ಗದಗ: ಸಾರ್ವಜನಿಕರು ಬಸ್ ನಿಲ್ದಾಣದ ಸ್ವಚ್ಛತೆ, ನಿರ್ವಹಣೆ ಕುರಿತು ಅಭಿಪ್ರಾಯ ನೀಡಿ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಡಿ.ಎಂ. ದೇವರಾಜ ಹೇಳಿದರು.ನಗರದ ಹೊಸ ಬಸ್ ನಿಲ್ದಾಣದಲ್ಲಿ ಗದಗ ವಿಭಾಗದ ಎಲ್ಲ ತಾಲೂಕು ಕೇಂದ್ರ ಬಸ್ ನಿಲ್ದಾಣಗಳಲ್ಲಿ ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ ಶೀರ್ಷಿಕೆಯಡಿಯಲ್ಲಿ ಬಸ್ ನಿಲ್ದಾಣದ ನಿರ್ವಹಣೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಕ್ಯೂಆರ್ ಕೋಡ ಮುದ್ರಿತ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಾರ್ವಜನಿಕ ಪ್ರಯಾಣಿಕರು ಮೊಬೈಲ್‌ನಿಂದ (ಕ್ಯೂ ಆರ್) ಕೋಡ್ ನ್ನು ಸ್ಕ್ಯಾನ್ ಮಾಡಿ ಶೌಚಾಲಯದ ಸ್ವಚ್ಛತೆ, ಬಸ್ ನಿಲ್ದಾಣದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ, ಶೌಚಾಲಯ/ಮೂತ್ರಾಲಯದ ಬಳಕೆಯ ಶುಲ್ಕದ ಕುರಿತು ರೇಟಿಂಗ್ಸ್ ನೀಡುವದು. ಇತರೆ ಅನಿಸಿಕೆ ಅಥವಾ ಅಭಿಪ್ರಾಯವನ್ನು ದಾಖಲಿಸುವದು. ಒಟ್ಟಾರೆ ಶ್ರೇಣಿಯನ್ನು ನೀಡುವದು. ಇದರಿಂದಾಗಿ ಬಸ್ ನಿಲ್ದಾಣದ ಸ್ವಚ್ಛತೆ ನಿರ್ವಹಿಸಲು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಿಂದ ವರ್ತಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ, ಸಿ.ವಿ.ಇಟಗಿ, ವಿದ್ಯಾ ಕಾಂಬಳೆ, ಬಿ.ಎಲ್.ಗೆಣ್ಣೂರ ಹಾಗೂ ಸಾರಿಗೆ ನಿಯಂತ್ರಕರು, ಸಾರ್ವಜನಿಕ ಪ್ರಯಾಣಿಕರು ಇದ್ದರು.