ಹೆಣ್ಣು ಮಕ್ಕಳ ಕೈಗೆ ಸಂಪತ್ತಿನ ಕೀಲಿ ಕೊಟ್ಟರೆ ಮನೆ ಮತ್ತು ದೇಶ ಉದ್ಧಾರ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

KannadaprabhaNewsNetwork | Published : Aug 19, 2024 12:49 AM

ಸಾರಾಂಶ

ದೇಶದ ಉದ್ಧಾರದ ಕಾಯಕದಲ್ಲಿ ಹಾಲು ಉತ್ಪಾದನೆ ಸ್ವಾವಲಂಬನೆಯನ್ನು ಕೊಟ್ಟಂತಹ ಮತ್ತು ಮನೆಯ ಆರ್ಥಿಕತೆಯ ಅಭಿವೃದ್ಧಿ ಕೊಟ್ಟಂತಹ ಕ್ಷೇತ್ರ. ಹಾಲು ಉತ್ಪಾದನೆಯ ಸಹಕಾರ ಸಂಘಗಳು ನಮ್ಮ ದೇಶಕ್ಕೆ ಬಂದ ನಂತರದಲ್ಲಿ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದಿತೆಂದರೆ ಪೋಷಕರು ತಮ್ಮ ಮಕ್ಕಳನ್ನು ಎಂತಹ ಶಾಲೆಗೆ ದಾಖಲಿಸಿ ಎಂತಹ ವಿದ್ಯೆಯನ್ನು ಕೊಡಿಸಬೇಕೆಂಬ ಸ್ವಾತಂತ್ರ್ಯ ತೆಗೆದುಕೊಳ್ಳುವ ಶಕ್ತಿ ಬಂದಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಹೆಣ್ಣು ಮಕ್ಕಳ ಕೈಗೆ ಸಂಪತ್ತಿನ ಕೀಲಿ ಕೊಟ್ಟದ್ದೇ ಆದರೆ ಮನೆಯೂ ಉದ್ಧಾರವಾಗುವ ಜೊತೆಗೆ ದೇಶವೂ ಉದ್ಧಾರವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಹೇಳಿದರು.

ತಾಲೂಕಿನ ಕಂಚನಹಳ್ಳಿಯಲ್ಲಿ ನಿರ್ಮಿಸಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮನೆಯ ಹೆಣ್ಣು ಮಕ್ಕಳು ದೇಶಕಟ್ಟುವ ಕಾಯಕಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಮಾಜಿಕ ವ್ಯವಸ್ಥೆ ಬಿಡುವುದಿಲ್ಲವೋ ಅಲ್ಲಿಯವರಗೆ ದೇಶದ ಉದ್ಧಾರವಾಗದು ಎಂದರು.

ಹೆಣ್ಣು ಮಕ್ಕಳು ವಿದ್ಯಾಭ್ಯಾಸದ ನಂತರ ಮನೆಯಲ್ಲಿ ಅಡುಗೆ ಮಾಡಿಕೊಂಡು ಕೂರದೆ ಹೊರಬಂದು ದೇಶವನ್ನು ಕಟ್ಟುವ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರೆ, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಅವರ ಸಾಮಾನ್ಯ ಜ್ಞಾನ ಶಕ್ತಿಯನ್ನು ಉಪಯೋಗಿಸಿಕೊಂಡು ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡಬೇಕೆಂದು ಹಾಲು ಮತ್ತು ರೇಷ್ಮೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ ಹೊಂದುತ್ತಿದೆ ಎಂದರು.

ದೇಶದ ಉದ್ಧಾರದ ಕಾಯಕದಲ್ಲಿ ಹಾಲು ಉತ್ಪಾದನೆ ಸ್ವಾವಲಂಬನೆಯನ್ನು ಕೊಟ್ಟಂತಹ ಮತ್ತು ಮನೆಯ ಆರ್ಥಿಕತೆಯ ಅಭಿವೃದ್ಧಿ ಕೊಟ್ಟಂತಹ ಕ್ಷೇತ್ರ. ಹಾಲು ಉತ್ಪಾದನೆಯ ಸಹಕಾರ ಸಂಘಗಳು ನಮ್ಮ ದೇಶಕ್ಕೆ ಬಂದ ನಂತರದಲ್ಲಿ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದಿತೆಂದರೆ ಪೋಷಕರು ತಮ್ಮ ಮಕ್ಕಳನ್ನು ಎಂತಹ ಶಾಲೆಗೆ ದಾಖಲಿಸಿ ಎಂತಹ ವಿದ್ಯೆಯನ್ನು ಕೊಡಿಸಬೇಕೆಂಬ ಸ್ವಾತಂತ್ರ್ಯ ತೆಗೆದುಕೊಳ್ಳುವ ಶಕ್ತಿ ಬಂದಿದೆ. ಹಾಗಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಕಳೆದ 30 ವರ್ಷಗಳ ಹಿಂದೆ ಚೀನಾ ಮತ್ತು ನಮ್ಮ ದೇಶ ಒಂದೇ ಮಟ್ಟದಲ್ಲಿದ್ದೆವು. ಕೇವಲ 30 ವರ್ಷದಲ್ಲಿ ಚೀನಾ ದೇಶ ಇಷ್ಟೊಂದು ಪ್ರಗತಿಯಾಗಿದೆ ಎಂದರೆ ಆ ದೇಶದಲ್ಲಿರುವ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಯ ಕಡೆಗೆ ತೊಡಗಿಸಿರುವುದು ಹಾಗೂ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಆವಿಷ್ಕಾರದ ಸ್ಥರಗಳನ್ನು ಅಪ್ಪಿಕೊಂಡು ಒಪ್ಪಿಕೊಂಡು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಎಚ್ಚೆತ್ತು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಲು ತೊಡಗಿರುವುದರಿಂದ ಆ ದೇಶ ಅಭಿವೃದ್ಧಿಯಾಗುತ್ತಿದೆ ಎಂದರು.

ಗ್ರಾಮದಲ್ಲಿರುವ ಶ್ರೀ ಲಕ್ಷ್ಮಿದೇವಿಗೂ ಆದಿಚುಂಚನಗಿರಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಈ ಹಿನ್ನಲೆಯಲ್ಲಿ ದೇವಸ್ಥಾನದ ಮುಂಭಾಗದ ಲಕ್ಷ್ಮಿದೇವಿ ಕಲ್ಯಾಣಿಯನ್ನು ಶ್ರೀ ಕ್ಷೇತ್ರದಲ್ಲಿರುವ ಬಿಂಧು ಸರೋವರದ ಮಾದರಿಯಲ್ಲಿ ಬಹಳ ಸುಂದರವಾಗಿ ಅಭಿವೃದ್ಧಿ ಪಡಿಸುವ ಆಶಯ ತಮ್ಮದಾಗಿದೆ ಎಂದರು.

ಇದಕ್ಕೆ ಪೂರಕವಾಗಿ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಗ್ರಾಮದ ಮುಖ್ಯರಸ್ತೆಯನ್ನು ಅಗಲೀಕರಣ ಮಾಡುವ ವೇಳೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಹೈನುಗಾರಿಕೆ ಮತ್ತು ರೇಷ್ಮೆ ಗ್ರಾಮೀಣ ಪ್ರದೇಶದ ರೈತರಿಗೆ ಬಹಳಷ್ಟು ಅನುಕೂಲ ಮಾಡಿಕೊಡುತ್ತದೆ. ಮಹಿಳೆಯರು ಕುಟುಂಬ ನಿರ್ವಹಿಸಲು ಇದು ಸಹಕಾರಿಯಾಗುತ್ತದೆ. ತೆಂಗು, ರಾಗಿ, ತರಕಾರಿ ಬೆಳೆಯುವ ಜೊತೆಗೆ ರೈತರು ಹೈನುಗಾರಿಕೆಯನ್ನು ಅವಲಂಬಿಸಿಕೊಳ್ಳಬೇಕು ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉತ್ತಮವಾಗಿ ಮುನ್ನಡೆಸುವ ಜೊತೆಗೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕ್ರಮವಹಿಸಬೇಕು. ಇದಕ್ಕೆ ಪೂರಕವಾಗಿ ಸ್ಥಳೀಯ ಜನರು ಸಂಘಕ್ಕೆ ಗುಣಮಟ್ಟದ ಹಾಲು ಪೂರೈಸಬೇಕು. ಗ್ರಾಮದ ರಸ್ತೆ ಮತ್ತು ಕಲ್ಯಾಣಿಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದರು.

ಇದಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಶ್ರೀಗಳು ಹಾಗೂ ಸಚಿವರು ಶ್ರೀ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀಲಕ್ಷ್ಮೀದೇವಿ ಕಲ್ಯಾಣಿಗೆ ಬಾಗಿನ ಅರ್ಪಿಸಿದರು.

ಆದಿಚುಂಚನಗಿರಿಯ ಹಾಸನ ಶಾಖಾ ಮಠದ ಶಂಭೂನಾಥಸ್ವಾಮೀಜಿ, ಮನ್ಮುಲ್ ಅಧ್ಯಕ್ಷ ಬೋರೇಗೌಡ, ನಿರ್ದೇಶಕ ಲಕ್ಷ್ಮೀನಾರಾಯಣ, ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್, ಹಾಸನ ಜಿಲ್ಲಾ ಹಾಲು ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಪಾಂಡವಪುರ ಉಪವಿಭಾಗಾಧಿಕಾರಿ ಎಲ್.ನಂದೀಶ್, ಗ್ರಾಮದ ಎಂಪಿಸಿಎಸ್ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಕಲಾವತಿ, ತಹಶೀಲ್ದಾರ್ ಜಿ.ಎಂ.ಸೋಮಶೇಖರ್, ತಾಪಂ ಇಓ ಸತೀಶ್, ಸಿಪಿಐ ನಿರಂಜನ್, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಸಮಾಜ ಸೇವಕ ಗೌರೀಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಸೇರಿದಂತೆ ಎಂಪಿಸಿಎಸ್ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಗ್ರಾಮಸ್ಥರು ಇದ್ದರು.

Share this article