ಅರಸಿನಕೇರಿ ಗ್ರಾಮಸ್ಥರ ಆಕ್ರೋಶ
ನಮ್ಮ ಭೂಮಿ, ನಮ್ಮ ನೆಲ, ನಮ್ಮೂರು ನಾವು ಬಿಟ್ಟುಕೊಡುವುದಿಲ್ಲ ಕನ್ನಡಪ್ರಭ ವಾರ್ತೆ ಕೊಪ್ಪಳ
ನಾವು ತಲೆತಲಾಂತರಗಳಿಂದ ಇಲ್ಲಿಯೇ ಬದುಕುತ್ತಿದ್ದೇವೆ. ಕರಡಿ ದಾಳಿ ಸಹಿಸಿಕೊಂಡು, ನಮ್ಮ ಹೊಲಗಳನ್ನು ಸಂರಕ್ಷಣೆ ಮಾಡಿಕೊಂಡು ಉಳುಮೆ ಮಾಡಿಕೊಂಡಿದ್ದೇವೆ. ಹೀಗಾಗಿ, ನಾವು ಇಲ್ಲಿ ಯಾವುದೇ ಕಾರಣಕ್ಕೂ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯಾಗಲು ಬಿಡುವುದಿಲ್ಲ. ಇದಕ್ಕಾಗಿ ಪ್ರಾಣತ್ಯಾಗ, ಹೋರಾಟಕ್ಕೂ ನಾವು ಸಿದ್ಧ.ಇದು, ಅರಸಿನಕೇರಿ ಗ್ರಾಮದ ಬಳಿ ತಲೆ ಎತ್ತಲಿದೆ ಎನ್ನಲಾಗಿರುವ ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಗ್ರಾಮ ದೇವತೆಯ ಕಟ್ಟೆಯ ಮೇಲೆ ಬುಧವಾರ ನೂರಾರು ಮಹಿಳೆಯರು ಸೇರಿದಂತೆ ಗ್ರಾಮದ ಜನರೆಲ್ಲ ಸಭೆ ಸೇರಿ ಒಮ್ಮತದಿಂದ ಮಾಡಿದ ತೀರ್ಮಾನ. ಆಕ್ರೋಶದ ನುಡಿ.
ನಿನ್ನೆಯಿಂದ ನಮಗೆ ನಿದ್ರೆ ಬರುತ್ತಿಲ್ಲ. ನಮ್ಮೂರ ಬಳಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಗೊತ್ತಾಗುತ್ತಿದ್ದಂತೆ ತಕ್ಷಣ ಬೇಡ ಎಂದು ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಸರ್ವೆ ಮಾಡುವುದಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದೇವೆ. ನಾವು ಎಲ್ಲಿಗೂ ಹೋಗಲು ಸಿದ್ಧರಿಲ್ಲ. ನಮ್ಮೂರ ಬಳಿ ಇಂಥದ್ದೊದು ವಿದ್ಯುತ್ ಸ್ಥಾವರ ಸ್ಥಾಪನೆಯಾಗುವುದಕ್ಕೆ ನಾವು ಬಿಡುವುದಿಲ್ಲ ಎಂದು ಗ್ರಾಪಂ ಮಾಜಿ ಸದಸ್ಯ ತಿಮ್ಮಣ್ಣ ನೋವಿನಿಂದ ಹೇಳಿದರು.
ಅರಣ್ಯ ಭೂಮಿಯನ್ನು ಸುಮಾರು 40-50 ವರ್ಷಗಳಿಂದ ರೈತರು ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಲ್ಯಾಂಡ್ ಟ್ರಿಬ್ಯುನಲ್ ನಲ್ಲಿ ಮಂಜೂರಾದ ಭೂಮಿ ಉಳುಮೆ ಮಾಡಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ಪಹಣಿಯೂ ಇವೆ. ಆದರೂ ಇದುವರೆಗೂ ಅದನ್ನು ಕಾನೂನು ಪ್ರಕಾರ ಪೂರ್ಣಪ್ರಮಾಣದಲ್ಲಿ ಅನುಭವಿಸಿಲು, ಬ್ಯಾಂಕ್ ಸಾಲ ಮಾಡಿಕೊಳ್ಳಲು ಅವಕಾಶ ಇಲ್ಲದಂತಾಗಿದೆ. ಈ ಕುರಿತು ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಈಗ ಮತ್ತೊಂದು ಸಂಕಟ ಎದುರಾಗಿದೆ ಎಂದು ಹೇಳಿದರು.
ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ಆತಂಕದ ವಿಷಯವಾಗಿದೆ. ಜನವಸತಿ ಪ್ರದೇಶದಲ್ಲಿ ಹಾಗೂ ವನ್ಯಜೀವಿ ವಾಸಿಸುವ ಪ್ರದೇಶದಲ್ಲಿ ಪರಮಾಣು ವಿದ್ಯತ್ ಸ್ಥಾವರ ಸ್ಥಾಪನೆ ಮಾಡುವುದು ಅವೈಜ್ಞಾನಿಕವಾಗಿದೆ. ಇದನ್ನು ಸಹಿಸಿಕೊಂಡು ಇರಲು ಸಾಧ್ಯವೇ ಇಲ್ಲ ಎಂದರು.