ಅಧಿಕಾರ ದಾಹ ಬೀಡಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ

KannadaprabhaNewsNetwork |  
Published : Jun 03, 2025, 12:16 AM IST
2ಕೆಕೆಆರ್3:ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಪಂ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ಜರುಗಿತು.  | Kannada Prabha

ಸಾರಾಂಶ

ಯಲಬುರ್ಗಾದ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ನೀವು ಅಧ್ಯಕ್ಷರಾಗಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರ್ಡ್‌ಗಳ ಅಭಿವೃದ್ಧಿಗೆ ಚಿಂತಿಸಿಲ್ಲ. ಪಟ್ಟಣದ ೧೫ ವಾರ್ಡ್‌ಗಳಲ್ಲಿ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದರು ಪರಿಹರಿಸುವಲ್ಲಿ ವಿಫಲರಾಗಿದ್ದೀರಿ ಎಂದು ಕಿಡಿಕಾರಿದರು.

ಕೊಪ್ಪಳ(ಯಲಬುರ್ಗಾ):

ಕಾಮಗಾರಿ, ಅಭಿವೃದ್ಧಿ ಕಾರ್ಯಗಳ ಚರ್ಚೆಯಾಗಬೇಕಿದ್ದ ಯಲಬುರ್ಗಾ ಪಟ್ಟಣ ಪಂಚಾಯಿತಿ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷರ ಹಾಗೂ ಸದಸ್ಯರ ನಡುವಿನ ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಅಧ್ಯಕ್ಷ ಅಂದಯ್ಯ ಕಳ್ಳಿಮಠ ರಾಜೀನಾಮೇಯನ್ನು ಸದಸ್ಯರು ಕೇಳಿದರೆ, ನಾನೇಕೇ ರಾಜೀನಾಮೆ ನೀಡಬೇಕೆಂದು ಕಳ್ಳಿಮಠ ತಿರುಗೇಟು ನೀಡಿದರು.

ಯಲಬುರ್ಗಾದ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ನೀವು ಅಧ್ಯಕ್ಷರಾಗಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರ್ಡ್‌ಗಳ ಅಭಿವೃದ್ಧಿಗೆ ಚಿಂತಿಸಿಲ್ಲ. ಪಟ್ಟಣದ ೧೫ ವಾರ್ಡ್‌ಗಳಲ್ಲಿ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿದೀಪಗಳ ನಿರ್ವಹಣೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದರು ಪರಿಹರಿಸುವಲ್ಲಿ ವಿಫಲರಾಗಿದ್ದೀರಿ. ನೀವು ಪ್ರತಿನಿಧಿಸುವ 2ನೇ ವಾರ್ಡ್‌ ಸಹ ಸಮಸ್ಯೆಗಳಿಂದ ಕೂಡಿದೆ. ಅಭಿವೃದ್ಧಿ ದೃಷ್ಟಿಕೋನವಿಲ್ಲದೆ ಅಧಿಕಾರಕ್ಕೆ ಅಂಟಿಕೊಂಡಿದ್ದೀರಿ. ಪಟ್ಟಣದ ಅಭಿವೃದ್ಧಿಗೆ ನಿಮಗೆ ಬೇಕಿಲ್ಲ. ಹೀಗಾಗಿ ರಾಜೀನಾಮೆ ನೀಡಬೇಕೆಂದು ಎಲ್ಲ ಒಕ್ಕೂರಲಿನಿಂದ ಆಗ್ರಹಿಸಿದರು.

ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ಹಾಲಿ ಅಧ್ಯಕ್ಷರ ನೇತೃತ್ವದಲ್ಲಿ ಒಂದು ಸಭೆ ನಡೆದಿದೆ. 2 ಸಭೆ ಕೋರಂ ಕೊರತೆಯಿಂದ ರದ್ದಾಗಿದೆ ಎಂದರು. ಆಗ ಸದಸ್ಯ ರಿಯಾಜ್‌ ಖಾಜಿ, ಅಧ್ಯಕ್ಷರೇ ಸಭೆಗೆ ಹಾಜರಾಗಿಲ್ಲವೆಂದು ನಾಲ್ವರಿಗೆ ನೋಟಿಸ್‌ ನೀಡಿದ್ದೀರಿ ಎಂದು ಮುಖ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ೨೦ ವರ್ಷ ರಾಜಕೀಯ ಅನುಭವವಿದ್ದು ಅಧಿಕಾರಕ್ಕಾಗಿ ಸದಸ್ಯರ ವಿರುದ್ಧವೇ ಸುಳ್ಳು ಆರೋಪ ಮಾಡುವುದು ಯಾವ ನ್ಯಾಯ ಎನ್ನುತ್ತಿದ್ದಂತೆ ಬಿಜೆಪಿ ಸದಸ್ಯ ಅಮರೇಶ ಹುಬ್ಬಳ್ಳಿ ಕೂಡಲೇ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲವರ ಅಣತಿಯಂತೆ ಆಡಳಿತ ಮಾಡುತ್ತಿದ್ದಾರೆಂದು ಆರೋಪಿಸಿದರು.

ಅಧ್ಯಕ್ಷ ಅಂದಯ್ಯ ಕಳ್ಳಿಮಠ ಮಾತನಾಡಿ, ನನ್ನ ವಿರುದ್ಧ ಅವಿಶ್ವಾಸ ಮಂಡಿಸುವ ಮೊದಲು ನನ್ನನ್ನು ಸಂಪರ್ಕಿಸಬೇಕಿತ್ತು. ಅದನ್ನು ಮಾಡಿಲ್ಲ. ಹೀಗಾಗಿ ನನಗೆ ಸದಸ್ಯರ ಮೇಲೆ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದಂತೆ, ಸದಸ್ಯ ವಸಂತ ಬಾವಿಮನಿ, ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಲು ಮತ ಹಾಕಿದ್ದೇವೆ. ಸದಸ್ಯರ ಬಗ್ಗೆ ಅಪನಂಬಿಕೆ ನಿಮ್ಮಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣ ಅಭಿವೃದ್ಧಿಗಾಗಿಯಾದರೂ ಯಾವು ರಾಜೀನಾಮೆ ನೀಡಲೇಬೇಕು. ಇಲ್ಲದಿದ್ದರೇ ನಾವೇ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಸಿದರು. ಆಗ ಅಧ್ಯಕ್ಷರು-ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ನಡುವೆ ಮುಖ್ಯಾಧಿಕಾರಿ ನಾಗೇಶ ಅವರು ಸಭೆಯಲ್ಲಿ ೧೬ ವಿವಿಧ ವಿಷಯಗಳಿಗೆ ಅನುಮೋದನೆ ಪಡೆದುಕೊಂಡರು. ಶಿಕ್ಷಣ ಇಲಾಖೆಗೆ ನಿವೇಶನ ಹಾಗೂ ಬಣಜಿಗ ಸಮುದಾಯ ಭವನಕ್ಕೆ ನಿವೇಶನವನ್ನು ಪಟ್ಟಣದ ಪಶ್ಚಿಮ ಭಾಗದಲ್ಲಿರುವ ೨,೩,೪,೫ ಖಾಲಿ ಇರುವ ಜಾಗೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡರು.

ಉಪಾಧ್ಯಕ್ಷ ವಿಜಯಲಕ್ಷಿ ಬೆಲೇರಿ, ಸದಸ್ಯರಾದ ಶಾಂತಾ ಮಾಟೂರು, ಕಲಾವತಿ ಮರದಡ್ಡಿ, ಶ್ರೀದೇವಿ ಗುರುವಿನ್, ಬಸಮ್ಮ ಬಣಕಾರ, ಅಶೋಕ ಅರಕೇರಿ, ಕಳಕಪ್ಪ ತಳವಾರ, ಹಾಗೂ ೩ ಜನ ನಾಮನಿರ್ದೇಶಿತ ಸದಸ್ಯರು ಇದ್ದರು.ಮೂರನೇ ಬಾರಿ ಅವಿಶ್ವಾಸ

ಪಪಂ ಅಧ್ಯಕ್ಷರ ವಿರುದ್ಧ ಸೋಮವಾರ ಸಭೆಯಲ್ಲಿ ೧೪ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಾಡುವಂತೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಈಗಾಗಲೇ 2 ಭಾರೀ ಅವಿಶ್ವಾಸ ಮಾಡಿದ್ದು ಅವುಗಳಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವಲ್ಲಿ ಅಧ್ಯಕ್ಷರು ಯಶಸ್ವಿಯಾಗಿದ್ದರು. ಈ ಸಲ ಮತ್ತೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆನನ್ನ ವಿರುದ್ಧದ ಅವಿಶ್ವಾಸ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸದು. ನಾನು ₹1 ಹಗರಣ ಮಾಡಿಲ್ಲ. ಆದರೂ ಸದಸ್ಯರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೈಕಮಾಂಡ್‌ ಹೇಳಿದರೂ ಸದಸ್ಯರು ಮಾತು ಕೇಳುತ್ತಿಲ್ಲ.

ಅಂದಯ್ಯ ಕಳ್ಳಿಮಠ ಪಪಂ ಅಧ್ಯಕ್ಷ, ಯಲಬುರ್ಗಾ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...