ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಸಮಾಜ ಉದ್ಧಾರ ಆಗಲ್ಲ. ಸಚಿವ ಸ್ಥಾನ ನೀಡಿದ ಮೇಲೆ ಏನೇನು ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಸಚಿವ, ಶಾಸಕ ಸ್ಥಾನದಿಂದ ಸಮಾಜಕ್ಕೆ ನ್ಯಾಯ ಸಿಗಲ್ಲ ಎಂದು ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಪಷ್ಟವಾಗಿ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಸಂಪುಟ ವಿಸ್ತರಣೆ ಹಿನ್ನೆಲೆ ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತಿರಾ ಎನ್ನುವ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಸಮಾಜಕ್ಕೆ ಮೀಸಲಾತಿಯಿಂದ ಮಾತ್ರವೇ ನ್ಯಾಯ ಸಿಗುತ್ತದೆ. ಹೀಗಾಗಿ ನಮ್ಮ ಸಮಾಜಕ್ಕೆ ಸಚಿವ ಸ್ಥಾನ, ಶಾಸಕ ಸ್ಥಾನಕ್ಕಿಂತ ಮೀಸಲಾತಿ ಮುಖ್ಯ. ಸಚಿವ, ಶಾಸಕರಾದವರು ಎಷ್ಟರ ಮಟ್ಟಿಗೆ ಸಮಾಜದ ಮೀಸಲಾತಿಗಾಗಿ ಹೋರಾಟ ಮಾಡಿದ್ದಾರೆ ಎಂದು ಎಲ್ಲವೂ ಗೊತ್ತಿದೆ. ಇದೇ ಕಾರಣಕ್ಕೆ ತಾವು ಮೀಸಲಾತಿ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಯಾರಿಗೆ ಸಚಿವ ಸ್ಥಾನ ಕೊಡುತ್ತಾರೋ ಕೊಡಲಿ. ಸಚಿವ ಸ್ಥಾನದಿಂದ ಯಾವುದೇ ಸಮಾಜ ಉದ್ಧಾರ ಆಗಲ್ಲ ಎಂದು ಜನರ ಭಾವನೆಗೆ ಬಂದಿದೆ. ಹಾಗಾಗಿ ಸಚಿವ ಸ್ಥಾನದ ಬಗ್ಗೆ ಜನ ತಲೆ ಕೆಡಿಸಿಕೊಳ್ಳಲ್ಲ ಎಂದ ಅವರು, ರಾಜ್ಯದಲ್ಲಿ ಎಲ್ಲೆಲ್ಲಿ ಭಕ್ತರು ಭೂಮಿ ಕೊಡುತ್ತಾರೋ ಅಲ್ಲೆಲ್ಲ ಪಂಚಮಸಾಲಿ ಪೀಠದ ಶಾಖಾ ಮಠಗಳನ್ನು ಕಟ್ಟುತ್ತೇವೆ. ಕೂಡಲಸಂಗಮ ಕ್ಷೇತ್ರದಲ್ಲಿ ಭಕ್ತರು ಭೂಮಿ ದಾನ ಮಾಡಿದರೆ ಅಲ್ಲಿಯೇ ಮೂಲ ಪಂಚಮಸಾಲಿ ಪೀಠದ ಕಟ್ಟಡ ನಿರ್ಮಾಣ ಮಾಡಲಾಗುವುದು. ಆ ಬಳಿಕ ಕೂಡಲಸಂಗಮವನ್ನು ಮೂಲ ಪೀಠವಾಗಿಟ್ಟುಕೊಂಡು ಬೇರೆ ಕಡೆಗಳಲ್ಲಿ ಭಕ್ತರು ಭೂಮಿ ನೀಡಿದಾಗ ಅಲ್ಲಿ ಶಾಖಾ ಮಠಗಳನ್ನು ಮಾಡುತ್ತೇವೆ ಎಂದು ಹೇಳಿದರು.ಈಗಾಗಲೇ ಅ.19ರಂದು ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದ ಕಾರ್ಯಾಲಯ ಆರಂಭಿಸಿದ್ದೇವೆ. ಅಂದು ಚನ್ನಮ್ಮ ಜಯಂತಿ ಹಾಗೂ ವಿಜಯೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಮುಂದಿನ ಮೂರು ತಿಂಗಳು ರಾಜ್ಯಾದ್ಯಂತ ಚನ್ನಮ್ಮ ಜಯಂತಿ ಹಾಗೂ ವಿಜಯೋತ್ಸವ ಮುಂದುವರೆಯಲಿದೆ ಎಂದು ತಿಳಿಸಿದರು.
ನಮ್ಮೆಲ್ಲರ ಒತ್ತಾಯದ ಮೇರೆಗೆ ಕೇಂದ್ರ ಸರ್ಕಾರ ಚನ್ನಮ್ಮ ಜಯಂತಿ ಆಚರಿಸಿದೆ. ಹಾಗೆಯೇ ಬಸವಣ್ಣನವರ ನಾಣ್ಯಗಳನ್ನು ಬಿಡುಗಡೆ ಮಾಡಿದಂತೆ ರಾಣಿ ಚನ್ನಮ್ಮ ಅವರ ನಾಣ್ಯ ಬಿಡುಗಡೆ ಮಾಡಬೇಕು ಎನ್ನುವುದು ನಮ್ಮ ಬಯಕೆ ಆಗಿತ್ತು. ಅದಕ್ಕೆ ಸ್ಪಂದಿಸಿದ ಕೇಂದ್ರ ಸರ್ಕಾರ ಇತ್ತೀಚಿಗೆ ₹200 ನಾಣ್ಯವನ್ನು ಬಿಡುಗಡೆ ಮಾಡಿದೆ. ಇದಕ್ಕಾಗಿ ಕನ್ನಡಿಗರು ಹಾಗೂ ಪಂಚಮಸಾಲಿ ಸಮಾಜದಿಂದ ಪ್ರಧಾನಮಂತ್ರಿಗಳನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿದರು.ಮೀಸಲಾತಿ ಕೊಡಿ ಎಂದು ಮಂಡಿಯೂರಿ ಕೂಡಲ್ಲ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ರಾಜ್ಯಾದ್ಯಂತ 2ನೇ ಹಂತದಲ್ಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಕೈಗೊಳ್ಳಲಾಗುತ್ತಿದೆ. ಹಾಲಿ ಮುಖ್ಯಮಂತ್ರಿಗಳು ನಮ್ಮ ಸಮಾಜದ ಮೇಲೆ ಲಾಠಿ ಚಾರ್ಜ್ ಮಾಡಿಸಿದರು. ಸಂವಿಧಾನಬದ್ಧವಾದ ಮೀಸಲಾತಿಯನ್ನು ನಮಗೆ ಕೊಡಲು ಆಗಲ್ಲ ಎಂದು ನಮಗೆ ಗಾಯದ ಮೇಲೆ ಬರೆ ಎಳೆದು ನೋವು ಮಾಡಿದರು. ಹೀಗಾಗಿ ನಾವು ಮತ್ತೆ ಈ ಸಿಎಂ ಎದುರು ಮೀಸಲಾತಿ ಕೊಡಿ ಎಂದು ಮಂಡಿಯೂರಿ ಕೂಡಲ್ಲ ಎಂದು ಹೇಳಿದರು.ನಮ್ಮ ಸಮಾಜದ ಮೇಲೆ ಲಾಠಿ ಚಾರ್ಜ್ ಮಾಡಿದ ಡಿಸೆಂಬರ್ 10. ಆ ಕಹಿ ಮತ್ತು ನೋವು ನುಂಗಿಕೊಂಡು ರಾಜ್ಯಾದ್ಯಂತ ಪ್ರತಿಜ್ಞಾನ ಕ್ರಾಂತಿ ಹೋರಾಟ ಆರಂಭಿಸುತ್ತಿದ್ದೇವೆ. ಪ್ರತಿ ವಿಧಾನಸಭೆ ಕ್ಷೇತ್ರಗಳ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ನಮ್ಮ ಸಮಾಜಕ್ಕೆ ಹಿಂದಿನ ಸರ್ಕಾರ ನಡೆದುಕೊಂಡ ರೀತಿ ಹಾಗೂ ಇಂದಿನ ಸರ್ಕಾರ ನಡೆದುಕೊಂಡ ರೀತಿಯನ್ನು ಜನರ ಮುಂದೆ ತೆರೆದಿಡುತ್ತೇನೆ. ಈ ಹೋರಾಟದ ಮೂಲಕ ಮುಖ್ಯಮಂತ್ರಿ ಮನಸು ಪರಿವರ್ತನೆಯಾಗಿ ಅವರೇ ನಮ್ಮನ್ನು ಕರೆದು ಮೀಸಲಾತಿ ಕೊಡುವವರೆಗೂ ನಾವು ಅವರು ಬಳಿ ಹೋಗಲ್ಲ. ನಿರಂತರ ಹೋರಾಟ ಮಾಡುತ್ತೇವೆ ಎಂದರು.