ಚಳ್ಳಕೆರೆ ತಾಲೂಕಿನ ಪಿ.ಗೌರೀಪುರ ಗ್ರಾಮದ ನೊಂದ ಕುಟುಂಬದ ಸದಸ್ಯರು ದಯಾಮರಣ ಕೋರಿ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಜಡೆಕುಂಟೆ ಮಂಜುನಾಥ್
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಜಮೀನಿಗೆ ಹೋಗಲು ದಾರಿ ಕೊಡಿಸಿ, ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ. ಚಳ್ಳಕರೆ ತಹಸೀಲ್ದಾರ್ ಹಾಗೂ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಇಂತಹದ್ದೊಂದು ಮನವಿ ಸಲ್ಲಿಕೆಯಾಗಿದೆ. ಪಿತ್ರಾರ್ಜಿತ ಜಮೀನಿಗೆ ಹೋಗಲು ದಾರಿ ಇಲ್ಲದೇ ಸುಮಾರು ವರ್ಷಗಳಿಂದ ನರಳಿರುವ ನೊಂದ ಕುಟುಂಬದ ಸದಸ್ಯರು ಅನೇಕ ವರ್ಷಗಳಿಂದ ಮನವಿ ಮಾಡುತ್ತಾ ಬಂದರೂ ಯಾವುದೇ ಪ್ರಯೋಜನ ಆಗಿಲ್ಲದ ಕಾರಣ ಜಿಲ್ಲಾಧಿಕಾರಿಗಳಿಗೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಪಿ.ಗೌರೀಪುರದ ಗ್ರಾಮಸ್ಥರಾದ ಮಹಾಲಿಂಗಪ್ಪ, ಭಾರತಿ, ಚಂದ್ರಮ್ಮ, ರಂಗನಾಥ್, ಶಿವಣ್ಣ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಕುಟುಂಬಸ್ಥರು ಸೇರಿದಂತೆ ಎಂಟು ಕುಟುಂಬಗಳು ತಮ್ಮ ಪಿತ್ರಾರ್ಜಿತ ಜಮೀನುಗಳಲ್ಲಿ ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡು ಜೀವಿಸುತ್ತಿದ್ದಾರೆ. ಪಕ್ಕದ ಜಮೀನಿನ ಶಿವಲಿಂಗಪ್ಪ ಎಂಬುವವರು ಓಡಾಡುವ ದಾರಿಗೆ ಕಳ್ಳೆ ಮುಳ್ಳಿನ ಬೇಲಿ ಹಾಕಿರುವುದರಿಂದ ಕುಡಿಯುವ ನೀರು ತರುವುದಕ್ಕೂ ಸಮಸ್ಯೆಯಾಗಿದೆ. ಇದನ್ನು ಕೇಳಲು ಹೋದರೆ ದೌರ್ಜನ್ಯ ಎಸಗಲು ಬರುತ್ತಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ತಾಲೂಕು, ಜಿಲ್ಲಾಡಳಿತಕ್ಕೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ನಾವು ನ್ಯಾಯಕ್ಕಾಗಿ ಅಲೆದಾಡುವುದು ತಪ್ಪಿಲ್ಲ. ನಮಗೆ ಹೋರಾಟ ಮಾಡಿ ಸಾಕಾಗಿ ಹೋಗಿದೆ. ಆದ್ದರಿಂದ ದಯಾಮರಣಕ್ಕೆ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ. ನಕಾಶೆಯಲ್ಲಿರುವ ಬಂಡಿದಾರಿಗೆ ಅಡ್ಡಲಾಗಿ ಬೇಲಿ ಹಾಕಿರುವವರ ವಿರುದ್ಧ ಕ್ರಮಕೈಗೊಳ್ಳದೇ ಕಾಲಹರಣ ಹಾಗೂ ನ್ಯಾಯ ಕೊಡಿಸಲು ಉದಾಸೀನತೆ ತೊರಲಾಗುತ್ತಿದೆ ಎಂಬುದು ನೊಂದ ಕುಟುಂಬಸ್ಥರ ಆರೋಪ. ಅಧಿಕಾರಿಗಳ ವಿಳಂಬ ಧೋರಣೆಗೆ ಅವರ ಮನದಲ್ಲಿ ಅಸಮಾಧಾನ ಮಡುಗಟ್ಟಿದೆ.
2022ರಲ್ಲಿಯೇ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ನ್ಯಾಯ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವ ಕುಟುಂಬಸ್ಥರಿಗೆ ಪಕ್ಕದ ಜಮೀನು ಮಾಲೀಕರಿಂದ ತುಂಬಾ ಅವಮಾನ ಮತ್ತು ದೌರ್ಜನ್ಯದ ಮಾತುಗಳಿಗೆ ಒಳಗಾಗಿದ್ದೇವೆ. ನ್ಯಾಯ ಸಿಗದಿದ್ದರೆ ನಮಗೆ ಸಾವೊಂದೇ ಪರಿಹಾರ ಎಂದು ನೊಂದು ನುಡಿದರು.
ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ತಹಶೀಲ್ದಾರ್ ಅವರಿಗೆ ಪತ್ರವೂ ಹೋಗಿದೆ. ಪತ್ರ ಬರೆದಿದ್ದರೂ ಬಗೆಹರಿಸಬೇಕಾದವರಿಂದ ಸಮಸ್ಯೆ ಬಗೆಹರಿದಿಲ್ಲ. ಇದುವರೆಗೂ ನಮಗೆ ನ್ಯಾಯ ಸಿಕ್ಕಿಲ್ಲದಿರುವುದು ವಿಪರ್ಯಾಸ ಎಂದು ಬೇಸರಿಸಿದ್ದಾರೆ.
ಜಮೀನಿಗೆ ದಾರಿ ಬಿಡುತ್ತಿಲ್ಲ ಎಂದು ಆರೋಪಿಸುವವರು ಮತ್ತು ದಾರಿ ಬಿಡದವರು ಎಲ್ಲರೂ ಅಣ್ಣತಮ್ಮಂದಿರು. ಇವರು ಪಾಲು ವಿಭಾಗ ಮಾಡಿಕೊಂಡಿಲ್ಲ. ಅಣ್ಣತಮ್ಮಂದಿರು ಮೂವರು ತಲಾ ಎರಡು ಎಕರೆ ಜಮೀನು ಹಂಚಿಕೊಂಡು ಜೀವಿಸುತ್ತಿದ್ದಾರೆ. ನಕಾಶೆಯಲ್ಲಿ ದಾರಿ ಇರುವ ಕಡೆ ಫಸಲಿಗೆ ಬಂದಿರುವ ಅಡಕೆ ಗಿಡಗಳು ಇವೆ. ಇದೇ ಜಮೀನಿನ ಬೇರೆ ಕಡೆ ದಾರಿ ಬಿಡಲಾಗಿದೆ. ಆದರೆ, ಅಡಕೆ ಗಿಡಗಳು ಇರುವ ಕಡೆ ದಾರಿ ಬಿಡಬೇಕು ಎಂದು ಇವರು ಹಠ ಮಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನಿಸಲಾಗಿದೆ. 23ರಂದು ಗುರುವಾರ ತಾಲೂಕು ಕಚೇರಿಗೆ ಕರೆಸಲಾಗುವುದು. ಕೆಲವು ಗ್ರಾಮಸ್ಥರು ಬರುತ್ತಾರೆ. ಸಮಸ್ಯೆ ಬಗೆಹರಿಸಲಾಗುವುದು. ಮಾನವೀಯ ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಲಾಗುವುದು. ಇದಕ್ಕೂ ಒಪ್ಪದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳೂ ಕೂಡ ಈ ಕುರಿತು ಹೇಳಿದ್ದಾರೆ. ಇದರಲ್ಲಿ ಅಧಿಕಾರಿಗಳ ಉದಾಸೀನತೆ ಮತ್ತು ವಿಳಂಬ ಧೋರಣೆ ಆರೋಪ ಸುಳ್ಳು. 15ವರ್ಷದ ಅಡಕೆ ಗಿಡಗಳನ್ನು ಕಡಿದು ಇವರಿಗೆ ದಾರಿ ಮಾಡಿಸಿಕೊಳ್ಳಬೇಕು ಎಂಬ ಧೋರಣೆ. ಆ ಕಡೆಯವರು ಬೇರೆಡೆ ಅಂದರೆ ಸಮೀಪದಲ್ಲೇ ದಾರಿ ಬಿಟ್ಟರೂ ಬೇಡ ಎನ್ನುತ್ತಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.