀಡಿಲ್ಲ. ಪಕ್ಷ ಸಂಘಟನೆಗೆ ಜೊತೆ ಸದಾ ಕಾಂಗ್ರೆಸ್ ಬೆನ್ನಿಗೆ ನಿಂತ ಸಮುದಾಯ ನಮ್ಮದು. ಜಿಪಂ, ಪಾಲಿಕೆ ಟಿಕೆಟ್ ಸಹ ಮಾದಿಗರಿಗೆ ಮರೀಚಿಕೆಯಾಗಿದೆ. ದೂಡಾ ಅಧ್ಯಕ್ಷ ಸ್ಥಾನವನ್ನೂ ನೀಡಲ್ಲ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಎಡಗೈ ಸಮುದಾಯಕ್ಕೆ ನೀಡಿಲ್ಲ. ಮನೆಯಲ್ಲಿ ನಿದ್ದೆ ಮಾಡಲು ಬಿಡದಂತೆ ಚುನಾವಣೆ ಕೆಲಸಕ್ಕೆ ಬಿ.ಎಚ್.ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ ಅವರಂತಹ ಸಮಾಜದ ಮುಖಂಡರನ್ನು ಕಾಂಗ್ರೆಸ್ ಬಳಸಿ, ಗೆದ್ದ ನಂತರ ಕೈ ಬಿಡುತ್ತಿರುವುದು ಸರಿಯಲ್ಲ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ನಮ್ಮದು. ರಾಜ್ಯದ ಬಹುಸಂಖ್ಯಾತ ಮಾದಿಗರ ಕಡೆಗಣನೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ದೊಡ್ಡ ತೊಡಕಾಗಬಹುದು. ಹೈಕಮಾಂಡ್ ಎಚ್ಚೆತ್ತುಕೊಳ್ಳಲಿ ಎಂದರು.

ವಿಪ 3 ಸ್ಥಾನಕ್ಕೆ ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಬಂದ ಸಾಗರ್‌ ಸೇರಿದಂತೆ ಮೂವರನ್ನು ಶಿಫಾರಸು ಮಾಡಿತ್ತು. ನಮ್ಮ ತೀವ್ರ ವಿರೋಧದಿಂದಾಗಿ ಎಐಸಿಸಿ ಮತ್ತೊಮ್ಮೆ ಪರಿಶೀಲಿಸುವಂತೆ ಕೆಪಿಸಿಸಿಗೆ ಸೂಚಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ತಮ್ಮ ಮಗ ಪ್ರಿಯಾಂಕ ಖರ್ಗೆ, ತಮಗೆ ಭವಿಷ್ಯದಲ್ಲಿ ತೊಡಕಾಗದಿರಲಿ ಎಂದು ಅದೇ ಜಿಲ್ಲೆಯ ಸಾಗರ್ ಎಂಬವರಿಗೆ ಎಂಎಲ್‌ಸಿ ಮಾಡಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವುದು ಒಳ್ಳೆಯದಲ್ಲ. ಖರ್ಗೆ ಅಳಿಯ ರಾಜ್ಯಸಭೆ ಸದಸ್ಯರಿದ್ದಾರೆ. ಎಲ್ಲವೂ ಖರ್ಗೆ ಕುಟುಂಬ, ಖರ್ಗೆ ಜಿಲ್ಲೆಯ ಬಲಗೈ ಸಮುದಾಯಕ್ಕೆ ಬೇಕೆಂದರೆ ನಾವು ಎಡಗೈ ಸಮುದಾಯದವರು ಏನು ಮಾಡಬೇಕು ಎಂದು ಕಿಡಿಕಾರಿದರು.

ಸಮಾಜದ ಮುಖಂಡರಾದ ಹೆಗ್ಗೆರೆ ರಂಗಪ್ಪ ಮಾತನಾಡಿದರು. ಆದಾಪುರ ನಾಗರಾಜ, ರಂಗಸ್ವಾಮಿ, ಎಂ.ಗುರುಮೂರ್ತಿ, ಜಿ.ರಾಕೇಶ ಗಾಂಧಿ ನಗರ, ಬಿ.ಆರ್.ಮಂಜುನಾಥ, ಚನ್ನಗಿರಿ ಶೇಖರಪ್ಪ, ಅಣಜಿ ಹನುಮಂತಪ್ಪ, ಬಿ.ಆರ್.ಶಿವಮೂರ್ತಿ, ಹೊನ್ನಾಳಿಯ ಕೊಡತಾಳ್ ರುದ್ರೇಶ ಇತರರು ಇದ್ದರು.

- - -

(ಬಾಕ್ಸ್‌) * ಮಾದಿಗರನ್ನು ಕೈಬಿಟ್ಟರೆ, ಕಾಂಗ್ರೆಸ್ಸಿಗೆ ಸಂಕಷ್ಟ ಹಿರಿಯ ಮುಖಂಡ ಎಲ್.ಎಂ. ಹನುಮಂತಪ್ಪ ಮಾತನಾಡಿ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಡಾ. ಜಿ.ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಡಾ. ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ಸಮುದಾಯದ ಎಲ್ಲ ಮುಖಂಡರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವರಿಷ್ಠರ ಬಳಿ ಬಿ.ಎಚ್. ವೀರಭದ್ರಪ್ಪ ಅವರಿಗೆ ಎಂಎಲ್‌ಸಿ ಮಾಡುವಂತೆ ಹೇಳಿದ್ದು, ನಮ್ಮ ಸಮದಾಯದ ಒತ್ತಾಯವೂ ಇದೆ ಎಂದರು. ಬಿ.ಎಚ್.ವೀರಭದ್ರಪ್ಪ ಅವರಿಗೆ ಎಂಎಲ್‌ಸಿ ಮಾಡದಿದ್ದರೆ, ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮುಂಬರುವ ದಿನಗಳಲ್ಲಿ ಸೂಕ್ತ ಬೆಲೆ ತೆರಬೇಕಾಗುತ್ತದೆ. ವಿ.ಪ.ಗೆ ಒಂದು ಸ್ಥಾನಕ್ಕೆ ಮಾದಿಗರಿಗೆ ನೇಮಿಸುವ ಅವಕಾಶ ಹೈಕಮಾಂಡ್ ಕೈಯಲ್ಲಿದೆ. ಮಾದಗರಿಗೆ ಒಂದು ಅವಕಾಶ ಕೊಟ್ಟು, ಕೈಯಲ್ಲಿಟ್ಟುಕೊಳ್ಳಿ. ಒಮ್ಮೆ ಮಾದಿಗರನ್ನು ಕೈಬಿಟ್ಟರೆ, ಕಾಂಗ್ರೆಸ್ಸಿಗೆ ಕಷ್ಟ ಎಂದು ಅವರು ಸೂಚ್ಯವಾಗಿ ಹೇಳಿದರು.

- - -

-14ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ವಕೀಲ ಮಂಜಪ್ಪ ಹಲಗೇರಿ, ಎಲ್.ಎಂ.ಹನುಮಂತಪ್ಪ, ಹೆಗ್ಗೆರೆ ರಂಗಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ