ಉಡುಪಿ: ಇಲ್ಲಿನ ಬ್ರಹ್ಮಾವರದಲ್ಲಿ ಮಹಿಳೆಯೊಬ್ಬರು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (ಪಿಎಂಇಜಿಪಿ)ದ ಅಡಿಯಲ್ಲಿ ಸಬ್ಸಿಡಿ ಲೋನ್ ತೆಗೆಸಿಕೊಡುವುದಾಗಿ ನಂಬಿಸಿ ಕೋಟಿ ರು.ಗೂ ಅಧಿಕ ಹಣ ವಂಚಿಸಿದ್ದು, ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ.
ಬಂಧಿತ ಮಹಿಳೆಯನ್ನು ಬ್ರಹ್ಮಾವರದ ನಿವಾಸಿ ಕೌಶಲ್ಯ ಎಂದು ಗುರುತಿಸಲಾಗಿದೆ. ಈಕೆ 2023ರ ನವೆಂಬರಿನಲ್ಲಿ ಬಾರಕೂರಿನ ಹೇರಾಡಿಯ ಸರಿತಾ ಲೂವಿಸ್ ಎಂಬವರಿಗೆ ಪಿಎಂಇಜಿಪಿ ಅಡಿಯಲ್ಲಿ ಉದ್ಯಮ ಆರಂಭಿಸಲು ಸಹಾಯಧನ - ಸಾಲ ಮಾಡಿಸಿಕೊಡುವುದಾಗಿ ಹೇಳಿ ನಂಬಿಸಿದ್ದರು. ನಂತರ ವಿವಿಧ ಕಾರಣಗಳನ್ನು ತಿಳಿಸಿ, ಕೆಲವು ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದಳು.
ಅದನ್ನು ನಂಬಿದ ಸರಿತಾ ಲೂವಿಸ್ ಕೌಶಲ್ಯ, ಆಕೆಯ ಗಂಡ ಸಂದೇಶ, ಸ್ನೇಹಿತರಾದ ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬವರಿಗೆ ಒಟ್ಟು 80,72,000 ರು.ಗಳನ್ನು ವರ್ಗಾಯಿಸಿದ್ದರು.ಅದೇ ರೀತಿ ಬಾರಕೂರಿನ ಅಂಜಲಿನ್ ಡಿಸಿಲ್ವಾ ಎಂಬವರಿಗೂ ಪಿಎಂಇಜಿಪಿ ಅಡಿಯಲ್ಲಿ ಸಹಾಯಧನ ಸಾಲ ಮಾಡಿಸಿಕೊಡುವುದಾಗಿ ಹೇಳಿ ನಂಬಿಸಿದ ಕೌಶಲ್ಯ ಮೇಲಿನ ವ್ಯಕ್ತಿಗಳ ಖಾತೆಗೆ 65,00,000 ರು.ಗಳನ್ನು ಪಾವತಿಸುವಂತೆ ಮಾಡಿದ್ದಳು.
ಕೌಶಲ್ಯ ಅವರಿಬ್ಬರ ಎದುರಿನಲ್ಲಿ ಬ್ಯಾಂಕ್ ಅಧಿಕಾರಿ ಎಂದು ಯಾರಿಗೋ ಕರೆ ಮಾಡಿ ಮಾತನಾಡಿ, ಒಟ್ಟು 4 ಕೋಟಿ ರು. ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿದ್ದಳು. ಹೀಗೆ ಆಕೆ ಅಬ್ಬರಿಂದಲೂ ಒಟ್ಟು 1,45,72,000 ರು. ಹಣ ಪಡೆದಿದ್ದು, ಇದೀಗ ಸಾಲವನ್ನೂ ತೆಗೆಸಿಕೊಡುತ್ತಿಲ್ಲ, ತಮ್ಮ ಹಣವನ್ನೂ ಹಿಂದಕ್ಕೆ ನೀಡುತ್ತಿಲ್ಲ ಎಂದವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಕೌಶಲ್ಯಳನ್ನು ಬಂಧಿಸಿದ್ದಾರೆ.