ಸರ್ಫೇಸಿ ಕಾಯ್ದೆ ಕುರಿತು ದಿನಕ್ಕೊಂದು ಸುಳ್ಳು: ಆಕ್ರೋಶ

KannadaprabhaNewsNetwork |  
Published : Apr 23, 2026, 01:15 AM IST
ಎ | Kannada Prabha

ಸಾರಾಂಶ

ಚಿಕ್ಕಮಗಳೂರು ಸರ್ಫೇಸಿ ಕಾಯ್ದೆ ಕುರಿತು ಬಿಜೆಪಿ ನಾಯಕರು ಹಾಗೂ ಚಿಕ್ಕಮಗಳೂರು ಉಡುಪಿ ಸಂಸದರು ದಿನಕ್ಕೊಂದು ಸುಳ್ಳು ಹೇಳು ವುದನ್ನು ಖಂಡಿಸಿ ರೈತ ಸಂಘಟನೆ ಪದಾಧಿಕಾರಿಗಳು ಮತ್ತು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಆವರಣದಲ್ಲಿರುವ ಸಂಸದರ ಕಚೇರಿವರೆಗೆ ಮೆರವಣಿಗೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸರ್ಫೇಸಿ ಕಾಯ್ದೆ ಕುರಿತು ಬಿಜೆಪಿ ನಾಯಕರು ಹಾಗೂ ಚಿಕ್ಕಮಗಳೂರು ಉಡುಪಿ ಸಂಸದರು ದಿನಕ್ಕೊಂದು ಸುಳ್ಳು ಹೇಳು ವುದನ್ನು ಖಂಡಿಸಿ ರೈತ ಸಂಘಟನೆ ಪದಾಧಿಕಾರಿಗಳು ಮತ್ತು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾ ಕಾಫಿ ಬೆಳೆಗಾರರ ಸಂಘ, ಜಿಲ್ಲಾ ಸಣ್ಣ ಬೆಳೆಗಾರರ ಸಂಘ, ಬೆಳೆಗಾರರ ಹಿತ ರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರಸಭೆ ಆವರಣದಲ್ಲಿರುವ ಸಂಸದರ ಕಚೇರಿವರೆಗೆ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಸಂಸದರ ವಿರುದ್ಧ ಘೋಷಣೆ ಕೂಗಿದರು. ಅಂತಿಮವಾಗಿ ಸಂಸದರ ಕಚೇರಿ ಎದುರಿಗೆ ಧರಣಿ ನಡೆಸಿದರು.

ಈ ವೇಳೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಕುಮಾರ್, ಜನಪ್ರತಿನಿಧಿ ಗಳು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸರ್ಫೇಸಿ ವಿಚಾರವಾಗಿ ರಾಜಕಾರಣಿಗಳ ಸುಳ್ಳು ಹೇಳುವುದರಲ್ಲಿಯೇ ಕಾಲ ಹರಣ ಮಾಡುತ್ತಿದ್ದಾರೆ. ಸಂಸದರು ಸರ್ಫೇಸಿ ಕುರಿತು ಒಂದೇ ಒಂದು ದಿನವೂ ಸತ್ಯ ಹೇಳಿಲ್ಲ. ಈ ಹಿನ್ನಲೆ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ. ಸಂಸದರು ತಮ್ಮ ಕೈಯಲ್ಲಿ ಆಗುತ್ತದೆಯೋ, ಇಲ್ಲವೋ ಎಂಬುದನ್ನು ಬಹಿರಂಗವಾಗಿ ಹೇಳಿದರೆ ಬೇರೆ ದಾರಿ ಹುಡುಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರೈತರ ಪರವಾಗಿಲ್ಲ, ಬಂಡವಾಳ ಶಾಹಿಗಳ ಪರವಾಗಿದೆ ಎಂಬುದು ಬಹಳ ಹಿಂದೆಯೇ ಸಾಭೀತಾಗಿದೆ. ಹಿಂದಿನ ಸಂಸದರೂ ಸಹ ಇದೇ ಸುಳ್ಳು ಹೇಳಿಕೊಂಡು ಬಂದಿದ್ದರು. ಈಗಲೂ ಅದು ಮುಂದುವರಿದಿದೆ ಎಂದರು.

ಇತ್ತೀಚೆಗೆ ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದಲ್ಲಿ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಜತೆ ಸಭೆ ನಡೆಸಿದ ವೇಳೆ ಬೆಳೆಗಾರರ ಜಮೀನು ಹರಾಜು ಮಾಡದಂತೆ ಸೂಚನೆ ನೀಡಿದ್ದರು. ಆದರೂ ಸಹ ಬೆಳೆ ಗಾರರಿಗೆ ನೋಟಿಸ್ ಬರುವುದು ತಪ್ಪಿಲ್ಲ.

ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡುವ ಸರ್ಕಾರ ರೈತರ ಜಮೀನು ಹರಾಜು ಹಾಕುವುದನ್ನು ತಪ್ಪಿಸಲು ಸಾಧ್ಯ ವಾಗದಿರುವುದು ನಾಚೀಕೆಗೇಡಿನ ಸಂಗತಿ ಎಂದರು.

ಕೇರಳ ಮತ್ತು ತಮಿಳುನಾಡಿನಲ್ಲಿ ಕಾಫಿಯನ್ನು ಕೃಷಿ ವ್ಯಾಪ್ತಿಗೆ ತರಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಇದು ಏಕೆ ಸಾಧ್ಯ ವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕಾಫಿಯನ್ನು ಕೈಗಾರಿಕಾ ವ್ಯಾಪ್ತಿಯಿಂದ ಕೃಷಿ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಉತ್ತಮ್ ಗೌಡ ಮಾತನಾಡಿ, ಸರ್ಫೇಸಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು. ಇಲ್ಲ ಕಾನೂನು ಹೋರಾಟಕ್ಕೆ ಮುಂದಾಗಬೇಕು. ಕೆನರಾ ಬ್ಯಾಂಕ್ ರೈತರ ಮೇಲೆ ವಿಪರೀತ ದಬ್ಬಾಳಿಕೆ ಮಾಡುತ್ತಿದೆ. ಇದಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಕೆನರಾ ಬ್ಯಾಂಕ್ ನಲ್ಲಿರುವ ಎಫ್ ಡಿಯನ್ನು ಬೇರೆ ಬ್ಯಾಂಕ್ ಗಳಿಗೆ ವರ್ಗಾಯಿಸುವ ಮೂಲಕ ಪೆಟ್ಟು ನೀಡಬೇಕು. ಬೆಳೆಗಾರರಿಗೆ ಬಾರಿ ಪ್ರಮಾಣದಲ್ಲಿ ಹೊಡೆತ ಬಿದ್ದರು ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟ ಸಂಗತಿ ಎಂದರು.

ಸರ್ಫೇಸಿ ಕಾಯಿದೆಯನ್ನು ಹಗುರವಾಗಿ ತೆಗೆದುಕೊಳ್ಳುವುದು ಬೇಡಿ, ಬೆಳೆಗಾರರು ಬೀದಿಗಿಳಿದು ಪ್ರತಿಭಟಿಸಿದರೆ ಮರ್ಯಾದೆ ಹೋಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡು ಮುಂದಿನ ದಿನಗಳಲ್ಲಿ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ`ಅಧ್ಯಕ್ಷ ಮಹೇಶ್ ಮಾತನಾಡಿ, ಬೆಳೆಗಾರರ ಕುಟುಂಬ ಬೀದಿಗೆ ಬಂದರೂ ರೈತರ ಜತೆ ಹೋರಾಟಕ್ಕೆ ಮುಂದಾಗದಿರುವುದು ಬೇಸರದ ಸಂಗತಿ. ರೈತರು ಹಾಗೂ ಬೆಳೆಗಾರರು ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಸಹ ಸಂಸದರು ಸಂಸತ್‌ನಲ್ಲಿ ಈ ವಿಚಾರ ಪ್ರಸ್ತಾಪ ಮಾಡದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಹೋರಾಟಗಾರ ಎಚ್.ಎಚ್ ದೇವರಾಜ್, ಸಾಮಾಜಿಕ ಹೋರಾಟಗಾರ್ತಿ ರಾಧಾ ಸುಂದರೇಶ್, ರೈತ ಮುಖಂಡ ಗುರು ಶಾಂತಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಹೊಲದಗದ್ದೆ ಗಿರೀಶ್, ವನಶ್ರೀ ಲಕ್ಷ್ಮಣಗೌಡ, ರತೀಶ್ ಕುಮಾರ್, ಟಿ.ಡಿ. ಮಲ್ಲೇಶ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಇಟಿ: ನಗರದ 8 ಕೇಂದ್ರಗಳಲ್ಲಿ ಇಂದು ಪರೀಕ್ಷೆ
ಸೊಸೈಟಿ ಅಧ್ಯಕ್ಷರಾಗಿ ಸಚ್ಚಿದಾನಂದ ಮೂರ್ತಿ