ಕೌದಿ ಕಲೆಗೆ ಕಲಾಕೃತಿಗಳ ಮೂಲಕ ಹೊಸ ಸ್ಪರ್ಶ

KannadaprabhaNewsNetwork |  
Published : Nov 18, 2026, 02:30 AM IST
ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿಯಲ್ಲಿ ಸವಿತಾ ಆನಂದ ಬೆಣಗಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ವಿಪ ಸದಸ್ಯ ಲಿಂಗರಾಜ ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಕೌದಿ ಕಲೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂತಹ ಸಾಂಪ್ರದಾಯಿಕ ಕಲೆಯನ್ನು ಚಿತ್ರಕಲೆಯ ಮೂಲಕ ದೇಶಕ್ಕೆ ಪರಿಚಯಿಸುತ್ತಿರುವ ಸವಿತಾ ಆನಂದ ಬೆಣಗಿ ಅವರ ಪ್ರಯತ್ನ ಶ್ಲಾಘನೀಯ.

ಹುಬ್ಬಳ್ಳಿ:

ಕೌದಿ ಕಲೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇಂತಹ ಸಾಂಪ್ರದಾಯಿಕ ಕಲೆಯನ್ನು ಚಿತ್ರಕಲೆಯ ಮೂಲಕ ದೇಶಕ್ಕೆ ಪರಿಚಯಿಸುತ್ತಿರುವ ಸವಿತಾ ಆನಂದ ಬೆಣಗಿ ಅವರ ಪ್ರಯತ್ನ ಶ್ಲಾಘನೀಯ ಎಂದು ವಿಪ ಸದಸ್ಯ ಲಿಂಗರಾಜ ಪಾಟೀಲ ಹೇಳಿದರು.

ಇಲ್ಲಿನ ವಿದ್ಯಾನಗರದಲ್ಲಿರುವ ಡಾ. ಎಂ.ವಿ. ಮಿಣಜಗಿ ಆರ್ಟ್ ಗ್ಯಾಲರಿಯಲ್ಲಿ ಸವಿತಾ ಆನಂದ ಬೆಣಗಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಕೌದಿ ಕಲಾಕೃತಿಗಳನ್ನು ನೋಡಿದಾಗ ಬಾಲ್ಯದ ನೆನಪುಗಳು ಮರುಕಳಿಸಿದವು. ಕೌದಿ ಕೇವಲ ಬಟ್ಟೆಯಲ್ಲ, ಅದು ನಮ್ಮ ಸಂಸ್ಕೃತಿ, ಜೀವನಶೈಲಿ ಹಾಗೂ ಪರಂಪರೆಯ ಪ್ರತೀಕ. ಇಂತಹ ಕಲೆಯನ್ನು ಚಿತ್ರಕಲೆಯ ಮೂಲಕ ಜೀವಂತವಾಗಿಡುವ ಜತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು, ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಶಾಲಾ ಹಂತದಲ್ಲಿಯೇ ಪಠ್ಯದ ಜತೆಗೆ ಸಂಗೀತ, ಚಿತ್ರಕಲೆ ಸೇರಿದಂತೆ ಜಾನಪದ ಕಲೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು. ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಕ್ಕೂ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ತಮ್ಮ ಸಹಕಾರವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಗೇಟಿ ಮಾತನಾಡಿ, ಕೌದಿ ಕೇವಲ ಹೊದಿಕೆಯಲ್ಲ, ಅದು ಕುಟುಂಬದ ಬಾಂಧವ್ಯ, ಪ್ರೀತಿ, ಸಹಬಾಳ್ವೆ ಮತ್ತು ಜೀವನ ಪರಂಪರೆಯನ್ನು ಬಿಂಬಿಸುವ ಕಲೆಯಾಗಿದೆ. ಕೌದಿಯ ಪ್ರತಿಯೊಂದು ಹೊಲಿಗೆಯಲ್ಲೂ ಬದುಕಿನ ಅನುಭವ ಅಡಗಿದೆ. ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುವ ಕೌದಿ ನಮ್ಮ ಪೂರ್ವಜರ ಸೃಜನಶೀಲತೆಗೆ ಸಾಕ್ಷಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ವೈದ್ಯಕೀಯ ಸಂಘದ ಹುಬ್ಬಳ್ಳಿ ಅಧ್ಯಕ್ಷೆ ಡಾ. ಕಸ್ತೂರಿ ದೋಣಿಮಠ ಮಾತನಾಡಿ, ವೈದ್ಯಕೀಯ ಕ್ಷೇತ್ರದ ಒತ್ತಡದ ಬದುಕಿನ ನಡುವೆ ಕಲಾಕೃತಿಗಳನ್ನು ವೀಕ್ಷಿಸುವುದು ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ಹೇಳಿದರು.

ವಾಸ್ತುಶಿಲ್ಪಿ ಶೋಭಾ ಪಿ. ಕರೆಣ್ಣವರ, ಹಿರಿಯ ಕಲಾವಿದ ಎಫ್.ವಿ. ಚಿಕ್ಕಮಠ, ಕುಂಚಬ್ರಹ್ಮ ಅಧ್ಯಕ್ಷ ಆರ್.ಬಿ. ಗರಗ ಮಾತನಾಡಿದರು. ಮಂಜುನಾಥ ಕರಿಗಾರ, ರಾಜು ಸೋನಾವನೆ, ವಸಂತ ಬಳ್ಳಾರಿ, ಸುಶೀಲಾ ಕಮ್ಮಾರ, ಅರುಣಾ ಕಟಾವಕರ, ಡಾ. ಸುಮಾ, ದೀಪಾ ವೇರ್ಣೇಕರ, ವಿಜಯಲಕ್ಷ್ಮಿ ತಳವಾರ ಸೇರಿ ಹಲವರಿದ್ದರು. ಸುಮಂಗಲಾ ಭಟ್ ನಿರೂಪಿಸಿದರು. ಅನುಷಾ ಬೆಣಗಿ ಪ್ರಾರ್ಥಿಸಿದರು. ಆನಂದ ಬೆಣಗಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ